ಕರ್ನಾಟಕ

karnataka

ETV Bharat / state

ಸಿಎಂ ಹುದ್ದೆಯಲ್ಲಿ ಬೊಮ್ಮಾಯಿ ಮುಂದುವರೆಸಲು ವರಿಷ್ಠರ ಮೊರೆ ಹೋದ ಸಚಿವರು, ನಾಯಕರು!? - ವರಿಷ್ಠರ ಮೊರೆ ಹೋದ ಬಿಜೆಪಿ ಸಚಿವರು, ನಾಯಕರು

ಯಾವ ಕಾರಣಕ್ಕೂ ಬಸವರಾಜ ಬೊಮ್ಮಾಯಿ ಅವರನ್ನು ಬದಲಿಸಬಾರದು. ಮುಂದಿನ ಚುನಾವಣೆಯವರೆಗೆ ಅವರನ್ನೇ ಮುಂದುವರಿಸಬೇಕು ಎಂದು ಒತ್ತಡ ಹೇರಿದ್ದಾರೆ. ಬೊಮ್ಮಾಯಿ ತಮ್ಮಿಂದ ಸಾಧ್ಯವಿದ್ದ ಮಟ್ಟಿಗೆ ಉತ್ತಮವಾಗಿಯೇ ಕಾರ್ಯ ನಿರ್ವಹಿಸುತ್ತಿದ್ದು, ಈ ಹಂತದಲ್ಲಿ ಅವರನ್ನು ಬದಲಿಸುವುದರಿಂದ ಸಮಸ್ಯೆಯೇ ಹೆಚ್ಚು ಎಂದು ಕೆಲವು ಸಚಿವರು, ನಾಯಕರು ವರಿಷ್ಠರ ಬಳಿ ಮನವಿ ಮಾಡಿದ್ದಾರೆ.

ಸಿಎಂ ಹುದ್ದೆಯಲ್ಲಿ ಬೊಮ್ಮಾಯಿ ಮುಂದುವರೆಸಲು ಮನವಿ
ಸಿಎಂ ಹುದ್ದೆಯಲ್ಲಿ ಬೊಮ್ಮಾಯಿ ಮುಂದುವರೆಸಲು ಮನವಿ

By

Published : Apr 28, 2022, 7:47 PM IST

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬದಲಿಸಬೇಕು ಎಂಬ ಕೂಗು ಕೇಳುತ್ತಿರುವ ಬೆನ್ನಲ್ಲೇ ಅವರನ್ನು ಅದೇ ಹುದ್ದೆಯಲ್ಲಿ ಉಳಿಸುವಂತೆ ರಾಜ್ಯದ ಹಲವು ಸಚಿವರು, ಹಿರಿಯ ನಾಯಕರು ಪಕ್ಷದ ವರಿಷ್ಠರಿಗೆ ಮನವಿ ಮಾಡಲು ಮುಂದಾಗಿದ್ದಾರೆ. ಬೊಮ್ಮಾಯಿ ಅವರು ನಾಳೆ ಸಂಜೆ ದೆಹಲಿಗೆ ತೆರಳುವ ಮುನ್ನವೇ ಹಲವು ಸಚಿವರು ಮತ್ತು ನಾಯಕರು ವರಿಷ್ಠರಿಗೆ ಈ ಕುರಿತು ಮೊರೆ ಇಟ್ಟಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿದೆ.

ಕರ್ನಾಟಕದ ಬಗ್ಗೆ ಬಿಜೆಪಿ ವರಿಷ್ಠರಾದ ಜೆ.ಪಿ.ನಡ್ಡಾ, ಅಮಿತ್ ಶಾ, ಸಂಘ ಪರಿವಾರದ ನಾಯಕರಾದ ದತ್ತಾತ್ರೇಯ ಹೊಸಬಾಳಿ ಮತ್ತು ಅರುಣ್ ಕುಮಾರ್ ಕಳೆದ ವಾರ ಚರ್ಚಿಸಿದ್ದಲ್ಲದೆ ಅಂತಿಮ ನಿರ್ಧಾರ ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಿಫಾರಸು ಮಾಡಿದ್ದರು. ಈ ಶಿಫಾರಸಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ತೀರ್ಮಾನ ಕೈಗೊಳ್ಳುವ ಮುಂಚಿತವಾಗಿಯೇ ಆಪತ್ತಿನ ವಾಸನೆ ಹಿಡಿದ ಸಚಿವರು ಮತ್ತು ನಾಯಕರು ಇದೀಗ ಬೊಮ್ಮಾಯಿ ಅವರನ್ನು ಸಿಎಂ ಹುದ್ದೆಯಲ್ಲಿ ಉಳಿಸುವ ಕಸರತ್ತು ನಡೆಸಿದ್ದಾರೆ.

ಉನ್ನತ ಮೂಲಗಳ ಪ್ರಕಾರ, ಕೆಲವು ಸಚಿವರು, ನಾಯಕರು ಸೇರಿ, ಯಾವ ಕಾರಣಕ್ಕೂ ಬಸವರಾಜ ಬೊಮ್ಮಾಯಿ ಅವರನ್ನು ಬದಲಿಸಬಾರದು. ಬದಲಿಗೆ ಮುಂದಿನ ಚುನಾವಣೆಯವರೆಗೆ ಅವರನ್ನೇ ಮುಂದುವರಿಸಬೇಕು ಎಂದು ಒತ್ತಡ ಹೇರಿದ್ದಾರೆ. ಬೊಮ್ಮಾಯಿ ತಮ್ಮಿಂದ ಸಾಧ್ಯವಿದ್ದ ಮಟ್ಟಿಗೆ ಉತ್ತಮವಾಗಿಯೇ ಕಾರ್ಯ ನಿರ್ವಹಿಸುತ್ತಿದ್ದು, ಈ ಹಂತದಲ್ಲಿ ಅವರನ್ನು ಬದಲಿಸುವುದರಿಂದ ಸಮಸ್ಯೆಯೇ ಹೆಚ್ಚು ಎಂದಿದ್ಧಾರೆ ಎನ್ನಲಾಗುತ್ತಿದೆ.

