ಬೆಂಗಳೂರು: 2022-23ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ 30 ಸಾವಿರ ರೂಪಾಯಿಗಿಂತ ಹೆಚ್ಚು ತೆರಿಗೆ ಪಾವತಿಸುವ ವಾಹನ ಮಾಲೀಕರಿಗೆ ನೀಡಿದ 15 ದಿನಗಳ ಕಾಲಾವಕಾಶವನ್ನು 31 ದಿನಗಳವರೆಗೆ ವಿಸ್ತರಿಸುವ ಸಂಬಂಧ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಗಳವಾರ ಅಂಗೀಕರಿಸಲಾಯಿತು.
ಸಾರಿಗೆ ಸಚಿವ ಶ್ರೀರಾಮುಲು ಅವರು ವಿಧಾನಸಭೆಯಲ್ಲಿ ಇಂದು ವಿಧೇಯಕವನ್ನು ಮಂಡಿಸಿ ಅನುಮೋದನೆ ಪಡೆದುಕೊಂಡರು. ಧ್ವನಿಮತದ ಮೂಲಕ ಈ ವಿಧೇಯಕ ಅಂಗೀಕಾರಗೊಂಡಿತು. ಮೂವತ್ತು ಸಾವಿರ ರೂಪಾಯಿಗಿಂತ ಹೆಚ್ಚು ತೆರಿಗೆ ಪಾವತಿಸುವ ಮೋಟಾರು ವಾಹನಗಳ ಮಾಲೀಕರು ನಿಗದಿತ ಅವಧಿಯಲ್ಲಿ ತೆರಿಗೆ ಪಾವತಿಸಲು ಸಾಧ್ಯವಾಗದಿದ್ದರೆ ಈ ಮೊದಲು 15 ದಿನಗಳ ಕಾಲ ಹೆಚ್ಚುವರಿ ಕಾಲಾವಕಾಶ ನೀಡಲಾಗಿತ್ತು.
ಖಾಸಗಿ ವಾಹನಗಳ ಮಾಲೀಕರ ಬೇಡಿಕೆಗಳಿಗೆ ಸ್ಪಂದಿಸಿದ ಸರ್ಕಾರವು ವಿಧೇಯಕಕ್ಕೆ ತಿದ್ದುಪಡಿ ಮಾಡಿ 31 ದಿನಗಳ ಕಾಲ ಹೆಚ್ಚುವರಿ ಸಮಯ ನೀಡಿದೆ. ಕೆಲವು ವಾಹನ ಮಾಲೀಕರು ಮೂರು ತಿಂಗಳು, ಆರು ತಿಂಗಳು ಅಥವಾ ವರ್ಷಕ್ಕೆ ಸಂದರ್ಭಾನುಸಾರ ಪಾವತಿಸುತ್ತಾರೆ. ಈ ವೇಳೆ ಕಾಲಾವಕಾಶವನ್ನು ಹೆಚ್ಚುವರಿಯಾಗಿ ಪಾವತಿಸಲು ಅನುಕೂಲ ಮಾಡಿಕೊಡಲಾಗಿದೆ. ಇದಲ್ಲದೇ, ಪ್ರತಿ ತಿಂಗಳು ತೆರಿಗೆ ಪಾವತಿ ಮಾಡಲು ಸಹ ಅವಕಾಶ ನೀಡಲಾಗಿದೆ. ವಾಹನಗಳು ಅಗತ್ಯವಿದ್ದಾಗ ರಸ್ತೆಗಿಳಿಸುವ ವೇಳೆ ತೆರಿಗೆ ಪಾವತಿಸಬಹುದು. ಇದರಿಂದ ಹೆಚ್ಚು ವಾಹನಗಳನ್ನು ಹೊಂದಿರುವ ಮಾಲೀಕರಿಗೆ ಅನುಕೂಲವಾಗಲಿದ್ದು, ಆರ್ಥಿಕ ಹೊರೆ ತಪ್ಪಿಸಿದಂತಾಗುತ್ತದೆ ಎಂದು ಹೇಳಲಾಗಿದೆ.
ಓದಿ:ಚುನಾವಣಾ ಸುಧಾರಣೆ ಮೇಲೆ ಚರ್ಚೆ: ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ, ಅಕ್ರಮಗಳ ಬಗ್ಗೆ ಶಾಸಕರ ಅಸಮಾಧಾನ