ಬೆಂಗಳೂರು: ರಾಜ್ಯ ಸರ್ಕಾರ ಬಹುನಿರೀಕ್ಷಿತ ನೂತನ ಕೈಗಾರಿಕಾ ನೀತಿ 2020-25ರನ್ನು ಜಾರಿಗೊಳಿಸಿದೆ. ವಿವಿಧ ಕೈಗಾರಿಕೋದ್ಯಮಿಗಳು,ಇಲಾಖೆಗಳು, ಉದ್ಯಮಿಗಳ ಜೊತೆ ವಿಸ್ತೃತ ಪರಾಮರ್ಶೆ, ಸಮಾಲೋಚನೆ ನಡೆಸಿದ ಬಳಿಕ ರಾಜ್ಯ ಸರ್ಕಾರ ಮುಂದಿನ 5 ವರ್ಷಕ್ಕೆ ರಾಜ್ಯದಲ್ಲಿ ಹೊಸ ಕೈಗಾರಿಕಾ ನೀತಿಯನ್ನು ಜಾರಿಗೊಳಿಸಿದೆ.
ಪ್ರತಿ ಐದು ವರ್ಷಕ್ಕೊಮ್ಮೆ ರೂಪಿಸಲಾಗುವ ಕೈಗಾರಿಕಾ ನೀತಿ ಮೂಲಕ ರಾಜ್ಯದಲ್ಲಿ ಕೈಗಾರಿಕೆಗಳಿಗೆ ಪೂರಕ ವಾತಾವರಣವನ್ನು ಸೃಷ್ಟಿಸಲಾಗುತ್ತದೆ. ಅದಕ್ಕಾಗಿ ಭೂಮಿ ಹಾಗೂ ಕಾರ್ಮಿಕರು ಸುಲಭವಾಗಿ ಲಭಿಸುವ ನಿಟ್ಟಿನಲ್ಲಿ ಸಾಕಷ್ಟು ಸುಧಾರಣೆಯನ್ನು ತರಲಾಗುತ್ತದೆ.
ಕರ್ನಾಟಕ ನೂತನ ಕೈಗಾರಿಕಾ ನೀತಿ 2020-25 ಜಾರಿ ಹೊಸ ಕೈಗಾರಿಕಾ ನೀತಿಯ ವಿಶೇಷತೆ ಏನು?
ಆಧುನಿಕ ಉತ್ಪಾದನೆ,ಸಂಶೋಧನೆ ಮತ್ತು ಅಭಿವೃದ್ಧಿ, ನಾವೀನ್ಯತೆಯಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಲು ಮತ್ತು ರಾಜ್ಯದ ಸುಸ್ಥಿರ, ಸಮತೋಲಿತ, ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ನೀತಿಯನ್ನು ರೂಪಿಸಲಾಗಿದೆ. ಸುಮಾರು 5 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಆಕರ್ಷಿಸುವ ಗುರಿ ಹೊಂದಲಾಗಿದೆ. ಆ ಮೂಲಕ ಸುಮಾರು 20 ಲಕ್ಷ ಉದ್ಯೋಗ ಸೃಷ್ಟಿಸುವ ಉದ್ದೇಶ ವಿದೆ. ಜೊತೆಗೆ ಮುಂದಿನ ಐದು ವರ್ಷದಲ್ಲಿ ಸರಕುಗಳ ರಫ್ತಿನಲ್ಲಿ ಮೂರನೇ ಸ್ಥಾನ ಗಿಟ್ಟಿಸುವ ಗುರಿಯನ್ನೂ ಹೊಂದಲಾಗಿದೆ. ವಾರ್ಷಿಕ ಶೇ.10ರಷ್ಟು ಕೈಗಾರಿಕಾ ಪ್ರಗತಿ ಸಾಧಿಸುವ ಉದ್ದೇಶ ಹೊಂದಲಾಗಿದೆ.
ಕರ್ನಾಟಕ ನೂತನ ಕೈಗಾರಿಕಾ ನೀತಿ 2020-25 ಜಾರಿ ನಾವೀನ್ಯತೆ ಮತ್ತು ತಂತ್ರಜ್ಞಾನ ಅಳವಡಿಕೆಯ ವಾತಾವರಣ ಸೃಷ್ಟಿಸುವುದನ್ನು ಉದ್ದೇಶಿಸಲಾಗಿದೆ. ಕರ್ನಾಟಕ ಕೈಗಾರಿಕೆಗಳ ಶಕ್ತಿಯನ್ನು ವೃದ್ಧಿಸಿ, ಕೈಗಾರಿಕಾ ಕ್ಷೇತ್ರವನ್ನು ರಾಜ್ಯದ ಪ್ರಮುಖ ಅಭಿವೃದ್ಧಿಯ ಇಂಜಿನ್ನಾಗಿ ಮಾಡುವ ಮೂಲಕ ಅತ್ಯಾಧುನಿಕ ಮೌಲ್ಯವನ್ನು ಮತ್ತು ಉದ್ಯೋಗ ಕಲ್ಪಿಸುವುದು ಹೊಸ ಕರ್ನಾಟಕ ಕೈಗಾರಿಕಾ ನೀತಿಯ ಮೂಲ ಆದ್ಯತೆಯಾಗಿದೆ.
