ಬೆಂಗಳೂರು:ರಾಜ್ಯದ ಕರಾವಳಿ ಭಾಗದಲ್ಲಿ ಮಾತ್ರ ಮಳೆ ಮುಂದಿನ ಐದು ದಿನ ಮುಂದುವರೆಯಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಜುಲೈ 11ರಿಂದ 15ರವರೆಗೆ, ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗದಲ್ಲಿ ಜುಲೈ 15ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ರಾಜ್ಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಭಾನುವಾರ ಕೊಪ್ಪಳ, ಬೆಳಗಾವಿ, ಚಿಕ್ಕಮಗಳೂರು, ಹಾವೇರಿ, ಕೊಪ್ಪಳ, ಮೈಸೂರಿನ ವಿವಿಧ ತಾಲೂಕುಗಳಲ್ಲಿ ವರ್ಷಧಾರೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಯಾದಗಿರಿ, ವಿಜಯಪುರ, ರಾಯಚೂರು, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆ, ವಿಜಯನಗರ, ತುಮಕೂರು, ಮೈಸೂರು, ಕೋಲಾರ, ಮಂಡ್ಯ, ಹಾಸನ ಹಾಗೂ ದಾವಣಗೆರೆಯಲ್ಲಿ ಮುಂದಿನ ನಾಲ್ಕು ದಿನ ಸಾಧಾರಣ ಮಳೆ ಸುರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಕರಾವಳಿಯಲ್ಲಿ ಮಾತ್ರ ಮಳೆ ಆರ್ಭಟ: ರಾಜ್ಯದ ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆಯಾಗುತ್ತಿದೆ. ರಾಜ್ಯದ ಒಳನಾಡಿನಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುತ್ತಿದ್ದರೂ ಮಳೆ ಕೊರತೆ ನಿವಾರಣೆಯಾಗಿಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಕೆಲವು ಜಲಾಶಯಗಳ ಒಳ ಹರಿವು ಮಾತ್ರ ಸ್ವಲ್ಪ ಹೆಚ್ಚಾಗಿದೆ.
ಬಿತ್ತನೆಗೆ ನಿರ್ಮಾಣವಾಗದ ಪೂರಕ ವಾತಾವರಣ:ಮಲೆನಾಡಿನಲ್ಲಿ ಒಳ್ಳೆಯ ಮಳೆಯಾಗುವ ನಿರೀಕ್ಷೆಗಳಿದ್ದು, ಒಳನಾಡಿನಲ್ಲಿ ಹಗರದಿಂದ ಸಾಧಾರಣ ಮಳೆ ಮುಂದುವರೆಯಲಿದೆ. ಭಾಗಶಃ ಮೋಡ ಕವಿದ ವಾತಾವರಣವಿದ್ದು, ಇನ್ನೊಂದು ವಾರ ಚದುರಿದಂತೆ ಸಾಧಾರಣ ಮಳೆ ಮುಂದುವರೆಯುವ ಲಕ್ಷಣಗಳಿವೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಒಳನಾಡಿನ ಹಲವು ಕಡೆಗಳಲ್ಲಿ ಬಿತ್ತನೆಗೆ ಪೂರಕವಾದ ವಾತಾವರಣ ನಿರ್ಮಾಣವಾಗಿಲ್ಲ. ರೈತರ ಆತಂಕ ನಿವಾರಣೆಯಾಗುವ ರೀತಿಯಲ್ಲಿ ಮಳೆಯಾಗುತ್ತಿಲ್ಲ.
ಜಲಾಶಯಗಳಿಗೆ ಹೆಚ್ಚಳವಾಗದ ಒಳ ಹರಿವು:ಮುಂದಿನ ಹತ್ತು ದಿನಗಳ ಕಾಲ ಒಳನಾಡಿನಲ್ಲಿ 20ರಿಂದ 30 ಮಿ.ಮೀ.ವರೆಗೂ ಹಗುರದಿಂದ ಸಾಧಾರಣ ವರ್ಷಧಾರೆ ಮುಂದುವರೆಯಲಿದೆ. ಕರಾವಳಿಯಲ್ಲಿ ಭಾರಿ ಮಳೆಯಾಗುತ್ತಿದೆ. ಮಲೆನಾಡಿನಲ್ಲಿ ಅದರ ತೀವ್ರತೆ ಅಷ್ಟಾಗಿ ಕಂಡು ಬರುತ್ತಿಲ್ಲ. ಇದರಿಂದ ಕಾವೇರಿ, ಕೃಷ್ಣಾ ಹಾಗೂ ತುಂಗಭದ್ರಾ ನದಿ ಪಾತ್ರದ ಜಲಾಶಯಗಳಿಗೆ ಸ್ವಲ್ಪ ಒಳ ಹರಿವು ಹೆಚ್ಚಾಗಿದ್ದರೂ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿಲ್ಲ. ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಕೊರತೆ ಇದೆ. ಬಿತ್ತನೆ ಮಾಡಲು ರೈತರು ಹಿಂದೆ ಮುಂದೆ ನೋಡುವಂತಾಗಿದೆ. ಮುಂದಿನ ದಿನಗಳಲ್ಲೂ ಉತ್ತಮ ಮಳೆಯಾಗುವ ಆಶಾಭಾವನೆ ಕಂಡುಬರುತ್ತಿಲ್ಲ.
ಜುಲೈ 1ರಿಂದ ಹೆಚ್ಚು ಮಳೆ:ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಜುಲೈ 1ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ವಾಡಿಕೆಗಿಂತ ಶೇಕಡಾ 34ರಷ್ಟು ಅಧಿಕ ಮಳೆಯಾಗಿದೆ. ಆದರೂ, ಕೋಲಾರ ಶೇಕಡಾ 32, ಮಂಡ್ಯ 36, ಹಾಸನ ಶೇಕಡಾ 30ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.
ಇದನ್ನೂ ಓದಿ:Heavy Rain.. ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ.. ಭೂಕುಸಿತದಿಂದ ನೂರಾರು ರಸ್ತೆ ಬಂದ್.. ಸಾವಿನ ಸಂಖ್ಯೆ 48ಕ್ಕೆ ಏರಿಕೆ