ಬೆಂಗಳೂರು: ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, ಮೊದಲ ದಿನ ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಿದರು.ರಾಜ್ಯಪಾಲರ ಭಾಷಣ ಮುಕ್ತಾಯದ ಬಳಿಕ ಸಮಾವೇಶಗೊಂಡ ವಿಧಾನ ಪರಿಷತ್‌ನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅಗಲಿದ ಗಣ್ಯರಿಗೆ ಸಂತಾಪ ವ್ಯಕ್ತಪಡಿಸಿದರು.
ಮಾಜಿ ಸಚಿವ ಡಾ.ಎಚ್.ಡಿ.ಲಮಾಣಿ, ಹಿರಿಯ ಸಾಹಿತಿ ಹಾಗೂ ಸಂಶೋಧಕ ಡಾ.ಎಚ್.ಚಂದ್ರಶೇಖರ್, ಖ್ಯಾತ ಲೇಖಕಿ ಹಾಗೂ ಕಾದಂಬರಿಗಾರ್ತಿ ಸಾರಾ ಅಬೂಬಕ್ಕರ್, ಹಿರಿಯ ಶಿಕ್ಷಣ ತಜ್ಞ ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಅಧ್ಯಕ್ಷ ಡಾ.ಪಾಂಡುರಂಗ ಶೆಟ್ಟಿ, ನಾಡಿನ ಹಿರಿಯ ಗಮಕಿ ಹಾಗೂ ಸುಗಮ ಸಂಗೀತಗಾರ ಚಂದ್ರಶೇಖರ್ ಕೆದ್ಲಾಯ, ಕನ್ನಡದ ಖ್ಯಾತ ಭಾಷಾ ವಿಜ್ಞಾನಿ ಹಾಗೂ ಹಿರಿಯ ವಿಮರ್ಶಕ ಕೆ.ವಿ.ತಿರುಮಲೇಶ್, ಜನಪ್ರಿಯ ಗಾಯಕಿ ವಾಣಿ ಜಯರಾಂ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಬಿ.ಕೆ.ಎಸ್ ವರ್ಮ ಅವರಿಗೆ ಸಂತಾಪ ಸಲ್ಲಿಸಲಾಯಿತು. ನಂತರ ಸಭಾ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಸಂತಾಪ ಸೂಚಿಸಿದರು. ಅಗಲಿದ ಗಣ್ಯರಿಗೆ ಗೌರವ ಸೂಚಿಸಿ ಒಂದು ನಿಮಿಷ ಮೌನ ಆಚರಿಸಲಾಯಿತು.