ಬೆಂಗಳೂರು: ಕೃಷಿಕ ಸಮಾಜ ಜಿಲ್ಲಾ ಮಟ್ಟದಲ್ಲಿ ರೈತರ ಅಭ್ಯುದಯಕ್ಕೆ ನಿರಂತರವಾಗಿ ಶ್ರಮಿಸಬೇಕು ಎಂದು ಕೃಷಿ ಸಚಿವರಾದ ಎನ್ ಚೆಲುವರಾಯಸ್ವಾಮಿ ತಿಳಿಸಿದರು. ನಗರದ ಕೃಷಿ ಭವನದಲ್ಲಿ ಇಂದು ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ರಾಜ್ಯ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೃಷಿಕ ಸಮಾಜ ರೈತರ ಪರವಾದ ಸಂಸ್ಥೆ. ಹಾಗಾಗಿ ಅದರ ಮೂಲ ಆಶಯಕ್ಕೆ ತಕ್ಕಂತೆ ಕಾರ್ಯಕಾರಿ ಸಮಿತಿ ಕೆಲಸ ಮಾಡಬೇಕು. ಕೃಷಿಕ ಸಮಾಜದ ಸದಸ್ಯರ ನಡುವೆ ಪರಸ್ಪರ ಸಹಕಾರ ಸಮನ್ವಯ ಅಗತ್ಯ. ಯೋಜಿತ ಹಾಗೂ ರಚನಾತ್ಮಕವಾಗಿ ಕೆಲಸ ಮಾಡಿ ಎಂದು ಸಚಿವರು ಸಲಹೆ ನೀಡಿದರು.
ಕೃಷಿಕ ಸಮಾಜದ ಆಡಳಿತಾತ್ಮಕ ಸುಧಾರಣೆಗಾಗಿ ತಜ್ಞರ ಅಭಿಪ್ರಾಯ ಪಡೆದು ಸೇವಾ ನಿಯಮಗಳನ್ನು ಸರಿಯಾಗಿ ರೂಪಿಸಿ ಜಾರಿಗೊಳಿಸಬೇಕಿದೆ. ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ಕೃಷಿಕ ಸಮಾಜದ ಚುನಾವಣೆ ನಿರ್ಧಾರವಾಗಲಿದೆ. ಅದಕ್ಕೆ ಎಲ್ಲ ಸದಸ್ಯರು ಸಹಕರಿಸಬೇಕು. ರೈತರಿಗೆ ಕೃಷಿ ಭಾಗ್ಯ ಯೋಜನೆಯಡಿ ನೀಡಲಾಗುತ್ತಿರುವ ಟಾರ್ಪಲ್ಗಳ ಗುಣಮಟ್ಟ ವೃದ್ದಿಗೆ ಕ್ರಮ ವಹಿಸಲಾಗುವುದು. ಕೃಷಿಕ ಸಮಾಜಗಳ ಬಲ ವರ್ಧನೆಗೆ ಕೇಂದ್ರದಿಂದಲೂ ಹೆಚ್ಚಿನ ನೆರವು ಒದಿಗಿಸಲು ಪ್ರಸ್ತಾವನೆ ಕಳಿಸಲಾಗುವುದು ಎಂದು ಅವರು ತಿಳಿಸಿದರು.
ರೈತರಿಗೆ 2500 ಕೋಟಿ ರೂ. ವರಗೆ ವಿಮೆ ಹಣ ದೊರೆಯುವ ಸಾಧ್ಯತೆ ಇದೆ. ಈಗಾಗಲೇ ಪ್ರಿವೆಂಟಿವ್ ಸೋಯಿಂಗ್ ಹಾಗೂ ಮಧ್ಯಂತರ ಪರಿಹಾರ ಸೇರಿದಂತೆ 230 ಕೋಟಿ ರೂ. ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ. ಕೇಂದ್ರದಿಂದಲೂ ಬರ ಪರಿಹಾರಕ್ಕೆ 18 ಸಾವಿರ ಕೋಟಿ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ, ಇದುವರೆಗೂ ಯಾವುದೇ ಅನುದಾನ ಬಂದಿಲ್ಲ ಎಂದು ಸಚಿವರು ಹೇಳಿದರು.