ಪರಿಸ್ಥಿತಿ ಬಿಗಡಾಯಿಸುವ ಸೂಚನೆ:ಎಲ್ಲಕ್ಕಿಂತ ಮುಖ್ಯವಾಗಿ ಬೊಮ್ಮಾಯಿ ಅವರ ಜಾಗಕ್ಕೆ ಯಾರನ್ನು ತಂದರೂ ಪರಿಸ್ಥಿತಿ ಬಿಗಡಾಯಿಸಲಿದೆ ಎಂದು ಸಚಿವರು ಹೈಕಮಾಂಡ್​ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಸರ್ಕಾರದಲ್ಲಿ ಶಾಸಕರು ಹೇಳಿದ ಕೆಲಸಗಳು ನಿರೀಕ್ಷೆಯಂತೆ ಆಗುತ್ತಿಲ್ಲ. ಆದರೆ, ಅದಕ್ಕೆ ಆಡಳಿತಾತ್ಮಕ ತೊಡಕುಗಳು ಕಾರಣವೇ ಹೊರತು ಬೊಮ್ಮಾಯಿ ಅವರು ಕಾರಣರಲ್ಲ. ಇಂತಹ ಕಾರಣಗಳನ್ನು ಮುಂದೊಡ್ಡಿ ಅವರನ್ನು ಬದಲಿಸಿದರೆ ಮುಂದಿನ ದಿನಗಳಲ್ಲಿ ಯಾರೂ ಅವರಂತೆ ಕೆಲಸ ಮಾಡುವ ಶಕ್ತಿ ಹೊಂದಿರುವುದಿಲ್ಲ ಎಂದು ಹೇಳಿದ್ದಾರಂತೆ.

ಸಂಪುಟಕ್ಕೆ ಮೇಜರ್​ ಸರ್ಜರಿ ಸೂಕ್ತ?:ಆಡಳಿತ ಯಂತ್ರಕ್ಕೆ ಚುರುಕು ನೀಡುವ ದೃಷ್ಟಿಯಿಂದ ಸರ್ಕಾರಕ್ಕೆ ಮೇಜರ್ ಸರ್ಜರಿ ಮಾಡಿ ಚುನಾವಣೆಗೆ ತಯಾರು ಮಾಡುವುದು ಒಳ್ಳೆಯದು. ನಾಯಕತ್ವ ಬದಲಾವಣೆಯ ಕೆಲಸಕ್ಕೆ ಕೈ ಹಾಕಿದರೆ ಮುಂದಿನ ಆರು ತಿಂಗಳ ಕಾಲ ವಿನಾಕಾರಣ ಕಾಲಹರಣ ಮಾಡುವ ಕೆಲಸವಾಗುತ್ತದೆ. ಪರ್ಯಾಯ ನಾಯಕರು ಎಂದು ಯಾರು ಹೆಸರು ಕೇಳುತ್ತಿದೆಯೋ?. ಇವರ ಪೈಕಿ ಯಾರೂ ತಮ್ಮ ಕ್ಷೇತ್ರದಿಂದ ಹೊರಗೆ ಪ್ರಭಾವಿಗಳಲ್ಲ. ಹೀಗಾಗಿ ಸನ್ನಿವೇಶವನ್ನು ಪರಿಗಣಿಸಿ ಬೊಮ್ಮಾಯಿ ಅವರನ್ನೇ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಸಿ ಎಂದು ವರಿಷ್ಠರಿಗೆ ಮನವಿ ಮಾಡಿ ಬಂದಿದ್ದಾರೆ ಎನ್ನಲಾಗಿದೆ.

ನಾಯಕತ್ವದ ವಿಷಯದಲ್ಲಿ ಪ್ರಧಾನಿ ಮೋದಿ ತೀರ್ಮಾನ ಕೈಗೊಳ್ಳುವ ಕೆಲವೇ ದಿನಗಳ ಮುಂಚೆ ಇಂಥದ್ದೊಂದು ಕೂಗು ದೆಹಲಿಯ ಬಿಜೆಪಿ ವರಿಷ್ಠರನ್ನು ತಲುಪಿದ್ದು, ರಾಜಕೀಯ ವಲಯಗಳ ಕುತೂಹಲಕ್ಕೆ ಕಾರಣವಾಗಿವೆ. ಈ ಕೂಗನ್ನು ವರಿಷ್ಠರು ಪೂರಕವಾಗಿ ಪರಿಗಣಿಸಿದರೆ ಬೊಮ್ಮಾಯಿ ಬಚಾವಾಗುತ್ತಾರೆ. ಅದೇ ಕಾಲದಲ್ಲಿ ಸರ್ಕಾರಕ್ಕೆ ಮೇಜರ್ ಸರ್ಜರಿ ಆಗಿ ಘಟಾನುಘಟಿ ಮಂತ್ರಿಗಳು ಹೊರಬಿದ್ದು ಪಕ್ಷದ ಕೆಲಸಕ್ಕೆ ನಿಯೋಜನೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಸಂಪುಟ ವಿಸ್ತರಣೆ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ, ನಾಳೆ ದೆಹಲಿಗೆ ತೆರಳುವೆ: ಸಿಎಂ

ABOUT THE AUTHOR

...view details