ಕರ್ನಾಟಕ

karnataka

ETV Bharat / state

2023ಕ್ಕೆ ಹೈಕಮಾಂಡ್ ನೇತೃತ್ವದಲ್ಲಿ ಚುನಾವಣೆ ಎದುರಿಸಲಿದೆ ರಾಜ್ಯ ಕೇಸರಿ ಪಡೆ - bjp national executive meeting in hyderabad

2023ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಹೈಕಮಾಂಡ್​ ನೇತೃತ್ವದಲ್ಲಿ ಚುನಾವಣೆಗೆ ಸ್ಪರ್ಧಿಸಲಿದ್ದು, ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿ ಇರುವಾಗಲೇ ಕೇಂದ್ರ ನಾಯಕರು ಕರ್ನಾಟಕದಲ್ಲಿ ಭರ್ಜರಿ ಪ್ರಚಾರ ನಡೆಸುವ ಮಾಸ್ಟರ್​ ಪ್ಲಾನ್​ ಸಿದ್ದಪಡಿಸಿಕೊಂಡಿದ್ದಾರೆ.

bjp national executive meeting
ಬಿಜೆಪಿ ರಾಷ್ಟ್ರೀಯ ಕಾರ್ಯಕರಿಣಿ ಸಭೆ

By

Published : Jul 5, 2022, 10:23 AM IST

ಬೆಂಗಳೂರು: 2023ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಹೈಕಮಾಂಡ್ ನೇರವಾಗಿ ರಂಗಪ್ರವೇಶ ಮಾಡಲಿದೆ. ಇಡೀ ಚುನಾವಣೆಯನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲಿದ್ದು, ಅದಕ್ಕಾಗಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾಸ್ಟರ್​ ಪ್ಲಾನ್ ಕೂಡ ಸಿದ್ದಪಡಿಸಲಾಗಿದೆ.

ಕರ್ನಾಟಕದಲ್ಲಿ ಅಧಿಕಾರ ಕಳೆದುಕೊಂಡರೆ ದಕ್ಷಿಣ ಭಾರತದಲ್ಲಿ ಬಿಜೆಪಿ ಬಾಗಿಲು ಮುಚ್ಚಿದಂತಾಗಲಿದೆ. ಬಿಜೆಪಿ ಉತ್ತರ ಭಾರತಕ್ಕೆ ಮಾತ್ರ ಸೀಮಿತ ಎನ್ನುವ ಹಣೆಪಟ್ಟಿ ಮತ್ತೊಮ್ಮೆ ಬೀಳಲಿದೆ. ಹಾಗಾಗಿ ಯಾವ ಕಾರಣಕ್ಕೂ ಕರ್ನಾಟಕ ಕೈತಪ್ಪಬಾರದು ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ನವೆಂಬರ್​ ತಿಂಗಳಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆ ಮುಗಿಯುತ್ತಿದ್ದಂತೆ ನಾಲ್ಕೈದು ತಿಂಗಳಿನಲ್ಲಿ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಜರಾತ್ ಚುನಾವಣೆ ಬಳಿಕ ಕರ್ನಾಟಕಕ್ಕೆ ಆಗಮಿಸಿ ಚುನಾವಣೆವರೆಗೂ ಇಲ್ಲೇ ಬೀಡುಬಿಡಲಿದ್ದಾರೆ. ಅದಕ್ಕಾಗಿ ನಗರದ ಹೊರವಲಯದಲ್ಲಿ ವಾರ್ ರೂಂ ಅನ್ನು ಕೂಡ ಸಿದ್ದಪಡಿಸಿಕೊಳ್ಳಲಾಗುತ್ತಿದೆ.

