ಬೆಂಗಳೂರು: ವಿಧಾನಸಭೆಯಲ್ಲಿ ಅನುಮೋದನೆ ಪಡೆದಿದ್ದ ಬಹುಮುಖ್ಯ ವಿಧೇಯಕ ಗೋಹತ್ಯೆ ನಿಷೇಧ ಕಾಯ್ದೆ ವಿಧಾನ ಪರಿಷತ್ನಲ್ಲಿ ಮಂಡನೆಯಾಗುವ ಮುನ್ನವೇ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಯಿತು.
ಕಲಾಪ ಸಲಹಾ ಸಮಿತಿ ಸಭೆಯಲ್ಲಿ ನಿನ್ನೆ ಕೈಗೊಂಡ ತೀರ್ಮಾನದಂತೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಕೊನೆಹಂತದಲ್ಲಿ ನಡೆದ ಚರ್ಚೆಯಲ್ಲಿ ಬಿಜೆಪಿ ಸದಸ್ಯರು ಕಲಾಪವನ್ನು ವಾರದವರೆಗೂ ಮುಂದುವರಿಸುವಂತೆ ಒತ್ತಾಯಿಸಿದರು. ಆದರೆ ಕಾಂಗ್ರೆಸ್ ಸದಸ್ಯರು ವಿಧಾನಸಭೆಯಲ್ಲಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ವಿಧಾನ ಪರಿಷತ್ನಲ್ಲಿ ಇದೇ ಸಂಪ್ರದಾಯ ಮುಂದುವರಿಯಬೇಕು. ಪರಿಷತ್ ಕಲಾಪವನ್ನು ಕೂಡ ಅನಿರ್ದಿಷ್ಟ ಕಾಲಾವಧಿಗೆ ಮುಂದೂಡಬೇಕು ಎಂದು ಒತ್ತಾಯಿಸಿದರು.
ನಿನ್ನೆಯ ಕಲಾಪ ಸಲಹಾ ಸಮಿತಿಯಲ್ಲಿ ಇದೇ ವಿಚಾರವಾಗಿ ಸುದೀರ್ಘ ಚರ್ಚೆ ನಡೆದಿತ್ತು. ಆದರೆ, ಕಲಾಪದಲ್ಲಿ ತಮ್ಮ ತೀರ್ಮಾನ ಪ್ರಕಟಿಸುವುದಾಗಿ ತಿಳಿಸಿದ್ದ ಸಭಾಪತಿಗಳು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ ತಮ್ಮ ನಿರ್ಧಾರ ಪ್ರಕಟಿಸಿದರು.
ಕಡೆಯ ಕ್ಷಣದಲ್ಲಿ ಹೈಡ್ರಾಮ
ಒಂದೆಡೆ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ವಿಚಾರ ಚರ್ಚೆ ಕೈಗೆತ್ತಿಕೊಳ್ಳುವಂತೆ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಒತ್ತಡ ಹೇರಿದರೆ, ಇನ್ನೊಂದೆಡೆ ಕಾಂಗ್ರೆಸ್ ಸದಸ್ಯ ಬಿ ಕೆ ಹರಿಪ್ರಸಾದ್ ಅಜೆಂಡಾದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯ ಮೇಲಿನ ಚರ್ಚೆ ಕೈಗೆತ್ತಿಕೊಳ್ಳದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಆಡಳಿತ ಪಕ್ಷದ ಕಡೆಯಿಂದ ಸಭಾನಾಯಕರು ಸಂಬಂಧಪಟ್ಟ ಸಚಿವರು ಸದನದಲ್ಲಿ ಇಲ್ಲದ ಹಿನ್ನೆಲೆ ನಾಳೆಗೆ ಈ ವಿಚಾರ ಕೈಗೆತ್ತಿಕೊಳ್ಳುತ್ತೇನೆ ಎಂದು ಸಮಜಾಯಿಷಿ ನೀಡಿದರು.
ಓದಿ:ಸರ್ಕಾರದ ವಿರುದ್ಧ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡ ಹೈಕೋರ್ಟ್
ತಮ್ಮ ಪಟ್ಟು ಸಡಿಲಿಸದ ಆಯನೂರು ಮಂಜುನಾಥ್, ಸಭಾಪತಿಗಳಿಗೆ ಮತ್ತೊಮ್ಮೆ ಅವಿಶ್ವಾಸ ನಿರ್ಣಯ ವಿಚಾರಕ್ಕೆ ಉತ್ತರಿಸುವಂತೆ ಒತ್ತಾಯಿಸಿದರು. ಸಿಟ್ಟಾಗಿ ಉತ್ತರಿಸಿದ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ಈ ವಿಚಾರದಲ್ಲಿ ನಾನು ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ಸಂಬಂಧ ಕಾನೂನು ತಜ್ಞರ ಬಳಿ ಮಾಹಿತಿ ಕೋರಿದ್ದು ಅವರಿಂದ ಲಭಿಸುವ ವಿವರ ಆದರಿಸಿ ಅವರೊಂದಿಗೆ ಚರ್ಚಿಸಿ ತೀರ್ಮಾನ ತಿಳಿಸುವುದಾಗಿ ವಿವರಿಸಿದರು. ನಿರ್ಧಾರ ಕೈಗೊಳ್ಳಲು ನನಗೆ ಇನ್ನೂ ಕಾಲಾವಧಿ ಇದೆ ಎಂದು ವಿವರಿಸಿ ಚರ್ಚೆಗೆ ಕೊನೆ ಹಾಡಿದರು.
ಕಲಾಪವನ್ನು ಡಿಸೆಂಬರ್ 15ರವರೆಗೆ ಮುಂದುವರಿಸುವುದು ಅಥವಾ ಅನಿರ್ದಿಷ್ಟಾವಧಿಗೆ ಮುಂದೂಡುವುದು ಎಂಬ ವಿಚಾರಕ್ಕೆ ಸ್ಪಷ್ಟನೆ ನೀಡದ ಸಭಾಪತಿಗಳು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.