ಕರ್ನಾಟಕ

karnataka

ETV Bharat / state

ಇಂದಿನಿಂದ 14 ದಿನ ಕರ್ನಾಟಕ ಕಂಪ್ಲೀಟ್​ ಲಾಕ್​.. ಜಿಲ್ಲಾ ಗಡಿಗಳು ಬಂದ್​.. ಹೀಗಿತ್ತು ಮೊದಲ ದಿನದ ಸ್ಥಿತಿಗತಿ

ರಾಜ್ಯಾದ್ಯಂತ ಕೋವಿಡ್​ ಅಟ್ಟಹಾಸ ತಡೆಗೆ ರಾಜ್ಯ ಸರ್ಕಾರ ಇಂದಿನಿಂದ 14 ದಿನಗಳ ಕಾಲ ನಕಠೀಣ ಲಾಕ್​ಡೌನ್​ ಅನ್ನು ವಿಧಿಸಿದೆ. ಅನಗತ್ಯವಾಗಿ ಓಡುತ್ತಿದ್ದ ಬೈಕ್ ಸವಾರರಿಗೆ ಪೊಲೀಸರು ಲಾಠಿ ರುಚಿ‌ ತೋರಿಸಿದರು. ಬೆಳಗ್ಗೆ 6 ಗಂಟೆಯಿಂದಲೇ ಪೊಲೀಸರು ನಗರದಲ್ಲಿ ಸಂಚರಿಸಿ ವಾಹನ ಸವಾರರಿಗೆ ಬಿಸಿ‌ ಮುಟ್ಟಿಸಿದ್ದಾರೆ..

By

Published : May 10, 2021, 1:21 PM IST

Karnataka lockdown for 14 days
ಇಂದಿನಿಂದ 14 ದಿನ ಕರ್ನಾಟಕ ಕಂಪ್ಲೀಟ್​ ಲಾಕ್

ಬೆಂಗಳೂರು :ರಾಜ್ಯಾದ್ಯಂತ ಕೋವಿಡ್​ ಅಟ್ಟಹಾಸ ತಡೆಗೆ ರಾಜ್ಯ ಸರ್ಕಾರ ಇಂದಿನಿಂದ 14 ದಿನಗಳ ಕಾಲ ಕಠಿಣ ಲಾಕ್​ಡೌನ್​ವಿಧಿಸಿದೆ. ಇಂದಿನಿಂದ ಕಠಿಣ ನಿರ್ಬಂಧಗಳಿರುವ ಲಾಕ್‌ಡೌನ್ ರಾಜ್ಯಾದ್ಯಂತ ಜಾರಿಯಾಗಲಿದೆ. ಈ ಬಗ್ಗೆ ಸರ್ಕಾರ ಈಗಾಗಲೇ ಮಾರ್ಗಸೂಚಿ ಹೊರಡಿಸಿದೆ.

ಲಾಕ್‌ಡೌನ್ ವೇಳೆ ಅನಗತ್ಯ ವಾಹನ ಓಡಾಟಕ್ಕೆ ಸಂಪೂರ್ಣ ಬ್ರೇಕ್ ಹಾಕಲಾಗಿತ್ತು. ಅಗತ್ಯ ವಸ್ತುಗಳ ಖರೀದಿಗೂ ಜನರು ವಾಹನಗಳಲ್ಲಿ ಸಂಚರಿಸುವುದಕ್ಕೆ ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.

ಬೆಳಗ್ಗೆ 6 ರಿಂದ 10 ಗಂಟೆವರೆಗೆ ಕಿರಾಣಿ ಅಂಗಡಿ, ಮದ್ಯದ ಅಂಗಡಿ, ಮಾಂಸ, ತರಕಾರಿ ಅಂಗಡಿ ತೆರೆದಿದ್ದವು. ಬಳಿಕ ವ್ಯಾಪಾರಕ್ಕೆ ಯಾವುದೇ ಅವಕಾಶ ನೀಡಿಲ್ಲ. ಈ ವೇಳೆ ಸಾರ್ವಜನಿಕರು ಖರೀದಿಗಾಗಿ ಅಂಗಡಿಗಳಿಗೆ ನಡೆದುಕೊಂಡೇ ಹೋಗುವ ದೃಶ್ಯ ಕಂಡು ಬಂದಿತು. ‘