ಕರ್ನಾಟಕ ನೂತನ ಕೈಗಾರಿಕಾ ನೀತಿ 2020-25 ಜಾರಿ ಪ್ರಾದೇಶಿಕ ಹಾಗೂ ಸಮತೋಲಿತ ಅಭಿವೃದ್ಧಿ
ಹೊಸ ಕೈಗಾರಿಕಾ ನೀತಿಯಲ್ಲಿ ಪ್ರಾದೇಶಿಕ ಹಾಗೂ ಸಮತೋಲಿತ ಕೈಗಾರಿಕಾ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ಕೈಗಾರಿಕೆಗಳಿಲ್ಲದ ಪ್ರದೇಶಗಳಲ್ಲೂ ಹೆಚ್ಚಿನ ಹೂಡಿಕೆಗೆ ಪ್ರೊತ್ಸಾಹ ನೀಡುವುದು ಹೊಸ ನೀತಿಯ ಮೊದಲ ಆದ್ಯತೆಯಾಗಿದೆ. ಈ ಹಿನ್ನೆಲೆಯಲ್ಲಿ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಒತ್ತು ನೀಡಲಾಗುತ್ತದೆ.
ರಾಜ್ಯದ ಟಯರ್ 2 ಮತ್ತು 3ನೇ ಶ್ರೇಣಿಯ ನಗರಗಳು, ಕಲ್ಯಾಣ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕ ಭಾಗಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ, ಪೂರಕ ಕೈಗಾರಿಕಾ ವಾತಾವರಣ ಸೃಷ್ಟಿಸಲು ಹೆಚ್ಚಿನ ಒತ್ತು ನೀಡಲಾಗುತ್ತದೆ. ಆ ಮೂಲಕ ಬೆಂಗಳೂರು ಬಿಟ್ಟು ರಾಜ್ಯದ ಇತರೆ ಪ್ರಮುಖ ನಗರಗಳಲ್ಲಿ ಕೈಗಾರಿಕೆಗಳ ಸಮಗ್ರ ಅಭಿವೃದ್ಧಿಗೊಳಿಸುವುದು ಹೊಸ ಕೈಗಾರಿಕಾ ನೀತಿಯ ಮುಖ್ಯ ಉದ್ದೇಶವಾಗಿದೆ.
ಆದ್ಯತಾ ಕ್ಷೇತ್ರಗಳು ಯಾವುವು?
ಹೊಸ ಕೈಗಾರಿಕಾ ನೀತಿಯಲ್ಲಿ ಆಟೋ ಮೊಬೈಲ್, ಆಟೋ ಕಾಂಪನೆಂಟ್ಸ್, ಫಾರ್ಮಸಿಟಿಕಲ್ಸ್ ಮತ್ತು ವೈದ್ಯಕೀಯ ಸಾಧನಗಳು, ಇಂಜಿನಿಯರಿಂಗ್ ಮತ್ತು ಯಂತ್ರೋಪಕರಣಗಳು, ಜ್ಞಾನ ಆಧಾರಿತ ಕೈಗಾರಿಕೆಗಳು, ಸಿಮೆಂಟ್ ಮತ್ತು ಸ್ಟೀಲ್, ಸಕ್ಕರೆ, ಲಾಜಿಸ್ಟಿಕ್ ಕ್ಷೇತ್ರ, ನವೀಕರಿಸಬಹುದಾದ ಇಂಧನ, ವೈಮಾನಿಕ ಹಾಗೂ ರಕ್ಷಣಾ ಕ್ಷೇತ್ರ, ವಿದ್ಯುತ್ ವಾಹನ, ಆರೋಗ್ಯ ಕ್ಷೇತ್ರ, ಉನ್ನತ ಶಿಕ್ಷಣ ಕ್ಷೇತ್ರ, ಬಯೋ ಇಂಧನ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ.
ಜೊತೆಗೆ ರಪ್ತಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಬೇಡಿಕೆ ಆಧಾರಿತ ರಫ್ತಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತದೆ. ಅದಕ್ಕಾಗಿ ರಪ್ತು ಮೂಲಸೌಕರ್ಯ, ಲಾಜಿಸ್ಟಿಕ್ಸ್ನ್ನು ಸೃಷ್ಟಿಸಲಾಗುತ್ತದೆ. ರಫ್ತಿಗೆ ಪೂರಕ ವಾತಾವರಣ ಸೃಷ್ಟಿಸಿ, ಕೈಗಾರಿಕೋದ್ಯಮಗಳನ್ನು ಉತ್ತೇಜಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.