ಅಭ್ಯರ್ಥಿಗಳ ಆಯ್ಕೆ, ಪ್ರಚಾರತಂತ್ರ ಸೇರಿದಂತೆ ಇಡೀ ಚುನಾವಣೆಯನ್ನು ಅಮಿತ್ ಶಾ ನಿರ್ವಹಣೆ ಮಾಡಲಿದ್ದಾರೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಈ ಬಾರಿ ಎರಡು ತಿಂಗಳ ಕಾಲ ರಾಜ್ಯದಲ್ಲಿ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಆದಿಚುಂಚನಗಿರಿ ಶಾಖಾ ಮಠದಲ್ಲಿ ವಾಸ್ತವ್ಯ ಹೂಡಿ ಪಕ್ಷದ ಪರ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಖಡಕ್ ನಿರ್ಧಾರಗಳ ಮೂಲಕ ದೇಶದ ಜನತೆಯ ಗಮನ ಸೆಳೆದಿರುವ ಯೋಗಿ ಆದಿತ್ಯನಾಥ್ ರಾಜ್ಯದಲ್ಲೂ ಮೋಡಿ ಮಾಡಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನವೆಂಬರ್ ನಂತರ ಸತತವಾಗಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಪಕ್ಷದ ಪರ ಭರ್ಜರಿ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಅಭಿವೃದ್ಧಿ ಜೊತೆ ಜೊತೆಗೆ ಪಕ್ಷದ ಪ್ರಚಾರ ಕಾರ್ಯವನ್ನೂ ನಡೆಸಲಿದ್ದಾರೆ.

2018ರ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು, ಅದಕ್ಕೂ ಹಿಂದಿನ ಚುನಾವಣೆಗಳು ಯಡಿಯೂರಪ್ಪ, ಅನಂತ್ ಕುಮಾರ್ ನೇತೃತ್ವದಲ್ಲಿ ನಡೆದಿದ್ದವು ಕಳೆದ ಚುನಾವಣೆವರೆಗೂ ರಾಜ್ಯದ ನಾಯಕರ ಕೈಯಲ್ಲಿ ಚುನಾವಣೆ ನಡೆಸುವ ಜವಾಬ್ದಾರಿ ಇತ್ತು ಆದರೆ ಈ ಬಾರಿ ಹೈಕಮಾಂಡ್ ನೇರವಾಗಿ ಚುನಾವಣಾ ಜವಾಬ್ದಾರಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ.

ಸಧ್ಯ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪಕ್ಷದಲ್ಲಿ ಯಾವುದೇ ಜವಾಬ್ದಾರಿ ಹೊಂದಿಲ್ಲ. ಹಾಗಾಗಿ ಅವರ ನೇತೃತ್ವದಲ್ಲಿ ಚುನಾವಣೆ ನಡೆಯುವುದಿಲ್ಲ, ಬೊಮ್ಮಾಯಿಗೆ ನೇತೃತ್ವ ಎನ್ನಲಾಗುತ್ತಿದ್ದರೂ ಸಾಮೂಹಿಕ ನಾಯಕತ್ವ ಜಪ ಆರಂಭಗೊಂಡಿದೆ ಈ ನಡುವೆ ಈಗ ಹೈಕಮಾಂಡ್ ರಂಗಪ್ರವೇಶ ಮಾಡುತ್ತಿದ್ದು, ಬಿಜೆಪಿ ಹೈಕಮಾಂಡ್ ನಾಯಕತ್ವದಲ್ಲಿ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಚುನಾವಣೆಯನ್ನು ಎದುರಿಸಲಿದೆ.

ಕಾರ್ಯಕಾರಿಣಿಯಲ್ಲಿ ರಾಜ್ಯ ಬಿಜೆಪಿಗೆ ನೀಡಿದ ಸಂದೇಶ:ಬೂತ್ ಮಟ್ಟದಲ್ಲಿ ಪಕ್ಷ ಬಲವರ್ಧನೆ ಆಗಬೇಕು, ಬೂತ್ ಮಟ್ಟದಲ್ಲೇ ಎಲ್ಲಾ ದಿನಾಚರಣೆಗಳ ಆಚರಣೆ ಮಾಡಬೇಕು. ಶಿಕ್ಷಕ, ಸೈನಿಕ, ವೈದ್ಯ ಸೇರಿದಂತೆ ಸಾಧಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಬೇಕು. ಪ್ರತಿ ಬೂತ್​ಗಳಲ್ಲಿಯೂ ಇದನ್ನು ಕಡ್ಡಾಯವಾಗಿ ಜಾರಿಗೆ ತರಬೇಕು ಎಂದು ರಾಜ್ಯ ಘಟಕಕ್ಕೆ ಸೂಚನೆ ನೀಡಿದೆ.