ಸರ್ಕಾರದ ನಿಯಮ ಮೀರಿ ವಾಹನದಲ್ಲಿ ಅನಗತ್ಯವಾಗಿ ಓಡಾಡಿದವರ ಗಾಡಿಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಬೆಳಗ್ಗೆ 10 ಗಂಟೆಯ ಬಳಿಕ ಜನರ ಓಡಾಟಕ್ಕೆ ಸಪೂರ್ಣ ಬ್ರೇಕ್ ಹಾಕಲಾಗಿದೆ.

ಬೆಂಗಳೂರಿನಲ್ಲಿ ಹತ್ತಕ್ಕೂ ಅಧಿಕ ಆಟೋ ಸೀಜ್​: ಕೊರೊನಾ ಸೋಂಕಿನ ಸರಪಳಿ ಬ್ರೇಕ್ ಮಾಡಲು ಇಂದಿನಿಂದ 14 ದಿನಗಳ ಕಾಲ ಕಠಿಣ ಲಾಕ್​ಡೌನ್ ಜಾರಿಯಾಗಿದೆ. ಕೆ.ಆರ್.ಮಾರ್ಕೆಟ್​ನಲ್ಲಿ ವಿನಾಯಿತಿ ನೀಡಿದ ಅವಧಿಯಲ್ಲಿಯೇ ಪೊಲೀಸರು ಪ್ರತಿಯೊಂದು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು.‌

ಇಲ್ಲಸಲ್ಲದ ಕಾರಣ ಹೇಳುವ ವಾಹನ ಸವಾರರಿಗೆ ಲಾಠಿ ಬಿಸಿ ಮುಟ್ಟಿಸಿದ್ದಾರೆ.‌ ಈ ವೇಳೆ ಪ್ರಯಾಣಿಕರಿದ್ದ ಸುಮಾರು 10ಕ್ಕೂ ಹೆಚ್ಚು ಆಟೋಗಳನ್ನು ಸೀಜ್ ಮಾಡಲಾಗಿದೆ. ಬೇಕಾಬಿಟ್ಟಿಯಾಗಿ ಓಡಾಡೋರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ.

ಬೆಳಗಾವಿಯಲ್ಲಿ ಒತ್ತಾಯಪೂರ್ವಕ ಅಂಗಡಿ ಮುಂಗಟ್ಟು ಬಂದ್:ಸಾರ್ವಜನಿಕರು ಕಾಲ್ನಡಿಗೆಯಲ್ಲಿ ಬಂದು ಅಗತ್ಯವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ, ಬೆಳಗಾವಿಯಲ್ಲಿ ಕುಂಟುನೆಪ ಹೇಳಿ ಅನಗತ್ಯವಾಗಿ ಓಡಾಡುತ್ತಿದ್ದವರ ವಾಹನಗಳನ್ನು ಪೊಲೀಸರು ಸೀಜ್​ ಮಾಡಿದ್ದಾರೆ.

ನಗರದ ಚೆನ್ನಮ್ಮ ವೃತ್ತ, ಮಹಾಂತೇಶ ನಗರ ಓವರ್‌ಬ್ರಿಡ್ಜ್, ಅಶೋಕ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಹಾಗೂ ವಾಹನ ಸವಾರರು ಅಗತ್ಯ ವಸ್ತುಗಳ ಹೆಸರಲ್ಲಿ ಅನಗತ್ಯ ಓಡಾಟ ನಡೆಸುತ್ತಿದ್ದು ಅಂಥವರಿಗೆ ಪೊಲೀಸರು ಚಳಿ ಬಿಡಿಸಿದ್ದಾರೆ. ಇನ್ನೂ ಕೆಲವರು ಯಾವುದಾದರೊಂದು ಐಡಿ ಕಾರ್ಡ್, ಔಷಧಿ ಅಂಗಡಿ ಚೀಟಿ, ಆಸ್ಪತ್ರೆ ದಾಖಲೆಗಳನ್ನ ತೋರಿಸಿ ಹೋಗುತ್ತಿದ್ದರು.

