ಬೆಂಗಳೂರು: ರಾಜ್ಯ ವಿಧಾನ ಮಂಡಲದ ಉಭಯ ಸದನದಲ್ಲಿ ಅಂಗೀಕೃತವಾಗಿದ್ದ 'ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ಅಧಿನಿಯಮ' ಸಂಬಂಧ ರಾಜ್ಯ ಸರ್ಕಾರ ರಾಜ್ಯಪತ್ರದ ಮೂಲಕ ಅಧಿಸೂಚನೆ ಹೊರಡಿಸಿದೆ. ಈ ಕಾಯ್ದೆಯಡಿ 1.5 ಟನ್‌ನಿಂದ 12 ಟನ್‌ವರೆಗಿನ ತೂಕದ ಹಾಗೂ 10 ಲಕ್ಷದಿಂದ 15 ಲಕ್ಷ ರೂ. ವರೆಗಿನ ಮೋಟಾರ್ ಕ್ಯಾಬ್ ಮತ್ತು ಸರಕು ಸಾಗಣೆ ವಾಹನಗಳಿಗೆ ಜೀವಿತಾವಧಿ ತೆರಿಗೆ ಬದಲಿಗೆ ತ್ರೈಮಾಸಿಕ ತೆರಿಗೆ ಪಾವತಿ ಪದ್ಧತಿ ಪುನಃ ಅನುಷ್ಠಾನಕ್ಕೆ ಬರಲಿದೆ. 10ರಿಂದ 15 ಲಕ್ಷ ರೂ. ಬೆಲೆಯ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಹಾಗೂ ಸಾರ್ವಜನಿಕ ಸೇವಾ ವಾಹನಗಳು ಹಾಗೂ 1.5 ಟನ್‌ನಿಂದ 12 ಟನ್‌ನವರೆಗಿನ ಸರಕು ಸಾಗಣೆ ವಾಹನಗಳಿಂದ ಜೀವಿತಾವಧಿ ತೆರಿಗೆ ಸಂಗ್ರಹ ಕೈಬಿಟ್ಟು ತ್ರೈಮಾಸಿಕ ತೆರಿಗೆ ಪಾವತಿಗೆ ಅವಕಾಶ ಮಾಡಿಕೊಡಲಾಗಿದೆ. ಹೊಸದಾಗಿ ನೋಂದಣಿಯಾಗುವ ವಾಹನಗಳಿಗೆ ಮಾತ್ರ ಜೀವಿತಾವಧಿ ತೆರಿಗೆ ಅನ್ವಯ.
ಧನಿ ವಿನಿಯೋಗ ಅಧಿನಿಯಮದ ಅಧಿಸೂಚನೆ:ಉಭಯ ಸದನಗಳಲ್ಲಿ ಅಂಗೀಕೃತ 2023-24ನೇ ಸಾಲಿನ ಮೊದಲನೇ ಪೂರಕ ಅಂದಾಜುಗಳ 3542.10 ಕೋಟಿ ರೂ. ಮೊತ್ತದ ಧನಿವಿನಿಯೋಗ ಸಂಖ್ಯೆ-4ರ ಕಾಯ್ದೆಗೆ ರಾಜ್ಯ ಸರ್ಕಾರದಿಂದ ಅಧಿಸೂಚನೆಯಾಗಿದೆ. ಮೊದಲನೇ ಪೂರಕ ಅಂದಾಜಿನಲ್ಲಿ ಒದಗಿಸಿರುವ ಒಟ್ಟು ಮೊತ್ತ 3542.10 ಕೋಟಿಯಲ್ಲಿ 17.66 ಕೋಟಿ ಪ್ರಭೃತ ವೆಚ್ಚ ಮತ್ತು 3,524.44 ಕೋಟಿ ರೂ. ಪುರಸ್ಕೃತ ವೆಚ್ಚಗಳು ಸೇರಿವೆ. ಇದರಲ್ಲಿ 326.98 ಕೋಟಿ ರೂಪಾಯಿ ರಿಸರ್ವ್ ಫಂಡ್ ಠೇವಣಿ ಹಾಗೂ ಎಸ್.ಎನ್.ಎ ಖಾತೆಗಳಿಂದ ಭರಿಸಲಾಗುವುದು. ಪೂರಕ ಅಂದಾಜಿನಲ್ಲಿ 915 ಕೋಟಿ ರೂ. ಬಂಡವಾಳ ವೆಚ್ಚವಾಗಿ ಅಭಿವೃದ್ಧಿ ಕಾರ್ಯಗಳಿಗೆ ವ್ಯಯಿಸಲಾಗುತ್ತದೆ.