ಕರ್ನಾಟಕ

karnataka

ETV Bharat / state

ಹಿಜಾಬ್ ವಿವಾದ: ಹಿಜಾಬ್ ಅತ್ಯಗತ್ಯ ಆಚರಣೆಯಲ್ಲ ಎಂದು ಸರ್ಕಾರದ ಪರ ಎಜಿ ವಾದ - ಹಿಜಾಬ್ ರಿಟ್​ ಅರ್ಜಿ ವಿಚಾರಣೆ

High court hearing on Hijab row.. ಹಿಜಾಬ್ ನಿರ್ಬಂಧ ಹಾಗೂ ವಸ್ತ್ರಸಂಹಿತೆ ನಿಗದಿಪಡಿಸುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ಹೈಕೋರ್ಟ್​​ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರಿರುವ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು.

karnataka-hijab-row-high-court-adjourns-hearing-to-tomorrow
ಹಿಜಾಬ್ ವಿವಾದ: ವಿಚಾರಣೆ ನಾಳೆಗೆ ಮುಂದೂಡಿದ ಹೈಕೋರ್ಟ್ ತ್ರಿಸದಸ್ಯ ಪೀಠ

By

Published : Feb 21, 2022, 5:33 PM IST

Updated : Feb 21, 2022, 8:00 PM IST

ಬೆಂಗಳೂರು:ಹಿಜಾಬ್ ನಿರ್ಬಂಧಿಸಿರುವ ಶಿಕ್ಷಣ ಸಂಸ್ಥೆಗಳ ಕ್ರಮ ಹಾಗೂ ವಸ್ತ್ರ ಸಂಹಿತೆ ನಿಗದಿಪಡಿಸುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ಇಂದು ಹೈಕೋರ್ಟ್ ವಿಚಾರಣೆ ನಡೆಸಿತು. ವಾದ ಆಲಿಸಿದ ತ್ರಿಸದಸ್ಯ ಪೀಠವು ವಿಚಾರಣೆಯನ್ನು ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿದೆ.

ಈ ಕುರಿತಂತೆ ಉಡುಪಿಯ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ರೇಷಮ್ ಮತ್ತಿತರರು ಸಲ್ಲಿಸಿರುವ 8 ರಿಟ್ ಅರ್ಜಿಗಳು ಹಾಗೂ 20ಕ್ಕೂ ಹೆಚ್ಚು ಮಧ್ಯಂತರ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಅವರಿರುವ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಪರ ಅಡ್ವೊಕೇಟ್ ಜನರಲ್ ವಾದ ಮಂಡಿಸಿದರು. ಈ ವೇಳೆ ಎಜೆಗೆ ಪ್ರಶ್ನಿಸಿದ ಪೀಠ, ಸರ್ಕಾರದ ಆದೇಶದ ಬಗ್ಗೆ ಒಂದು ಸ್ಪಷ್ಟನೆ ಬೇಕಾಗಿದೆ. ಹಿಜಾಬ್ ಬಗ್ಗೆ ಸರ್ಕಾರ ಯಾವುದೇ ನಿರ್ದೇಶನ ನೀಡಿಲ್ಲ, ಸಮವಸ್ತ್ರ ಕುರಿತಂತೆ ಮಾತ್ರ ಸೂಚನೆ ನೀಡಲಾಗಿದೆ. ಸರ್ಕಾರದ ನಿಲುವು ಇಷ್ಟೇ ಅಲ್ಲವೇ ಎಂದಿತು. ಇದಕ್ಕೆ ಉತ್ತರಿಸಿದ ಎಜಿ, ಸಮವಸ್ತ್ರ ನಿಗದಿಪಡಿಸುವ ವಿಚಾರವನ್ನು ಸರ್ಕಾರ ಶಿಕ್ಷಣ ಸಂಸ್ಥೆಗಳಿಗೆ ಬಿಟ್ಟುಕೊಟ್ಟಿದೆ. ಸರ್ಕಾರ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿಲ್ಲ ಎಂದು ಹೇಳಿದರು.