ನಗರದ ಗಣಪತಿ ಗಲ್ಲಿ, ಶನಿವಾರ ಪೇಟೆ, ತರಕಾರಿ ಮಾರುಕಟ್ಟೆ ಹಾಗೂ ಮೇನ್ ಮಾರ್ಕೆಟ್​ನಲ್ಲಿ ವ್ಯಾಪಾರ ವಹಿವಾಟಿಗೆ ಮುಂದಾಗುತ್ತಿದ್ದ ವ್ಯಾಪಾರಿಗಳಿಗೆ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು ಬಂದ್ ಮಾಡಿಸಿದರು.

ಮೈಸೂರಿನಲ್ಲಿ ಫೀಲ್ಡ್​ಗಿಳಿದ ಡಿಸಿಪಿ ಪ್ರಕಾಶ್ ಗೌಡ:ಇಂದಿನಿಂದ ಲಾಕ್​ಡೌನ್ ಘೋಷಣೆಯಾಗಿರುವುದರಿಂದ ಡಿಸಿಪಿ ಡಾ.ಎ‌.ಎನ್‌.ಪ್ರಕಾಶ್​ ಗೌಡ ಅವರು ಫೀಲ್ಡ್​ಗಿಳಿದು, ಅನಗತ್ಯವಾಗಿ ವಾಹನ ಸಂಚಾರ ಮಾಡುವವರ ಗಾಡಿ ಸೀಜ್ ಮಾಡಿ ಬಿಸಿ ಮುಟ್ಟಿಸಿದರು. ಮೈಸೂರಿನ ವಿವಿಧೆಡೆ ವಾಹನಗಳಲ್ಲಿ ಓಡಾಡುತ್ತಿರುವ ಜನತೆಗೆ ಪೋಲಿಸರು ಶಾಕ್ ಕೊಟ್ಟಿದ್ದಾರೆ. ಡಿಸಿಪಿ ಪ್ರಕಾಶ್ ಗೌಡ ನೇತೃತ್ವದಲ್ಲಿ ರಾಮಸ್ವಾಮಿ ವೃತ್ತದಲ್ಲಿ ತಪಾಸಣೆ ನಡೆಸಿದರು.

ಚಿತ್ರದುರ್ಗದಲ್ಲಿ ಜಿಲ್ಲಾ ಎಸ್ಪಿ ರಾಧಿಕಾರಿಂದ ವಾಹನ ತಪಾಸಣೆ: ಇಂದಿನಿಂದ 14 ದಿನಗಳ ಕಾಲ ರಾಜ್ಯಾದ್ಯಂತ ಸೆಮಿ ಲಾಕ್​ಡೌನ್ ಹಿನ್ನೆಲೆ ಅನಗತ್ಯ ಓಡಾಟ ನಿಯಂತ್ರಿಸಲು ಸ್ವತಃ ಚಿತ್ರದುರ್ಗ ಜಿಲ್ಲಾ ಎಸ್ಪಿ ರಾಧಿಕಾ ನಗರದ ಗಾಂಧಿ ವೃತ್ತದಲ್ಲಿ ಬಂದೋಬಸ್ತ್ ಮಾಡಿದರು.

ಇದನ್ನೂ ಓದಿ: ನೀ ಕಾಂಟ್ರಾಕ್ಟರ್ ಆಗು, ಏನಾದ್ರೂ ಆಗಿರು ನನ್ನ ಕೆಲಸ ನಂಗೆ ಮುಖ್ಯ.. ಪಿಎಸ್​ಐಯಿಂದ ವ್ಯಕ್ತಿಗೆ ಕಪಾಳ ಮೋಕ್ಷ

ಗದಗದಲ್ಲಿ ಯುವಕನಿಗೆ ಕಪಾಳಮೋಕ್ಷ ಮಾಡಿದ ಪಿಎಸ್ಐ: ಅನಾವಶ್ಯಕವಾಗಿ ಬೈಕ್ ಮೇಲೆ ತಿರುಗಾಡುತ್ತಿರುವುದೂ ಅಲ್ಲದೆ, ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಯುವಕನನ್ನು ಪಿಎಸ್​ಐ ಕಮಲಾ ದೊಡ್ಡಮನಿ ವಶಕ್ಕೆ ಪಡೆದಿದ್ದಾರೆ. ಅನಗತ್ಯವಾಗಿ ಹೊರಗೆ ಓಡಾಡುತ್ತಿರುವವರಿಗೆ ರಾಜ್ಯಾದ್ಯಂತ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ.

