ಬೆಂಗಳೂರು: ರಾಜ್ಯದಲ್ಲಿ ಜೂ. 7ರಂದು ಲಾಕ್ಡೌನ್ 3.O ಮುಕ್ತಾಯಗೊಳ್ಳಲಿದ್ದು, ಲಾಕ್ಡೌನ್ ವಿಸ್ತರಣೆ ಭವಿಷ್ಯ ಇಂದು ನಿರ್ಧಾರವಾಗಲಿದೆ. ತಜ್ಞರ ಸಲಹಾ ಸಮಿತಿ, ಸಚಿವರು ಮತ್ತು ಹಿರಿಯ ಅಧಿಕಾರಿಗಳ ಸಭೆ ನಡೆಸಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಜೆ ಈ ಬಗ್ಗೆ ನಿರ್ಧಾರ ಪ್ರಕಟಿಸಲಿದ್ದಾರೆ.
ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಇಂದು ಸಂಜೆ ಎರಡು ಮಹತ್ವದ ಸಭೆಗಳು ನಡೆಯಲಿವೆ. ಸಂಜೆ 4.30ಕ್ಕೆ ಗೃಹ ಕಚೇರಿ ಕೃಷ್ಣಾದಲ್ಲಿ ಕೋವಿಡ್ ತಜ್ಞರ ಸಲಹಾ ಸಮಿತಿ ಸಭೆ ನಡೆಸಲಿರುವ ಮುಖ್ಯಮಂತ್ರಿಗಳು, ಸಮಿತಿ ನೀಡಿರುವ ವರದಿ ಕುರಿತು ಮತ್ತೊಮ್ಮೆ ಸದಸ್ಯರಿಂದ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಈಗಾಗಲೇ ಜೂನ್ ಅಂತ್ಯದವರೆಗೆ ಈಗಿರುವ ರೀತಿಯಲ್ಲಿಯೇ ಕೋವಿಡ್ ಕಠಿಣ ನಿಯಮ ಮುಂದುವರೆಸಲು ಕೇಂದ್ರ ಸರ್ಕಾರ ಸಲಹೆ ನೀಡಿರುವ ಹಿನ್ನೆಲೆಯಲ್ಲಿ ತಜ್ಞರ ಸಮಿತಿ ಸಲಹೆ ಮಹತ್ವದ್ದಾಗಿದೆ.
ಈಗಾಗಲೇ ತಜ್ಞರ ಸಮಿತಿ ಪಾಸಿಟಿವಿಟಿ ದರ ಶೇ. 5 ಮತ್ತು ಮರಣದ ಪ್ರಮಾಣ ಶೇ. 1ಕ್ಕಿಂತ ಕಡಿಮೆ ಆಗಲು 14 ದಿನಗಳ ಕಾಲ ಮತ್ತೆ ಲಾಕ್ಡೌನ್ ವಿಸ್ತರಣೆ ಅಗತ್ಯ ಎನ್ನುವ ವರದಿ ನೀಡಿದ್ದು, ಆ ವರದಿಯಲ್ಲಿನ ಶಿಫಾರಸುಗಳ ಕುರಿತು ಸಭೆಯಲ್ಲಿ ವಿಸ್ತೃತವಾದ ಚರ್ಚೆ ನಡೆಯಲಿದೆ. ಎಷ್ಟು ದಿನ ಲಾಕ್ಡೌನ್ ವಿಸ್ತರಣೆ ಮಾಡಬೇಕು, ಅನ್ಲಾಕ್ ಪ್ರಕ್ರಿಯೆ ಯಾವ ರೀತಿ ಇರಬೇಕು, ಯಾವುದಕ್ಕೆಲ್ಲ ಮೊದಲ ಆದ್ಯತೆ ನೀಡಬಹುದು ಎನ್ನುವ ಕುರಿತು ತಜ್ಞರ ಸಲಹಾ ಸಮಿತಿ ಸದಸ್ಯರ ಅಭಿಪ್ರಾಯ ಪಡೆಯಲಿದ್ದಾರೆ.
ತಜ್ಞರ ಸಲಹಾ ಸಮಿತಿ ಸಭೆ ನಂತರ ಅಧಿಕೃತ ನಿವಾಸ ಕಾವೇರಿಯಲ್ಲಿ ಸಂಜೆ 6 ಗಂಟೆಗೆ ಕೋವಿಡ್ ಉಸ್ತುವಾರಿ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಲಿದ್ದಾರೆ. ತಜ್ಞರ ಸಲಹಾ ಸಮಿತಿ ಸಲಹೆ ಆಧರಿಸಿ ಸಚಿವರು, ಅಧಿಕಾರಿಗಳ ಅಭಿಪ್ರಾಯ ಪಡೆದು ಲಾಕ್ಡೌನ್ ವಿಸ್ತರಣೆ ಕುರಿತು ಸಿಎಂ ಯಡಿಯೂರಪ್ಪ ಇಂದು ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
ಓದಿ:ಗ್ಯಾಂಗ್ ರೇಪ್ ಪ್ರಕರಣ: ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಶೂಟ್ ಮಾಡಿ ಬಂಧಿಸಿದ ಪೊಲೀಸರು