ಬೆಂಗಳೂರು:ರಾಜ್ಯ ನೆರೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಬರಪೀಡಿತ ಪ್ರದೇಶಗಳನ್ನು ಗುರುತಿಸಿ ಪರಿಹಾರ ಒದಗಿಸಬೇಕು ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ 6 ಸಾವಿರ ಕೋಟಿ ನಷ್ಟ ಅಂತ ಹೇಳಿದ್ದಾರೆ. ಅದ್ಯಾವ ಅಂದಾಜಿನ ಮೇಲೆ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಆದರೆ ದೊಡ್ಡ ಪ್ರಮಾಣದ ವಿಕೋಪ ಇದಾಗಿದೆ. 50 ವರ್ಷಗಳಿಂದ ಇಂತ ವಿಕೋಪ ಆಗಿರಲಿಲ್ಲ. ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಬಿಜೆಪಿಯವರದ್ದೇ ಕೇಂದ್ರ ಸರ್ಕಾರವಿದೆ. ಹೀಗಾಗಿ ಸಿಎಂ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು. ಕೇಂದ್ರ ಕೂಡ ಇದನ್ನ ಅರ್ಥ ಮಾಡಿಕೊಳ್ಳಬೇಕು. ನೋಡಿಯೂ ಕಣ್ಮುಚ್ಚಿ ಕುಳಿತಿರೋದು ಸರಿಯಲ್ಲ. ರಾಜ್ಯಕ್ಕೆ ಅನ್ಯಾಯವನ್ನ ಕೇಂದ್ರ ಎಸಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕೆಬಿಜೆ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಅರ್ಧಭಾಗ ನೆರೆ, ಇನ್ನರ್ಧ ಭಾಗ ಬರದಿಂದ ತತ್ತರಿಸಿದೆ ಕೆಪಿಸಿಸಿ ವತಿಯಿಂದ ನಾವು ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ದೃಷ್ಟಿಯಿಂದ ಒಂದು ಸಮಿತಿ ಮಾಡಿದ್ದೇವೆ. ನಾವುಗಳು ದೇಣಿಗೆ ಸಂಗ್ರಹ ಮಾಡಿ ಸಂತ್ರಸ್ತರಿಗೆ ತಲುಪಿಸುವ ಕೆಲಸ ಮಾಡುತ್ತೇವೆ. ಬೆಂಗಳೂರಿನ ಎಲ್ಲಾ ಕಾಂಗ್ರೆಸ್ ನಾಯಕರು, ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿ ಸಂತ್ರಸ್ತರಿಗೆ ನೆರವಾಗಲು ನಿರ್ಧಾರ ಮಾಡಿದ್ದೇವೆ. ಇನ್ನು 10 ದಿನಗಳಲ್ಲಿ ಹಣ ಸಂಗ್ರಹ ಮಾಡಿ ಸಂತ್ರಸ್ತರಿಗೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದರು.
ವಾಡಿಕೆಗಿಂತ ಕಡಿಮೆ ಮಳೆ:
ಕೆಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಿದೆ. ಹಾಗೆ ರಾಜ್ಯದಲ್ಲಿ ಕೆಲವು ಕಡೆ ಕುಡಿಯುವ ನೀರಿಗೂ ತತ್ತರಿಸುತ್ತಿದ್ದಾರೆ. ಹಲವು ಜಿಲ್ಲೆಗಳಲ್ಲಿ ಮಳೆಗಾಲ ಆರಂಭವಾದ ಮೂರು ತಿಂಗಳ ನಂತರವೂ ಶೇ. 30ರಷ್ಟು ಮಳೆ ಆಗಿಲ್ಲ. ರಾಯಚೂರು ಜಿಲ್ಲೆ ಒಂದು ಕಡೆ ಕೃಷ್ಣಾ ನದಿ ನೀರಿನ ಪ್ರವಾಹದಿಂದ ಸಮಸ್ಯೆಗೆ ಒಳಗಾಗಿದ್ದರೆ ಇತರೆಡೆ ಬರಗಾಲದಿಂದ ತತ್ತರಿಸಿದೆ. ಇಂತಹ ಜಿಲ್ಲೆಗಳು ರಾಜ್ಯದಲ್ಲಿ ಹಲವಾರು ಕಂಡುಬರುತ್ತಿವೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿತ್ರದುರ್ಗ, ತುಮಕೂರು ಮತ್ತಿತರ ಕಡೆ ಮಳೆ ಆಗುತ್ತಿಲ್ಲ. ಈ ಕೂಡಲೇ ಅಂತಹ ಭಾಗಗಳಲ್ಲು ಪರಿಹಾರ ಘೋಷಣೆ ಮಾಡಬೇಕು. ರಾಜ್ಯದಲ್ಲಿ ಇಷ್ಟೊಂದು ಸಮಸ್ಯೆ ಇದ್ದರೂ ಬಿಜೆಪಿ ಅವರು ಕನಿಷ್ಠ ಸಚಿವ ಸಂಪುಟ ರಚನೆ ಮಾಡಿಲ್ಲ. ಇದರಿಂದ ರಾಜ್ಯದ ಜನರಿಗೆ ದ್ರೋಹ ಮಾಡುತ್ತಿದ್ದಾರೆ ಎಂದರು.