ಅಲ್ಲದೇ, ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ. ನಗರದಲ್ಲಿ ಹೀಗೆ ಅನಗತ್ಯವಾಗಿ ವಾಹನದ ಮೇಲೆ ಬಂದ ಸವಾರನೊಬ್ಬ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾನೆ. ಕೇಳಿದರೆ ನಾನು ಕಂಟ್ರಾಕ್ಟರ್, ಹಳ್ಳಿಯಿಂದ ಬರಬೇಕು ಎಂದು ವಾದಿಸಿದ್ದಾನೆ.

ಅಲ್ಲದೇ, ಯಾವುದೋ ನಾಯಕರಿಗೆ ಕರೆ ಮಾಡಿ ಪೊಲೀಸರಿಗೆ ಕೊಡಲು ಹೋಗಿದ್ದಾನೆ. ಇದರಿಂದ ಕೆಂಡಾಮಂಡಲವಾದ ಪಿಎಸ್​ಐ ಕಮಲಾ ದೊಡ್ಡಮನಿ ಕಪಾಳ ಮೋಕ್ಷ ಮಾಡಿದ್ದಾರೆ. ಈ ಘಟನೆ ಇಲ್ಲಿಯ ಭೂಮರಡ್ಡಿ ಸರ್ಕಲ್ ನಲ್ಲಿ ನಡೆದಿದೆ.

ಧಾರವಾಡದಲ್ಲಿ ಬೈಕ್​ ಸೈಡ್ ಹಾಕುವ ನೆಪದಲ್ಲಿ ಪರಾರಿಯಾದ ಮಹಿಳೆ:ಲಾಕ್​ಡೌನ್ ಹಿನ್ನೆಲೆ ಅನಗತ್ಯವಾಗಿ ತಿರುಗುತ್ತಿರುವವರಿಗೆ ಪೋಲಿಸರು ತಪಾಸಣೆ ನಡೆಸಿ ಬೈಕ್​ಗಳನ್ನು ಸೀಜ್ ಮಾಡುತ್ತಿದ್ದಾರೆ. ನಗರದ ಸುಭಾಷ್ ಮಾರ್ಕೆಟ್​ನಲ್ಲಿ ಓರ್ವ ಮಹಿಳೆಯನ್ನ ಪೊಲೀಸರು ವಿಚಾರಣೆ ಮಾಡುತ್ತಿರುವ ವೇಳೆ ಬೈಕ್‌ ಸೈಡ್ ಹಾಕುವ ನೆಪ ಹೇಳಿ ಮಹಿಳಾ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿರುವ ಘಟನೆ ನಡೆದಿದೆ. ಮಹಿಳೆ ಹೋಗಿರುವ ಸ್ಪೀಡ್ ನೋಡಿ ಪೋಲಿಸರು ದಂಗಾಗಿದ್ದಾರೆ. ಫೈನ್ ಕಟ್ಟಬೇಕಾಗುತ್ತೆ ಎಂದು ಎಸ್ಕೇಪ್ ಆದ ಮಹಿಳೆಗೆ ತಕ್ಷಣ ನೋಟಿಸ್ ನೀಡಲು ಅಧಿಕಾರಿಗಳು ಸೂಚಿಸಿದ್ದಾರೆ.

