ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಕೋವಿಡ್ ಲಾಕ್ಡೌನ್ ನೀಡಿದ ಆರ್ಥಿಕ ಹೊಡೆತದಿಂದ ರಾಜ್ಯ ಸರ್ಕಾರ ಬಹುವಾಗಿ ಸಾಲವನ್ನೇ ನೆಚ್ಚಿಕೊಂಡಿದೆ. ಆದಾಯ ಸಂಗ್ರಹ ಸೊರಗಿದ ಕಾರಣ ಸಾಲದ ಮೊರೆ ಹೋದ ರಾಜ್ಯ ಸರ್ಕಾರ, ಕಳೆದ ಎರಡು ವರ್ಷ ಬಜೆಟ್ ಅಂದಾಜಿಗಿಂತಲೂ ಹೆಚ್ಚಿನ ಸಾಲ ಮಾಡಿದೆ. ಈ ವರ್ಷ ಆದಾಯ ಸಂಗ್ರಹ ಉತ್ತಮವಾಗಿದ್ದರೂ ಸರ್ಕಾರ ಮೊದಲ ತ್ರೈಮಾಸಿಕದಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಸಾಲ ಮಾಡಿದೆ.
ಬೊಮ್ಮಾಯಿ ಸರ್ಕಾರಕ್ಕೆ ಇದು ಚುನಾವಣಾ ವರ್ಷವಾಗಿದೆ. ಬಜೆಟ್ ಅನುಷ್ಠಾನದ ಅನಿವಾರ್ಯತೆ ಬಿಜೆಪಿ ಸರ್ಕಾರದ್ದಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ, ಅತಿವೃಷ್ಟಿಯಿಂದಾದ ನಷ್ಟ, ಪರಿಹಾರಕ್ಕಾಗಿ ಈ ಬಾರಿ ಬೊಮ್ಮಾಯಿ ಸರ್ಕಾರ ಅನುದಾನ ಬಿಡುಗಡೆ ಮಾಡಲೇಬೇಕಾದ ಒತ್ತಡದಲ್ಲಿದೆ. ಬಜೆಟ್ ಅನುಷ್ಠಾನ, ಅಭಿವೃದ್ಧಿ ಕಾರ್ಯದಲ್ಲಿ ಏರುಪೇರಾದರೆ ಬಿಜೆಪಿ ಸರ್ಕಾರ ಮುಂದಿನ ಹೊಸ್ತಿಲಲ್ಲಿರುವ ಬಿಬಿಎಂಪಿ ಚುನಾವಣೆ, ವಿಧಾನಸಭೆ ಚುನಾವಣೆಯಲ್ಲಿ ಎಡುವುದು ಖಚಿತ. ಇದೇ ಉದ್ದೇಶಕ್ಕೆ ಬೊಮ್ಮಾಯಿ ಸರ್ಕಾರ ನೀಡಿದ ಭರವಸೆ, ಅಭಿವೃದ್ಧಿ ಕಾರ್ಯ ಈಡೇರಿಸಲೇಬೇಕಾಗಿದೆ.
ಕಳೆದ ಎರಡು ವರ್ಷದ ಕೋವಿಡ್ ಲಾಕ್ಡೌನ್ಗೆ ರಾಜ್ಯದ ಬೊಕ್ಕಸ ಕ್ಷೀಣಿಸಿತ್ತು. ಆದಾಯ ಸಂಗ್ರಹ ನಿರೀಕ್ಷಿತ ಪ್ರಮಾಣದಲ್ಲಿ ಸಾಧ್ಯವಾಗಿಲ್ಲ. ಹೀಗಾಗಿ ಸರ್ಕಾರ ಬಹುವಾಗಿ ಸಾಲವನ್ನೇ ನಂಬಬೇಕಾಯಿತು. 2022-23 ಸಾಲಿನಲ್ಲಿ ಆದಾಯ ಸಂಗ್ರಹದಲ್ಲಿ ನಿರೀಕ್ಷೆಗಿಂತ ಉತ್ತಮ ಪ್ರಗತಿ ಸಾಧಿಸಿದೆ. ಆದರೂ ಬಾಕಿ ಕೆಲಸಗಳು, ನೆರೆ ಪರಿಹಾರ ಕಾಮಗಾರಿ ಮತ್ತು ಬಜೆಟ್ ಯೋಜನೆಗಳ ಸಮರ್ಪಕ ಅನುಷ್ಠಾನದ ಅನಿವಾರ್ಯತೆಯಲ್ಲಿರುವ ಬೊಮ್ಮಾಯಿ ಸರ್ಕಾರ ಈ ಬಾರಿಯೂ ಸಾಲವನ್ನೇ ಬಹುವಾಗಿ ನೆಚ್ಚಿಕೊಳ್ಳಬೇಕಾಗಿದೆ. ಕಳೆದ ಎರಡು ವರ್ಷವೂ ಸರ್ಕಾರ ಬಜೆಟ್ ಅಂದಾಜಿಗಿಂತ ಹೆಚ್ಚಿನ ಸಾಲ ಮಾಡಿದೆ. ಅದೇ ರೀತಿ ಈ ಬಾರಿಯೂ ಬೊಮ್ಮಾಯಿ ಸರ್ಕಾರ ಬಜೆಟ್ ಅಂದಾಜಿಗಿಂತಲೂ ಅಧಿಕ ಸಾಲ ಮಾಡುವುದು ಅನಿವಾರ್ಯ ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ.
ಬಜೆಟ್ ಅಂದಾಜು ಮೀರಿ ಸಾಲ:ಕಳೆದ ಎರಡು ವರ್ಷವೂ ರಾಜ್ಯ ಸರ್ಕಾರ ಬಜೆಟ್ ಅಂದಾಜು ಮೀರಿ ಸಾಲ ಮಾಡಿಕೊಂಡಿದೆ. ಆದಾಯ ಸಂಗ್ರಹದಲ್ಲಿ ಖೋತಾ ಆದ ಕಾರಣ ಹೇಳಿದ್ದಕ್ಕಿಂತ ಹೆಚ್ಚಿನ ಸಾಲ ಮಾಡಿ ಬೊಕ್ಕಸದ ಮೇಲಿನ ಹೊರೆಯನ್ನು ಹೆಚ್ಚಿಸಬೇಕಾಯಿತು. 2020-21ರಲ್ಲಿ ರಾಜ್ಯ ಸರ್ಕಾರ ಬಜೆಟ್ನಲ್ಲಿ ಅಂದಾಜು 52,918 ಕೋಟಿ ರೂ. ಸಾರ್ವಜನಿಕ ಸಾಲ ಮಾಡುವುದಾಗಿ ಹೇಳಿತ್ತು. ಆದರೆ ಹಣಕಾಸು ವರ್ಷದ ಅಂತ್ಯಕ್ಕೆ ಕೋವಿಡ್ ಲಾಕ್ ಡೌನ್ನಿಂದ ಎದುರಾದ ಆರ್ಥಿಕ ಸಂಕಷ್ಟದಿಂದ ಪಾರಾಗಲು ರಾಜ್ಯ ಸರ್ಕಾರ ಬರೋಬ್ಬರಿ 84,528 ಕೋಟಿ ರೂ. ಸಾಲ ಮಾಡಿಕೊಂಡಿದೆ. ಅಂದರೆ ಬಜೆಟ್ಗಿಂತ ರಾಜ್ಯ ಸರ್ಕಾರ 31,610 ಕೋಟಿ ರೂ. ಅಧಿಕ ಸಾಲವನ್ನು ಮಾಡಿಕೊಂಡಿದೆ.