ಕರ್ನಾಟಕ

karnataka

ETV Bharat / state

ಶೀಘ್ರವೇ ಬರ ಪರಿಹಾರ ಬಿಡುಗಡೆಗೊಳಿಸಿ: ನಿರ್ಮಲಾ ಸೀತಾರಾಮನ್​ಗೆ ರಾಜ್ಯ ಸಚಿವರ ಮನವಿ

Karnataka Ministers meet Nirmala Sitharaman: ರಾಜ್ಯದ ರೈತರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೂಡಲೇ ಬರ ಪರಿಹಾರ ಮನವಿ ಬಗ್ಗೆ ನಿರ್ಧರಿಸಿ, ಪರಿಹಾರ ಬಿಡುಗಡೆಗೊಳಿಸಿ ಎಂದು ಕೇಂದ್ರ ಹಣಕಾಸು ಸಚಿವರಿಗೆ ರಾಜ್ಯ ಸಚಿವರು ಮನವಿ ಮಾಡಿದ್ದಾರೆ.

Nirmala Sitharaman
ನಿರ್ಮಲಾ ಸೀತಾರಾಮನ್

By ETV Bharat Karnataka Team

Published : Nov 24, 2023, 8:08 AM IST

ದೆಹಲಿ/ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಬರ ಘೋಷಣೆ ಮಾಡಲಾಗಿದ್ದು, ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಸಂಬಂಧ ಶೀಘ್ರ ನಿರ್ಧಾರ ತೆಗೆದುಕೊಂಡು ಬರ ಪರಿಹಾರ ಹಣ ಬಿಡುಗಡೆಗೊಳಿಸಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಕೃಷಿ ಸಚಿವ ಚೆಲುವರಾಯಸ್ವಾಮಿ ಜೊತೆಗೂಡಿ ಗುರುವಾರ ದೆಹಲಿಯಲ್ಲಿ ಸಚಿವೆಯನ್ನು ಭೇಟಿ ಮಾಡಿದ ನಂತರ ಪತ್ರಕರ್ತರ ಜೊತೆ ಮಾತನಾಡಿದ ಕೃಷ್ಣ ಬೈರೇಗೌಡ, ರಾಜ್ಯದ 223 ತಾಲೂಕುಗಳನ್ನು ಈಗಾಗಲೇ ಬರಪೀಡಿತ ಎಂದು ಘೋಷಿಸಲಾಗಿದೆ. ಇಡೀ ರಾಜ್ಯ ಬರಪೀಡಿತ ಪರಿಸ್ಥಿತಿ ಎದುರಿಸುತ್ತಿದೆ. ಪರಿಣಾಮ, ರೈತರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ, ರಾಜ್ಯ ಸರ್ಕಾರದ ಮನವಿ (ಮೆಮೊರಾಂಡಂ) ಬಗ್ಗೆ ಶೀಘ್ರ ನಿರ್ಧಾರ ತೆಗೆದುಕೊಳ್ಳಿ, ಬರ ಪರಿಹಾರವನ್ನು ಆದಷ್ಟು ಶೀಘ್ರದಲ್ಲಿ ಬಿಡುಗಡೆಗೊಳಿಸಿ ಎಂದು ನಿರ್ಮಲಾ ಅವರಿಗೆ ಮನವಿ ಸಲ್ಲಿಸಿದ್ದೇವೆ.

ಪರಿಹಾರದ ಹಣವನ್ನು ವಿಳಂಬವಿಲ್ಲದೆ ಪಾರದರ್ಶಕ ಮತ್ತು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ತಲುಪಿಸುವ ಸಂಬಂಧ ಅಗತ್ಯ ಎಲ್ಲಾ ಕ್ರಮಗಳನ್ನು ರಾಜ್ಯ ಸರ್ಕಾರ ಈಗಾಗಲೇ ಕೈಗೊಂಡಿದೆ. ಹೀಗಾಗಿ, ಕೇಂದ್ರದ ಪರಿಹಾರದ ಹಣ ಬಿಡುಗಡೆ ಮಾಡುತ್ತಿದ್ದಂತೆ ಆ ಹಣವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು ಎಂಬುದನ್ನು ಮನವರಿಕೆ ಮಾಡಿಕೊಡಲಾಗಿದೆ ಎಂದು ವಿವರಿಸಿದರು.

ಸಣ್ಣ, ಅತಿಸಣ್ಣ ರೈತರ ಮಾಹಿತಿ: ರಾಜ್ಯದಲ್ಲಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ನಿಖರ ಅಂಕಿಸಂಖ್ಯೆಯ ಮಾಹಿತಿಯ ಬಗ್ಗೆಯೂ ನಿರ್ಮಲಾ ಸೀತಾರಾಮನ್‌ಗೆ ಮನವರಿಕೆ ಮಾಡಿಕೊಡಲಾಗಿದೆ. ಪಿಎಂ ಕಿಸಾನ್ ಮತ್ತು ಆಧಾರ್ ಲಿಂಕ್ 'ಫ್ರೂಟ್ಸ್' ಡೇಟಾಬೇಸ್ ಪ್ರಕಾರ ರಾಜ್ಯದಲ್ಲಿ ಕನಿಷ್ಟ ಶೇ.70ಕ್ಕೂ ಅಧಿಕ ಸಂಖ್ಯೆಯಲ್ಲಿ ಸಣ್ಣ, ಅತಿಸಣ್ಣ ರೈತರಿದ್ದಾರೆ. ಆದರೆ, ಕೇಂದ್ರ ಸರ್ಕಾರದ 2015ರ ಕೃಷಿ ಗಣತಿಯ ಪ್ರಕಾರ ರಾಜ್ಯದಲ್ಲಿ ಸಣ್ಣ-ಅತಿಸಣ್ಣ ರೈತರ ಸಂಖ್ಯೆ ಶೇ.44 ಎನ್ನುತ್ತಿವೆ. ಇದರಿಂದಾಗಿ ರಾಜ್ಯದ ರೈತರಿಗೆ ಪರಿಹಾರದಲ್ಲೂ ಅನ್ಯಾಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದೇವೆ ಎಂದರು.