ಇದನ್ನೂ ಓದಿ: ಬೈಕ್‌ ಸೈಡ್ ಹಾಕುವ ನೆಪ ಹೇಳಿ ಧಾರವಾಡಲ್ಲಿ ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿದ ಮಹಿಳೆ - ವಿಡಿಯೋ

ಇನ್ನೊಂದೆಡೆ ಕೆಲವರು ವಾಹನಗಳನ್ನು ಬಿಟ್ಟು ಸೈಕಲ್ ಮೊರೆ ಹೋಗಿದ್ದಾರೆ. ಅಗತ್ಯ ಸೇವೆಗಳ ಖರೀದಿಗೆ ಆಗಮಿಸುವ ಜನರು ತಮ್ಮ ವಾಹನ ಬಿಟ್ಟು ಸೈಕಲ್ ಮೂಲಕ ಆಗಮಿಸಿ ಅಗತ್ಯ ವಸ್ತುಗಳನ್ನು ಖರೀದಿ ಮಾಡಿದರು. ವಾಹನ ಸಂಚಾರ ಸಂಪೂರ್ಣವಾಗಿ ನಿರ್ಬಂಧಿಸಿದ ಹಿನ್ನೆಲೆ ಅಗತ್ಯ ವಸ್ತು ಖರೀದಿಗೆ ಜನ ನಡೆದುಕೊಂಡು ಹೋಗಬೇಕು ಎಂಬ ನಿಯಮದಿಂದ ಧಾರವಾಡದ ಸುಭಾಷ್ ರಸ್ತೆಯಲ್ಲಿ ದಿನ ಬಳಕೆ ವಸ್ತು ತರಕಾರಿ ಖರೀದಿಸಲು ಸೈಕಲ್ ಮೇಲೆ ಬಂದಿದ್ದರು.

ಚಿಕ್ಕಮಗಳೂರು ನಗರದಲ್ಲಿ ಎಸ್ಪಿ, ಡಿಸಿ ರೌಂಡ್ಸ್: ಚಿಕ್ಕಮಗಳೂರು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಫುಲ್ ಅಲರ್ಟ್ ಆಗಿದೆ. ನಗರದಲ್ಲಿ ಜಿಲ್ಲಾ ಎಸ್ಪಿ ಹಾಗೂ ಜಿಲ್ಲಾಧಿಕಾರಿ ರೌಂಡ್ಸ್ ಹಾಕುತ್ತಿದ್ದು, ಅನಗತ್ಯ ಸಂಚರಿಸುವವರಿಗೆ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾ ಎಸ್ಪಿ ಅಕ್ಷಯ್ ನಗರದಲ್ಲಿ ಸಂಚಾರ ನಡೆಸುತ್ತಿದ್ದಾರೆ. ಬೆಳಗ್ಗೆಯಿಂದಲೇ ನಗರದಲ್ಲಿ ಪೊಲೀಸರ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದು, ಅನಗತ್ಯ ಸಂಚಾರ ಮಾಡುವವರ ವಾಹನಗಳನ್ನು ಜಪ್ತಿ ಮಾಡುತ್ತಿದ್ದಾರೆ.

ರಾಣೆಬೆನ್ನೂರಲ್ಲಿ ಒಂದು ಕಿ.ಮೀ ವರೆಗೆ ಬೈಕ್ ನೂಕುವ ಶಿಕ್ಷೆ: ಲಾಕ್​ಡೌನ್ ನಿಯಮ ಉಲ್ಲಂಘನೆ ಮಾಡಿ ರಸ್ತೆಗೆ ಇಳಿದಿದ್ದ ಬೈಕ್ ಸವಾರರಿಗೆ ರಾಣೇಬೆನ್ನೂರು ಪೊಲೀಸರು ಒಂದು ಕಿ.ಮೀ ವರೆಗೆ ಬೈಕ್ ನೂಕಿಸಿ ಪರೇಡ್ ಮಾಡಿಸಿದ್ದಾರೆ. ರಾಜ್ಯ ಸರ್ಕಾರ ಇಂದಿನಿಂದ ರಾಜ್ಯಾದ್ಯಂತ ಕಠಿಣ ಲಾಕ್​ಡೌನ್ ನಿಯಮ ಜಾರಿಗೆ ತಂದಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ವಾಹನಗಳನ್ನು ತೆಗೆದುಕೊಂಡು ಬರಬಾರದು ಎಂದು ತಿಳಿಸಿದೆ.

