ಬೆಂಗಳೂರು : ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೆ ಸಿಗಬೇಕು ಎಂಬ ಕೂಗು ಬಹಳ ದಿನಗಳಿಂದ ಕೇಳಿ ಬರ್ತಿದೆ. ಅಲ್ಲದೆ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಶೇ.75 ಮೀಸಲಾತಿ ಮಸೂದೆಗೆ ಆಂಧ್ರ ಪ್ರದೇಶದ ವಿಧಾನಸಭೆ ಅಂಗೀಕರಿಸಿದ ಮೇಲೆ ಕರ್ನಾಟಕದಲ್ಲೂ ಇಂತಹ ಕಾನೂನು ತರಬೇಕು ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಒತ್ತಾಯಿಸುತ್ತಿದ್ದಾರೆ.
ಕರ್ನಾಟಕದ ಕೆಲಸಗಳು ಕನ್ನಡಿಗರಿಗೇ ಕೊಡಿ ಕರ್ನಾಟಕದ ಕೆಲಸ ಕನ್ನಡಿಗರಿಗೆ ಸಿಗಬೇಕು ಎಂದು ಆಗ್ರಹಿಸಿ ಆಗಸ್ಟ್ 13 ಮತ್ತು 14 ಕ್ಕೆ ಬೆಂಗಳೂರಿನ ರೇಸ್ ಕೋರ್ಸ್ ಬಳಿ ಎರಡು ದಿನ ಉಪವಾಸ ಸತ್ಯಾಗ್ರಹಕ್ಕೆ ಕನ್ನಡ ಪರ ಹೋರಾಟಗಾರರು ಆನ್‌ಲೈನ್‌ನಲ್ಲಿ ಕರೆ ನೀಡಿದ್ದಾರೆ. ಈ ಹೋರಾಟಕ್ಕೆ ಕನ್ನಡ ಚಿತ್ರರಂಗದ ನಟ ನಿರ್ದೇಶಕರು ಬೆಂಬಲ ನೀಡಿದ್ದಾರೆ.
ಹಿರಿಯ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರ ಶೇಖರ್, ನಟ ಮತ್ತು ನಿರ್ದೆಶಕರಾದ ಉಪೇಂದ್ರ, ರಿಷಬ್ ಶೆಟ್ಟಿ, ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಸೇರಿದಂತೆ ಹಿರಿಯ ಕಲಾವಿದರು ‘ಕರ್ನಾಟಕದ ಕೆಲಸ ಕನ್ನಡಿಗರಿಗೆ’ ಎಂಬ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಈ ಕೂಗು ಕರ್ನಾಟಕದಲ್ಲಿ ತುಂಬಾ ದಿನಗಳಿಂದ ಕೇಳಿ ಬರ್ತಿದೆ. ಕರ್ನಾಟಕದಲ್ಲಿ ಕನ್ನಡಿಗನೆ ಸಾರ್ವಭೌಮ. ಆಗಾಗಿ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು. ಆಗಷ್ಟ್ 13, 14ರಂದು ನಡೆಯುವ ಉಪವಾಸ ಸತ್ಯಾಗ್ರಹಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ವಿಡಿಯೋ ಮೂಲಕ ಹೇಳಿದ್ದಾರೆ.
ರಾಜ್ಯದ ಖಾಸಗಿ ಹಾಗೂ ಸರ್ಕಾರಿ ವಲಯದಲ್ಲಿ ಕನ್ನಡಿಗರಿಗೆ ಶೇ.90ರಷ್ಟು ಉದ್ಯೋಗ ಮೀಸಲಾತಿ ಒದಗಿಸಬೇಕು ಎಂದು ಮುಖ್ಯಮಂತ್ರಿಗಳನ್ನು ನೆಟ್ಟಿಗರು ಒತ್ತಾಯಿಸಿದ್ದಾರೆ. ಬೆಂಗಳೂರಿನ ಕೆಲವು ಖಾಸಗಿ ಕಂಪನಿಗಳು ಉತ್ತರ ಭಾರತದ ಅಭ್ಯರ್ಥಿಗಳಿಗೆ ವಿಶೇಷ ಪ್ರಾಮುಖ್ಯತೆ ನೀಡುತ್ತಿವೆ. ಇದನ್ನು ವಿರೋಧಿಸಿ ನೆಟ್ಟಿಗರು #KarnatakaJobsForKannadigas ಎಂಬ ಹ್ಯಾಶ್ ಟ್ಯಾಗ್‌ನಲ್ಲಿ ಅಭಿಯಾನ ನಡೆಸುತ್ತಿದ್ದಾರೆ.