ಕರ್ನಾಟಕ

karnataka

ETV Bharat / state

‌ಆಗಸ್ಟ್ 23 ರಿಂದ ಪಿಯು ತರಗತಿ ಆರಂಭ ; ಎಸ್ಒಪಿ‌ ಜಾರಿ - Karnataka puc classes

ಎಲ್ಲಾ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸುವ ಮುನ್ನ ವಿದ್ಯಾರ್ಥಿಗಳು ಸಾಮಾನ್ಯವಾಗಿ ಬಳಸುವ ಬೋಧನಾ ಕೊಠಡಿ, ಪ್ರಾಯೋಗಾಲಯಗಳು ಹಾಗೂ ಇನ್ನಿತರ ಪ್ರದೇಶಗಳನ್ನು 1% ಸೋಡಿಯಂ ಹೈಪೋಕ್ಲೋರೈಟ್ ದ್ರಾವಣದಿಂದ ಸಾನಿಟೈಸ್ ಮಾಡಬೇಕು..

karnataka-puc-classes-reopen-from-august-23
ಪಿಯು ತರಗತಿ ಆರಂಭ

By

Published : Aug 18, 2021, 9:34 PM IST

ಬೆಂಗಳೂರು :ರಾಜ್ಯದಲ್ಲಿ ಕೊರೊನಾ ಕಾರಣಕ್ಕೆ ಶಾಲಾ-ಕಾಲೇಜು ಆರಂಭಕ್ಕೆ ಹೊಡೆತ ಬಿತ್ತು.‌ ಇದರಿಂದಾಗಿ 2021-22ನೇ ಸಾಲಿನ ಶೈಕ್ಷಣಿಕ ಅವಧಿಯ ಭೌತಿಕ ತರಗತಿಗಳು ಈವರೆಗೆ ಪ್ರಾರಂಭವಾಗಿಲ್ಲ.

ಇದೀಗ ನಿಧಾನವಾಗಿ 2ನೇ ಅಲೆ ತೀವ್ರತೆ ಕಡಿಮೆ ಆದ ಪರಿಣಾಮ, ಆಗಸ್ಟ್ 23ರಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯು ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆ ಕೋವಿಡ್ ಮಾರ್ಗಸೂಚಿಗಳನ್ನೊಳಗೊಂಡ SOPಯನ್ನು ಸಿದ್ಧಪಡಿಸಿದೆ. ಅದರಂತೆ ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ.

ತರಗತಿಗಳನ್ನು ನಡೆಸುವ ವಿಧಾನ ಹೇಗಿರಬೇಕು?