ಈ ನಡುವೆ ರಾಣೇಬೆನ್ನೂರಲ್ಲಿ ಕೆಲವರು ನಿಯಮ ಉಲ್ಲಂಘನೆ ಮಾಡಿ ಬೈಕ್ ತೆಗೆದುಕೊಂಡು ಬಂದಿದ್ದರು. ಇದನ್ನ ಕಂಡ ಪೊಲೀಸರು ಬೈಕ್ ಸವಾರರನ್ನು ನಿಲ್ಲಿಸಿ ಅವರನ್ನು ಬೈಕ್​ನಿಂದ ಕೆಳಗೆ ಇಳಿಸಿ ಸುಮಾರು ಇಂದು ಒಂದು ಕಿ.ಮೀ ನೂಕಿಸಿ ಅವರನ್ನು ದಂಡಿಸಿದ್ದಾರೆ. ಅಲ್ಲದೆ ರಾಣೇಬೆನ್ನೂರು ಶಹರ ಠಾಣೆ ಪೊಲೀಸರು ಸುಮಾರು 200 ಬೈಕ್ ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ದಾರಿ ತಪ್ಪಿಸಿತು ಐವನ್ ಡಿಸೋಜ ಪ್ರಕಟಣೆ : ರೋಡಿಗಿಳಿದ 180ಕ್ಕೂ‌ಅಧಿಕ ವಾಹನಗಳು ಸೀಜ್

ಮಂಗಳೂರಿನಲ್ಲಿ ಜನರ ದಾರಿ ತಪ್ಪಿಸಿದ ಮಾಜಿ ಎಂಎಲ್​ಸಿ ಐವನ್ ಡಿಸೋಜ ಪ್ರಕಟಣೆ: ಬೆಳಗ್ಗೆ 10 ಗಂಟೆಯವರೆಗೆ ವಾಹನ ಬಳಸಿ ಓಡಾಡಬಹುದು ಎಂಬ ಮಾಜಿ ಎಂಎಲ್​ಸಿ ಐವನ್ ಡಿಸೋಜ ಅವರ ಹೆಸರಿನಲ್ಲಿದ್ದ ಪ್ರಕಟಣೆಯೊಂದು ನಾಗರಿಕರ ದಾರಿ ತಪ್ಪಿಸಿತು. ಪರಿಣಾಮ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ 180 ಕ್ಕೂ ಅಧಿಕ ವಾಹನಗಳು ಸೀಜ್​ ಆಗಿವೆ. ವಾರಾಂತ್ಯ ಕರ್ಫ್ಯೂಗೆ ಉತ್ತಮ ಬೆಂಬಲ ದೊರಕಿದ್ದ ಮಂಗಳೂರಿನಲ್ಲಿ ಇಂದು ಬೆಳಗ್ಗಿನಿಂದಲೇ ಜನರು ರೋಡಿಗಿಳಿದಿದ್ದರು.

ಕಾರವಾರ, ಹಾವೇರಿ, ತುಮಕೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಬಿಗಿ ಪೊಲೀಸ್​ ಬಂದೋಬಸ್ತ್​ ನಿಯೋಜಿಸಲಾಗಿದೆ. ಅನುಮತಿ ನೀಡಿರುವ ಚಟುವಟಿಕೆಗಳು ಮತ್ತು ತುರ್ತು ಕಾರಣಗಳನ್ನು ಹೊರತುಪಡಿಸಿ ಯಾರೊಬ್ಬರೂ ರಸ್ತೆಗೆ ಇಳಿಯಲು ಅವಕಾಶವೇ ಇಲ್ಲ.

ರಾಜ್ಯದ ಎಲ್ಲ ಅಂತರ್​ಜಿಲ್ಲಾ ಗಡಿ ಪ್ರದೇಶಗಳು, ಅಂತರ್​ರಾಜ್ಯ ಗಡಿಗಳಲ್ಲಿ ಪೊಲೀಸ್‌ ಮತ್ತು ಕಂದಾಯ ಇಲಾಖೆಗಳು ಜಂಟಿಯಾಗಿ ಚೆಕ್‌ಪೋಸ್ಟ್‌ ತೆರೆದಿವೆ. ಇಲ್ಲಿ ಸಂಚರಿಸುವ ಪ್ರತಿಯೊಂದು ವಾಹನಗಳ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ.

ABOUT THE AUTHOR

...view details