ಬೆಂಗಳೂರು:ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಗೆ ಅವಕಾಶ ಕಲ್ಪಿಸುವಂತೆ ಬಿಜೆಪಿ ಸದಸ್ಯರು ಆಗ್ರಹಿಸಿದ್ದು, ಅವಕಾಶ ನೀಡದಂತೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಇದರಿಂದಾಗಿ ಕಲಾಪವನ್ನು ಒಂದು ಗಂಟೆ ಮುಂದೂಡಿಕೆ ಮಾಡಲಾಯಿತು.
ವಿಧಾನ ಪರಿಷತ್ ನ ಬೆಳಗಿನ ಕಲಾಪ ಆರಂಭಗೊಳ್ಳುತ್ತಿದ್ದಂತೆ ಶಾಸನ ರಚನೆಗೆ ಅವಕಾಶ ನೀಡಲಾಯಿತು. ಆದರೆ ಅದಕ್ಕೂ ಮುನ್ನವೇ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಚರ್ಚೆಗೆ ಅವಕಾಶ ನೀಡಿ ಎಂದು ಸಭಾಪತಿಗಳಿಗೆ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಮನವಿ ಮಾಡಿದರು.
11 ಜನ ಸದಸ್ಯರು ಅವಿಶ್ವಾಸ ನಿರ್ಣಯ ಮಾಡಿ ನೋಟಿಸ್ ನೀಡಿ 14 ದಿನ ಆಗಿದೆ. ಹಾಗಾಗಿ ಇಂದಿನ ಕಲಾಪಕ್ಕೆ ಸೇರಿಸಿ ಚರ್ಚೆಗೆ ಅವಕಾಶ ಕೊಡಬೇಕು. ನಿನ್ನೆಗೇ 14 ದಿನ ಮುಗಿದಿದ್ದು, ಹಾಗಾಗಿ ಚರ್ಚೆಗೆ ಅವಕಾಶ ನೀಡಿ ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಬಿಜೆಪಿ ಸದಸ್ಯರ ಬೇಡಿಕೆಗೆ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದರು. ಇಂದು ಸಂಜೆಗೆ 14 ದಿನ ಆಗುತ್ತದೆ, ನಂತರ ಚರ್ಚೆ ಆಗಬೇಕು ಎಂದರು. ಪ್ರತಿಪಕ್ಷ ನಾಯಕರಿಗೆ ಬಿ.ಕೆ. ಹರಿಪ್ರಸಾದ್ ಸಾಥ್ ನೀಡಿದ್ರು.