ಬೆಂಗಳೂರು : ನಾಳೆಯಿಂದ 10 ದಿನಗಳ ಮಳೆಗಾಲದ ಅಧಿವೇಶನ ಆರಂಭವಾಗಲಿದ್ದು, ಪ್ರತಿಪಕ್ಷ ಹಾಗು ಆಡಳಿತ ಪಕ್ಷದ ನಡುವೆ ಸದನ ಕಲಹ ನಡೆಯಲಿದೆ. ಮೂರು ಪ್ರಮುಖ ಪಕ್ಷಗಳಿಗೆ ಈಗಾಗಲೇ 2023ರ ಚುನಾವಣೆ ಕಾವು ಮುಟ್ಟಿದ್ದು, ನಾಳೆಯಿಂದ ಸೆ.23ರ ತನಕ ನಡೆಯಲಿರುವ ಮಳೆಗಾಲದ ವಿಧಾನಮಂಡಲ ಅಧಿವೇಶನ ಪರಸ್ಪರ ಆರೋಪ-ಪ್ರತ್ಯಾರೋಪ, ಏಟು-ಎಿದುರೇಟು ನೀಡಲು ವೇದಿಕೆಯಾಗಿ ಪರಿಣಮಿಸಲಿದೆ.
ಇತ್ತ ಪ್ರತಿಪಕ್ಷಗಳು ಸರ್ಕಾರಕ್ಕೆ ಬೆಂಗಳೂರು ಮಳೆ ಅನಾಹುತ, ಕಮಿಷನ್ ಆರೋಪ, ನೇಮಕಾತಿ ಅಕ್ರಮಗಳು, ಕಾನೂನು ಸುವ್ಯವಸ್ಥೆ, ನೆರೆ ಹಾನಿ ಪರಿಹಾರ ಪಾವತಿ ಸಂಬಂಧ ಬಿಸಿ ಮುಟ್ಟಿಸಲು ಎಲ್ಲಾ ತಯಾರಿಗಳನ್ನು ನಡೆಸಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಈ ವಿಚಾರಗಳನ್ನು ಮುಂದಿಟ್ಟುಕೊಂಡು ಬೊಮ್ಮಾಯಿ ಸರ್ಕಾರವನ್ನು ತಿವಿಯಲು ಸಿದ್ಧವಾಗಿವೆ.
10 ದಿನಗಳ ಮಳೆಗಾಲದ ಅಧಿವೇಶನ : ಇತ್ತ ಪ್ರತಿಪಕ್ಷಗಳು ಮುಟ್ಟಿಸಲಿರುವ ಬಿಸಿ ತಣ್ಣಗಾಗಿಸಲು ಆಡಳಿತ ಪಕ್ಷವೂ ಸನ್ನದ್ಧವಾಗಿದೆ. ಸರ್ಕಾರದ ಅಭಿವೃದ್ಧಿ ಕೆಲಸ, ಸಾಧನೆ, ನೆರೆ ಪರಿಹಾರ ಸಂಬಂಧ ಸಮರ್ಥವಾಗಿ ಉತ್ತರಿಸಲು ತಯಾರಿ ನಡೆಸಿದೆ. ಪ್ರತಿಪಕ್ಷಗಳ ತಂತ್ರಗಾರಿಕೆಗೆ ಪ್ರತಿ ತಂತ್ರಗಾರಿಕೆಯನ್ನೂ ಬಿಜೆಪಿ ಹೆಣೆದುಕೊಂಡಿದೆ. ಮುಖ್ಯವಾಗಿ ಕಾಂಗ್ರೆಸ್ ಆಡಳಿತಾವಧಿಯ ಅಕ್ರಮಗಳು, ವೈಫಲ್ಯಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಪ್ರತಿಪಕ್ಷದ ಏಟಿಗೆ ಎದುರೇಟು ನೀಡಲು ಬೊಮ್ಮಾಯಿ ಸರ್ಕಾರವೂ ಸಿದ್ಧವಾಗಿದೆ.
ಬಿಜೆಪಿ ಪ್ರಮುಖವಾಗಿ ಪ್ರತಿಪಕ್ಷದ ಭ್ರಷ್ಟಾಚಾರದ ಅಸ್ತ್ರಕ್ಕೆ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಅವ್ಯವಹಾರ, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯಲ್ಲಿ ಅಕ್ರಮ, ಪೊಲೀಸ್ ಪೇದೆ ಹಾಗೂ ಶಿಕ್ಷಕರ ನೇಮಕದಲ್ಲಿ ಗೋಲ್‌ಮಾಲ್, ವಿದ್ಯುತ್ ಖರೀದಿ ಒಪ್ಪಂದ, ಸೋಲಾರ್ ಘಟಕಗಳ ಹಂಚಿಕೆ ಹಗರಣ, ಅರ್ಕಾವತಿ ರೀಡು ಪ್ರಕರಣಕ್ಕೆ ಸಂಬಂಧಿಸಿದ ನ್ಯಾ.ಕೆಂಪಣ್ಣ ಆಯೋಗದ ವರದಿ,ಬೆಂಗಳೂರಿನಲ್ಲಿ ಮಳೆ ಅವಾಂತರದ ಕಾರಣಗಳು, ಒತ್ತುವರಿ ತೆರವಿನ ದಾಖಲೆಗಳನ್ನು ಮಂಡಿಸಿ ಪ್ರತ್ಯಸ್ತ್ರ ಹೂಡಲು ಸಜ್ಜಾಗಿದೆ. ಆ ಮೂಲಕ 10 ದಿನಗಳ ಮಳೆಗಾಲದ ಅಧಿವೇಶನ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವಿನ ಮಾತಿನ ಮಲ್ಲಯುದ್ಧಕ್ಕೆ ಸಾಕ್ಷಿಯಾಗಲಿದೆ.