ಅಲ್ಪಸಂಖ್ಯಾತರಲ್ಲಿಯೂ ತುಳಿತಕ್ಕೊಳಗಾದ, ನಿರ್ಲಕ್ಷ್ಯಕ್ಕೊಳಗಾದ ದುರ್ಬಲ ವರ್ಗದವರಿದ್ದಾರೆ ಅವರನ್ನು ವಿಶ್ವಾಸಕ್ಕೆ ಪಡೆಯಬೇಕು, ಅವರ ಪರ ನಿಲ್ಲಬೇಕು, ಅವರ ಮತಬುಟ್ಟಿಗೆ ಕೈಹಾಕುವ ಮೂಲಕ ಅಸ್ಸೋಂ ಮಾದರಿಯಲ್ಲಿ ಅಲ್ಪಸಂಖ್ಯಾತರನ್ನು ಪಕ್ಷದೆಡೆಗೆ ಸೆಳೆಯಬೇಕು ಎಂದು ಖುದ್ದು ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಆಪರೇಷನ್ ಕಮಲ:ಹಳೆ ಮೈಸೂರಿನಲ್ಲಿ ಪಕ್ಷ ಬಲವರ್ಧನೆ ಮಾಡಬೇಕು, ಜೆಡಿಎಸ್, ಕಾಂಗ್ರೆಸ್ ಪ್ರಾಬಲ್ಯ ಇರುವ ಇಲ್ಲಿ ಈ ಬಾರಿ ಕಮಲ ಅರಳಬೇಕು. ಅದಕ್ಕಾಗಿ ಕಳೆದ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದಿದ್ದ ಅಭ್ಯರ್ಥಿಗಳ ಸೆಳೆಯಬೇಕು. ಆ ಮೂಲಕ ಹಳೆ ಮೈಸೂರು ಭಾಗದಲ್ಲಿ ಪ್ರಬಲ ಪೈಪೋಟಿ ನೀಡುವ ಅಭ್ಯರ್ಥಿಗಳ ಲಭ್ಯತೆ ಇರುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯದ ನಾಯಕರಿಗೆ ಹೈಕಮಾಂಡ್ ಸೂಚನೆ ನೀಡಿದೆ.

ಅತ್ಯಂತ ಕಳಪೆ ಸಾಧನೆ ತೋರಿದ್ದ ಕ್ಷೇತ್ರಗಳತ್ತಲೂ ಬಿಜೆಪಿ ಚಿತ್ತ ಹರಿಸಿದ್ದು, ಅಲ್ಲಿಯೂ ಗಮನ ಹರಿಸಲು ಮುಂದಾಗಿದೆ. ಕಳಪೆ ಸಾಧನೆ ಇರುವ ಕಡೆ ಪ್ರಭಾವಿ ಪ್ರತಿಸ್ಪರ್ಧಿ ಇಲ್ಲದಂತೆ ನೋಡಿಕೊಳ್ಳಬೇಕು ಅದಕ್ಕಾಗಿ ಇತರ ಪಕ್ಷಗಳ ನಾಯಕರನ್ನು ಸೆಳೆಯುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಕ್ಯಾಬಿನೆಟ್ ಯಥಾಸ್ಥಿತಿ:ಸದ್ಯದ ಮಟ್ಟಿಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯಂತಹ ಕೆಲಸ ಮಾಡುವುದು ಬೇಡ, ಸದ್ಯ ಇರುವ ವ್ಯವಸ್ಥೆ ಮುಂದುವರೆಯಲಿ, ಇದರಲ್ಲಿ ಯಾವ ಬದಲಾವಣೆ ಬೇಡ, ಯಥಾಸ್ಥಿತಿ ಇರಲಿ ಎಂದು ಸಿಎಂ ಬೊಮ್ಮಾಯಿಗೆ ತಿಳಿಸಿದ್ದಾರೆ.

ಇದನ್ನೂ ಓದಿ:ಉದಯಪುರ ಹತ್ಯೆ ಪ್ರಕರಣ: ಅಮಿತ್ ಶಾ ಭೇಟಿ ಮಾಡಿ ಮಾಹಿತಿ ಕೊಟ್ಟ ಎನ್‌ಐಎ ಮುಖ್ಯಸ್ಥ

For All Latest Updates

ABOUT THE AUTHOR

...view details