ಕೇಂದ್ರ ಸರ್ಕಾರ ರಾಜ್ಯದ ನವೀಕೃತ ಡೇಟಾಬೇಸ್ ಮಾಹಿತಿಯನ್ನು ಆಧರಿಸಿ ಪರಿಹಾರ ಬಿಡುಗಡೆಗೊಳಿಸಬೇಕು. ಅಲ್ಲದೆ, ಪರಿಹಾರ ಹಣ ಬಿಡುಗಡೆ ಮಾಡುವ ಸಂದರ್ಭದಲ್ಲಿ ಕೇಂದ್ರದ ಮಾನದಂಡದಂತೆ ಸಾಧಾರಣ ಬರ ಎಂದು ಘೋಷಿಸಿರುವ ತಾಲೂಕುಗಳನ್ನೂ ಸಹ ಪರಿಹಾರಕ್ಕೆ ಪರಿಗಣಿಸಿ ಎಂದು ಕೇಂದ್ರ ಹಣಕಾಸು ಸಚಿವರಿಗೆ ಮನವಿ ನೀಡಿರುವುದಾಗಿ ತಿಳಿಸಿದರು.

ಇದನ್ನೂ ಓದಿ:ಭೀಕರ ಬರಗಾಲಕ್ಕೆ ಎದೆಗುಂದದೇ ಕ್ಯಾಪ್ಸಿಕಂ ಬೆಳೆ ಬೆಳೆದು ಲಕ್ಷಾಂತರ ರೂ. ಆದಾಯ ಗಳಿಸಿದ ರೈತ

ಬೆಳೆವಿಮೆ ಪಾವತಿಗೆ ಒತ್ತಾಯ:ರಾಜ್ಯದಲ್ಲಿ ವಿಮಾ ಕಂಪನಿಗಳು ಸಮಯಕ್ಕೆ ಸರಿಯಾಗಿ ರೈತರಿಗೆ ಬೆಳೆ ವಿಮೆ ಹಣ ಪಾವತಿಸದೆ ವಿಳಂಬ ಧೋರಣೆ ಅನುಸರಿಸುತ್ತಿವೆ. ಇದರಿಂದಲೂ ರೈತರು ಸಾಕಷ್ಟು ಸಂಕಷ್ಟಕ್ಕೆ ತುತ್ತಾಗುತ್ತಿದ್ದಾರೆ ಎಂದು ಮನವರಿಕೆ ಮಾಡಿಕೊಡಲಾಗಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವರು ವಿಮಾ ಕಂಪನಿಗಳಿಗೆ ಶೀಘ್ರವೇ ಬೆಳೆ ವಿಮೆ ಹಣ ಬಿಡುಗಡೆ ಮಾಡುವಂತೆ ಸೂಚಿಸುವುದಾಗಿ ತಿಳಿಸಿದ್ದಾರೆ ಎಂದರು.

ರೈತರಿಂದ ಎಲ್ಲಾ ಸಿರಿಧಾನ್ಯಗಳ ಖರೀದಿ: ರಾಗಿ, ಸಜ್ಜೆ, ಜೋಳ ಸೇರಿದಂತೆ ರೈತರು ಬೆಳೆಯುವ ಎಲ್ಲಾ ಸಿರಿಧಾನ್ಯಗಳನ್ನು ಯಾವುದೇ ನಿಬಂಧನೆ ಇಲ್ಲದೆ ಕನಿಷ್ಠ ಬೆಂಬಲ ಬೆಲೆ ನೀಡಿ ಸರ್ಕಾರವೇ ಖರೀದಿ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದೆ. ಸಭೆಯಲ್ಲಿ ರಾಜ್ಯದ ಸಿರಿಧಾನ್ಯದ ಇತಿಹಾಸವನ್ನು ನಿರ್ಮಲಾ ಸೀತಾರಾಮನ್ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಸರ್ಕಾರವೇ ಎಲ್ಲಾ ಸಿರಿಧಾನ್ಯಗಳನ್ನೂ ಖರೀದಿಸಿದರೆ ಸಿರಿಧಾನ್ಯಗಳನ್ನು ಬೆಳೆಯುವ ವ್ಯಾಪ್ತಿಯೂ ಹೆಚ್ಚಲಿದೆ, ಇದರಿಂದ ರೈತರಿಗೂ ಅನುಕೂಲವಾಗಲಿದೆ. ಈ ಬೇಡಿಕೆಗೂ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ABOUT THE AUTHOR

...view details