ಬೆಂಗಳೂರು:ರಾಜ್ಯ ಸರ್ಕಾರ ಕೊರೊನಾ ನಿರ್ವಹಣೆ ವಿಚಾರದಲ್ಲಿ ಬಾಗಲಕೋಟೆ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿ ಆರೋಪಿಸಿರುವ ಅವರು, ಜಿಲ್ಲೆಯಲ್ಲಿ ಬೆಡ್, ಆಕ್ಸಿಜನ್ ಹಾಗೂ ರೆಮ್ಡಿಸಿವಿರ್ ಕೊರತೆಯಿಂದ ರೋಗಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಕೇವಲ 157 ವಯಲ್ಸ್ ರೆಮ್ಡೆಸಿವಿರ್ ಇಂಜೆಕ್ಷನ್ ಅಷ್ಟೇ ಲಭ್ಯವಿದ್ದು ಅಗತ್ಯ ಸಂದರ್ಭದಲ್ಲಿ ಔಷಧ ಸಿಗದೇ ರೋಗಿಗಳು ಪರದಾಡುವಂತಾಗಿದೆ ಎಂದಿದ್ದಾರೆ.
ಬಾಗಲಕೋಟೆಯಲ್ಲಿ ಆಕ್ಸಿಜನ್ ಅಭಾವ ಇದೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿನಿತ್ಯ 3 ಸಾವಿರ ಲೀಟರ್ ಆಕ್ಸಿಜನ್ & ಖಾಸಗಿ ಆಸ್ಪತ್ರೆಗಳಿಗೆ 14 ಸಾವಿರ ಲೀಟರ್ ಆಕ್ಸಿಜನ್ ಅಗತ್ಯವಿದೆ. ಆದರೆ ಸರ್ಕಾರಿ ಆಸ್ಪತ್ರೆಗಳಿಗೆ ಪ್ರತಿದಿನ 1.5 ಸಾವಿರ ಲೀಟರ್ ಆಕ್ಸಿಜನ್, ಖಾಸಗಿ ಆಸ್ಪತ್ರೆಗಳಿಗೆ 6 ಸಾವಿರ ಲೀಟರ್ ಆಕ್ಸಿಜನ್ ಪೂರೈಕೆಯಾಗುತ್ತಿದೆ ಎಂಬ ಮಾಹಿತಿ ನೀಡಿದ್ದಾರೆ.
ಬಾಗಲಕೋಟೆ ಜಿಲ್ಲೆಗೆ ಪ್ರತಿನಿತ್ಯ 17 ಸಾವಿರ ಲೀಟರ್ ಆಕ್ಸಿಜನ್ ಅಗತ್ಯವಿದ್ದು, ಈಗ ಪ್ರತಿದಿನ 7.5 ಸಾವಿರ ಲೀಟರ್ ಆಕ್ಸಿಜನ್ ಅಷ್ಟೇ ಪೂರೈಕೆಯಾಗುತ್ತಿದೆ. ರೋಗಿಗಳು ಆಕ್ಸಿಜನ್ ಸಿಗದೆ ನರಳಿ ಪ್ರಾಣ ಬಿಡುತ್ತಿದ್ದಾರೆ. ಮುಖ್ಯಮಂತ್ರಿಗಳು ಕೂಡಲೇ ಬಾಗಲಕೋಟೆ ಜಿಲ್ಲೆಯತ್ತ ಗಮನ ಹರಿಸಲಿ ಎಂದು ಮನವಿ ಮಾಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ : ಚಾಮರಾಜನಗರ ದುರಂತ: ತನಿಖೆ ನಡೆಸಲು ಮುಂದಾದ ಲೋಕಾಯುಕ್ತ ಸಂಸ್ಥೆ