ಬೆಂಗಳೂರು: ಕರುನಾಡಿಗೆ ಈಗ 50ರ ಸಂಭ್ರಮ. ಮೈಸೂರು ರಾಜ್ಯ ‘ಕರ್ನಾಟಕ’ ಎಂದು ನಾಮಕರಣಗೊಂಡು 50 ವರ್ಷ ಪೂರ್ಣಗೊಳ್ಳುತ್ತಿರುವ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. ಅಮೃತ ಭಾರತಿಗೆ 50ರ ಕನ್ನಡದ ಆರತಿಯ ಸಂಭ್ರಮದಲ್ಲಿನ ಕರುನಾಡು ದೇಶದ ಆರ್ಥಿಕ ವಿಕಾಸದ ಎಂಜಿನ್ ಆಗಿ ಹೊರಹೊಮ್ಮಿದೆ.
ಮೈಸೂರು ರಾಜ್ಯ 1973 ಅಕ್ಟೋಬರ್ 20ರಂದು ಕರ್ನಾಟಕ ಎಂದು ಮರು ನಾಮಕರಣಗೊಂಡಿದ್ದು ಈಗ 50 ವರ್ಷ ಪೂರೈಸುತ್ತಿದೆ. ಈ ಐತಿಹಾಸಿಕ ಸಂದರ್ಭದಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ ಸಾರುವಂತಹ ವಿಶೇಷವಾದ ಕಾರ್ಯಕ್ರಮಗಳನ್ನು ರೂಪಿಸಿ ವರ್ಷವಿಡೀ ಆಯೋಜಿಸಲು ಕರುನಾಡು ಅಣಿಯಾಗಿದೆ. ಪ್ರಗತಿಶೀಲ ರಾಜ್ಯ ಕಾರ್ನಾಟಕ ತನ್ನ 50 ವರ್ಷದ ವಿಕಾಸದ ಹಾದಿಯಲ್ಲಿ ಅನೇಕ ಮೇಲ್ಪಂಕ್ತಿಗಳನ್ನು ಹಾಕಿ ಇಡೀ ಜಗತ್ತೇ ತಿರುಗಿ ನೋಡುವ ದೇಶದ ಆರ್ಥಿಕತೆಗೆ ಭದ್ರ ಬುನಾದಿ ಹಾಕುವ ಕೆಲಸ ಮಾಡಿದೆ. ಐಟಿ ಸಿಟಿ, ಸಿಲಿಕಾನ್ ಸಿಟಿ ಬೆಂಗಳೂರು ಎಂಬ ರಾಜಧಾನಿ ಹೊಂದಿರುವ ಕರ್ನಾಟಕ ಮೊದಲಿನಿಂದಲೂ ಪ್ರಗತಿಯ ಹಾದಿಯಲ್ಲಿ ಮುಂದು.
ಕಾಲದಿಂದ ಕಾಲಕ್ಕೆ ಕೈಗೊಂಡ ಆರ್ಥಿಕ ಸುಧಾರಣಾ ಕ್ರಮಗಳೇ ಈ ಪ್ರಗತಿಯ ಅಡಿಪಾಯ. ಹಾಗಾಗಿ ಇವತ್ತು ದೇಶದ ವಿಕಾಸದ ಎಂಜಿನ್ ಎಂಬ ಹೆಗ್ಗಳಿಕೆಯ ಹೆಗ್ಗುರುತನ್ನು ಕರ್ನಾಟಕ ಮೂಡಿಸಿದೆ. ರಾಜ್ಯದ ಬಜೆಟ್‌ನ ಇತಿಹಾಸವನ್ನು ಅವಲೋಕಿಸಿದರೆ ಅಭಿವೃದ್ಧಿಯ ಪಥ ಹೇಗೆ ಸಾಗಿ ಬಂದಿದೆ ಎಂಬುದರ ಸ್ಥೂಲ ಚಿತ್ರಣ ದೊರಕುತ್ತದೆ. ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರು 1952-53 ರಲ್ಲಿ 21 ಕೋಟಿ ರೂಗಳ ಬಜೆಟ್ ಅನ್ನು ಮೊದಲ ಬಾರಿಗೆ ಮಂಡಿಸಿದ್ದರು. ಇಂತಹ ಪ್ರಗತಿಪರ ರಾಜ್ಯದ ಮೊದಲ ಬಜೆಟ್‌ನ ಗಾತ್ರ 21.03 ಕೋಟಿ ರೂ. ಇತ್ತು. ಇದೀಗ ರಾಜ್ಯದ ಬಜೆಟ್‌ನ ಗಾತ್ರ 3 ಲಕ್ಷ ಕೋಟಿ ರೂ. ದಾಟಿದೆ.