  • ರಾಜ್ಯದಲ್ಲಿ ಪಿಯುಸಿ ತರಗತಿಗಳನ್ನು ಶೇ.2ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಆಗಸ್ಟ್ 23ರಿಂದ ಪ್ರಾರಂಭಿಸಬಹುದು.
  • ಪಾಸಿಟಿವಿಟಿ ದರ ಶೇ.2ಕ್ಕಿಂತ ಹೆಚ್ಚು ಇರುವ ಜಿಲ್ಲೆಗಳಲ್ಲಿ ಸರ್ಕಾರದ ಮುಂದಿನ ಆದೇಶದಂತೆ ಕ್ರಮವಹಿಸಲು ಸೂಚನೆ.
  • ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳನ್ನು ಏಕಕಾಲದಲ್ಲಿ ನಡೆಸುವುದು. ಆದರೆ, ಪ್ರತಿ ತರಗತಿಯ ಪ್ರತಿಶತ 50ರಷ್ಟು ವಿದ್ಯಾರ್ಥಿಗಳು ಮೊದಲ ಮೂರು ದಿನಗಳು (ಸೋಮವಾರ, ಮಂಗಳವಾರ ಹಾಗೂ ಬುಧವಾರ) ಭೌತಿಕ ತರಗತಿಗಳಿಗೆ ಹಾಜರಾದರೆ, ಇನ್ನುಳಿದ 50ರಷ್ಟು ವಿದ್ಯಾರ್ಥಿಗಳು ಮನೆಯಲ್ಲೇ ಆನ್‌ಲೈನ್‌ ತರಗತಿಗೆ ಹಾಜರಾಗಬೇಕು.
  • ಅದೇ ರೀತಿ, ಮುಂದಿನ ಮೂರು ದಿನಗಳು (ಗುರುವಾರ, ಶುಕ್ರವಾರ ಹಾಗೂ ಶನಿವಾರ) ಆನ್‌ಲೈನ್ ತರಗತಿಗೆ ಹಾಜರಾದ ವಿದ್ಯಾರ್ಥಿಗಳು ಭೌತಿಕ ತರಗತಿಗೆ, ಭೌತಿಕ ತರಗತಿಗೆ ಹಾಜರಾದ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗೆ ಹಾಜರಾಗಲು ತಿಳಿಸಿದೆ.
  • ಯಾವುದೇ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 100ಕ್ಕಿಂತ ಕಡಿಮೆಯಿದ್ದು, ವಿಶಾಲವಾದ ಕೊಠಡಿಗಳು ಲಭ್ಯವಿದ್ದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನು ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ನಡೆಸಬಹುದು.
  • ವಿದ್ಯಾರ್ಥಿಗಳ ಹಾಜರಾತಿಯನ್ನು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಕಡ್ಡಾಯಗೊಳಿಸುವಂತೆ ಸೂಚಿಸಿದೆ.

    ಉಪನ್ಯಾಸಕರು ಮತ್ತು ಕಾಲೇಜಿನ ಸಿಬ್ಬಂದಿಗೆ ವ್ಯಾಕ್ಸಿನೇಷನ್‌ ಕಡ್ಡಾಯ
    ಪ್ರಥಮ ಆದ್ಯತೆಯಾಗಿ ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ವ್ಯಾಕ್ಸಿನೇಷನ್ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.
    ಈ ಸಂಬಂಧ ರಾಜ್ಯದ ಎಲ್ಲಾ ಉಪ ನಿರ್ದೇಶಕರು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಗೆ ಕಡ್ಡಾಯವಾಗಿ ವ್ಯಾಕ್ಸಿನೇಷನ್ (ಕನಿಷ್ಠ 1 ಲಸಿಕೆ) ಪಡೆದುಕೊಳ್ಳುವ ಬಗ್ಗೆ ಸೂಕ್ತ ಕ್ರಮವಹಿಸಲು ಸೂಚಿಸಲಾಗಿದೆ.

    ವಿದ್ಯಾರ್ಥಿಗಳಿಗೆ ಏನು ಸೂಚನೆ?
  • ವಿದ್ಯಾರ್ಥಿಗಳು ತರಗತಿ ಮತ್ತು ಕಾಲೇಜು ಆವರಣದಲ್ಲಿ ಗುಂಪುಗೂಡಬಾರದು.
  • ಕನಿಷ್ಟ 06 ಅಡಿಗಳ ಭೌತಿಕ ಅಂತರದ ನಿಯಮವನ್ನು ಪಾಲಿಸುವುದು.
  • ಮುಖ ಕವಚ/ಮಾಸ್ಕ್‌ಗಳನ್ನು ಕಡ್ಡಾಯವಾಗಿ ಬಳಕೆ ಮಾಡುವುದು.
  • ಪದೇಪದೆ ಕೈಗಳನ್ನು ಸೋಪಿನಿಂದ ತೊಳೆಯಬೇಕು (ಪ್ರತಿಸಲ ಕೈ ತೊಳೆಯುವಾಗ ಕನಿಷ್ಟ 40 ರಿಂದ 60 ಸೆಕೆಂಡ್‌ಗಳು), ಅಲ್ಲದೆ ಕೈಗಳಿಗೆ ಆಗಾಗ ಸ್ಯಾನಿಟೈಸರ್ ಬಳಸಬೇಕು.
  • ಕೆಮ್ಮುವಾಗ ಹಾಗೂ ಸೀನುವಾಗ ಕಡ್ಡಾಯವಾಗಿ ಮುಖಕ್ಕೆ ಕರವಸ್ತ್ರ ಅಥವಾ ಟಿಶ್ಯು ಪೇಪರ್ ಬಳಸಬೇಕು ಮತ್ತು ಅವುಗಳನ್ನು ಸೂಕ್ತ ವಿಧಾನದಲ್ಲಿ ನಾಶಗೊಳಿಸುವುದು.
  • ಕೆಮ್ಮುವಾಗ, ಸೀನುವಾಗ, ಮೊಣಕೈಯನ್ನು ಅಡ್ಡ ಹಿಡಿಯುವುದು ಉತ್ತಮ.
  • ಎಲ್ಲೆಂದರಲ್ಲಿ ಉಗುಳುವುದನ್ನು ಕಡ್ಡಾಯವಾಗಿ ನಿಷೇಧಿಸುವುದು ಹಾಗೂ ಎಲ್ಲರೂ ಅದನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಲಾಗಿದೆ.

ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಮತ್ತು ಅವರ ಪೋಷಕರ ಸಮ್ಮತಿ ಪತ್ರ ನೀಡಿದಲ್ಲಿ ಮಾತ್ರ ಅವರು ಭೌತಿಕ ತರಗತಿಗಳಿಗೆ ಹಾಜರಾಗುವುದು. ಅಲ್ಲದೇ ಪೋಷಕರಿಂದ ಅವರ ಮಕ್ಕಳಿಗೆ ಕೋವಿಡ್-19 ಯಾವುದೇ ಗುಣಲಕ್ಷಣಗಳು ಇರುವುದಿಲ್ಲ ಎಂದು ದೃಢೀಕರಣ ಪತ್ರ ಪಡೆಯುವುದು ಕಡ್ಡಾಯ.

ಕಾಲೇಜುಗಳ ಆರಂಭಕ್ಕೂ ಮುನ್ನ ಸ್ಯಾನಿಟೈಸ್

ಎಲ್ಲಾ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸುವ ಮುನ್ನ ವಿದ್ಯಾರ್ಥಿಗಳು ಸಾಮಾನ್ಯವಾಗಿ ಬಳಸುವ ಬೋಧನಾ ಕೊಠಡಿ, ಪ್ರಾಯೋಗಾಲಯಗಳು ಹಾಗೂ ಇನ್ನಿತರ ಪ್ರದೇಶಗಳನ್ನು 1% ಸೋಡಿಯಂ ಹೈಪೋಕ್ಲೋರೈಟ್ ದ್ರಾವಣದಿಂದ ಸಾನಿಟೈಸ್ ಮಾಡಬೇಕು.

ಕೆಲ ಕಾಲೇಜುಗಳನ್ನು ಕೋವಿಡ್-19 ಕಂಟೈನ್​ಮೆಂಟ್​ ಕೊಠಡಿಯಾಗಿ ಬಳಕೆ ಮಾಡಲಾಗಿದೆ. ಅಂತಹ ಶಾಲಾ-ಕಾಲೇಜುಗಳನ್ನು ಸಂಪೂರ್ಣ ಸ್ಯಾನಿಟೈಸ್ ಮಾಡುವುದು ಮತ್ತು ಒಂದಕ್ಕಿಂತ ಹೆಚ್ಚು ಬಾರಿ ಸಿಂಪಡಿಸುವಂತೆ ತಿಳಿಸಿದೆ.

ಓದಿ:SSLC ಪೂರಕ ಪರೀಕ್ಷೆಗೆ ಡೇಟ್ ಫಿಕ್ಸ್- ಸೆಪ್ಟೆಂಬರ್ 27- 29 ರಂದು ನಿಗದಿ..

ABOUT THE AUTHOR

...view details