ರಾಜ್ಯದ ಆರ್ಥಿಕ ಹೆಜ್ಜೆಗುರುತು:ಕರ್ನಾಟಕ ದೇಶದ ಮೂರನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ಪ್ರಗತಿಶೀಲ ರಾಜ್ಯವಾಗಿದೆ. ಕರುನಾಡಿನ ಆರ್ಥಿಕತೆ 2023-24 ಸಾಲಿನಲ್ಲಿ 7.9%ರ ವೇಗದಲ್ಲಿ ಪ್ರಗತಿ ಸಾಧಿಸುವ ಅಂದಾಜು ಮಾಡಲಾಗಿದೆ. ದೇಶದ 7% ಜಿಡಿಪಿ ದರಕ್ಕೆ ಹೋಲಿಸಿದರೆ ರಾಜ್ಯದ ಜಿಡಿಪಿ ದರ ಅಧಿಕವಾಗಿದೆ.
ಕರ್ನಾಟಕ ದೇಶದ ಮೂರನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ಹೆಗ್ಗಳಿಕೆ ಗಳಿಸಿದೆ. 2023-24 ಆರ್ಥಿಕ ವರ್ಷದಲ್ಲಿ ಕರುನಾಡಿನ ಜಿಎಸ್ಡಿಪಿ 23.3 ಲಕ್ಷ ಕೋಟಿ ಇರಲಿದೆ. ಕರ್ನಾಟಕ ಸಿರಿವಂತರ ನಾಡಾಗಿದೆ. ದೇಶದಲ್ಲಿನ, ಅಗ್ರಗಣ್ಯ ಪಂಚ ಸಂಪದ್ಬರಿತ ರಾಜ್ಯಗಳ ಪೈಕಿ ಒಂದಾಗಿದೆ. ಕರ್ನಾಟಕದ ಜನರು ಸರಾಸರಿ 3.32 ಲಕ್ಷ ರೂ. ತಲಾ ಆದಾಯ ಹೊಂದಿರುವ ಮೂಲಕ ದೇಶದಲ್ಲೇ ಅಗ್ರಗಣ್ಯ ಸಾಲಿನಲ್ಲಿ ನಿಲ್ಲುತ್ತದೆ.
1960-61ರಲ್ಲಿ ನಿವ್ವಳ ರಾಜ್ಯ ದೇಶೀಯ ಉತ್ಪಾದನೆ 692 ಕೋಟಿ ರೂ. ಇತ್ತು. ಅದೇ ರೀತಿ ರಾಜ್ಯದ ತಲಾ ಆದಾಯ 296 ರೂ. ಇತ್ತು. 1970-71ರಲ್ಲಿ ರಾಜ್ಯದ ನಿವ್ವಳ ದೇಶಿಯ ಉತ್ಪಾದನೆ (ಎನ್ಎಸ್ಜಿ) 1,858 ಕೋಟಿ ರೂ.ಗೆ ಏರಿಕಡಯಾಗಿತ್ತು. ಆಗಿನ ತಲಾ ಆದಾಯ 641 ರೂ. ಇತ್ತು. 1980-81ರಲ್ಲಿ ರಾಜ್ಯ ನಿವ್ವಳ ದೇಶೀಯ ಉತ್ಪಾದನೆ 5,587 ಕೋಟಿ ರೂ. ಏರಿಕೆಯಾಗಿತ್ತು. ಆ ಕಾಲದಲ್ಲಿ ರಾಜ್ಯದ ತಲಾ ಆದಾಯ 1,520 ರೂ. ಇದೆ. 1990-91ರಲ್ಲಿ ಕರ್ನಾಟಕದ ನಿವ್ವಳ ದೇಶೀಯ ಉತ್ಪಾದನೆ 20,551 ಕೋಟಿ ರೂ. ಏರಿಕೆಯಾಯಿತು. ಆವತ್ತು ಇದ್ದ ರಾಜ್ಯದ ತಲಾ ಆದಾಯ 4,598 ರೂ. 2000-01ರಲ್ಲಿ ರಾಜ್ಯ ನಿವ್ವಳ ದೇಶೀಯ ಉತ್ಪಾದನೆ 96,348 ಕೋಟಿ ರೂ. ಇತ್ತು. ಅದೇ ತಲಾ ಆದಾಯ 18,344 ರೂ. ಇತ್ತು. ಪ್ರಗತಿಯತ್ತ ದಾಪುಗಾಲು ಇಡುತ್ತಿರುವ ರಾಜ್ಯದ ಜಿಡಿಪಿ ಅಂದಾಜು 23.3 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಇತ್ತ ತಲಾ ಆದಾಯ 3.32 ಲಕ್ಷ ರೂ.ಗೆ ಏರಿಕೆಯಾಗಿದೆ.