ಮರು ಪ್ರಶ್ನೆ ಮಾಡಿದ ಪೀಠ, ಸರ್ಕಾರದ ಆದೇಶದಲ್ಲಿ ಹಿಜಾಬ್ ನಿರ್ಬಂಧಿಸಿಲ್ಲವಾದರೆ, ಉಳಿಯುವುದು ಸಾಂವಿಧಾನಿಕ ಪ್ರಶ್ನೆ ಮಾತ್ರ. ಅದರಂತೆ, ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವೇ ಎಂಬುದನ್ನು ತೀರ್ಮಾನಿಸಬೇಕಿದೆ. ಕಾಲೇಜು ಅಭಿವೃದ್ಧಿ ಸಮಿತಿ ಶಾಸನಾತ್ಮಕ ಸಂಸ್ಥೆಯಲ್ಲ. ಹೈಕೋರ್ಟ್ ಈ ಸಮಿತಿಗಳಿಗೆ ನಿರ್ದೇಶನ ನೀಡುವ ಅಗತ್ಯವಿದೆಯೇ ಎಂದಿತು. ಆಗ ಉತ್ತರಿಸಿದ ಎಜಿ, ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯೇ ಎಂಬುದನ್ನು ನಿರ್ಧರಿಸಬೇಕು ನಿಜ. ಸಂಪೂರ್ಣ ವಿವಾದವೇ ಹಿಜಾಬ್​ನ ಕುರಿತಾಗಿ ಉದ್ಭವಿಸಿದೆ. ಉಡುಪಿ ಕಾಲೇಜಿನ ಸಿಡಿಸಿ ಹಿಜಾಬ್ ನಿರ್ಬಂಧಿಸಿದೆ. ಹೀಗಾಗಿ ಹೈಕೋರ್ಟ್ ಈ ಬಗ್ಗೆಯೂ ತೀರ್ಮಾನ ನೀಡುವ ಅಗತ್ಯವಿದೆ ಎಂದು ವಾದಿಸಿದರು.

ವಿಚಾರಣೆ ವೇಳೆ ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಪ್ರಶ್ನಿಸಿ, ಧಾರ್ಮಿಕ ಆಚರಣೆ, ಆತ್ಮಸಾಕ್ಷಿಯ ಆಚರಣೆಯಾಗುವುದೇ ಎಂದರು. ಇದಕ್ಕೆ ಉತ್ತರಿಸಿದ ಎಜಿ, ಧಾರ್ಮಿಕ ಸಂಪ್ರದಾಯಗಳನ್ನು ಒಪ್ಪುವ ಅಥವಾ ಒಪ್ಪದಿರುವ ಅಂಶಗಳ ಮೇಲೆ ಆತ್ಮಸಾಕ್ಷಿಯ ಅಭಿವ್ಯಕ್ತಿಯು ಧಾರ್ಮಿಕ ಆಚರಣೆಯೇ ಅಥವಾ ಅಲ್ಲವೇ ಎಂಬುದನ್ನು ನಿರ್ಧರಿಸುತ್ತದೆ ಎಂದರು.

ಇದನ್ನೂ ಓದಿ:ಬ್ಯಾಂಕ್​ಗೆ ಬುರ್ಖಾ ಧರಿಸಿ ಬಂದಿದ್ದಕ್ಕೆ ಹಣ ನೀಡಲು ನಿರಾಕರಿಸಿದ ಸಿಬ್ಬಂದಿ : ವಿಡಿಯೋ ಮಾಡಿ ಹರಿಬಿಟ್ಟ ಯುವತಿ!

ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಪ್ರಶ್ನಿಸಿ, ದೇವರನ್ನು ನಂಬದವರಿಗೂ ಸಂವಿಧಾನದ ರಕ್ಷಣೆಯಿದೆಯಲ್ಲವೇ ಎಂದರು. ಇದಕ್ಕೆ ಉತ್ತರಿಸಿದ ಎಜಿ, ಆತ್ಮಸಾಕ್ಷಿ, ಆತ್ಮಸಾಕ್ಷಿಯ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಬೇರೆ ಬೇರೆ. ಆದರೆ, ಅವೆರಡೂ ಜೊತೆಯಾಗಿಯೂ ಸಾಗಬಹುದು. ಧರ್ಮವನ್ನು ಶಿಕ್ಷಣದಿಂದ ಹೊರಗಿಡಬೇಕು. 2017ರ ಸುಪ್ರೀಂಕೋರ್ಟ್ ತೀರ್ಪಿನಲ್ಲೂ ಇದನ್ನೇ ಹೇಳಲಾಗಿದೆ. ಜಾವೇದ್ ವರ್ಸಸ್ ಹರಿಯಾಣ ಪ್ರಕರಣದಲ್ಲಿಯೂ ಹೈಕೋರ್ಟ್ ಇದೇ ತೀರ್ಪು ನೀಡಿದೆ. 2ನೇ ಮದುವೆಯಾದವರಿಗೆ ಚುನಾವಣೆಗೆ ಸ್ಪರ್ಧೆ ನಿರ್ಬಂಧವಿತ್ತು. ಆಗ ಜಾವೇದ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇಸ್ಲಾಂನಲ್ಲಿ ಒಂದಕ್ಕಿಂತ ಹೆಚ್ಚಿನ ಮದುವೆಗೆ ಅವಕಾಶವಿದೆ. ಹೀಗಾಗಿ ಸಂವಿಧಾನದ ರಕ್ಷಣೆ ಇದೆ ಎಂದು ವಾದಿಸಿದ್ದರು. ಆದರೆ ನ್ಯಾಯಾಲಯ ಈತನ ವಾದವನ್ನು ಒಪ್ಪಲಿಲ್ಲ ಎಂದು ಎಜಿ ವಿವರಿಸಿದರು.

ಹಿಜಾಬ್ ಅತ್ಯಗತ್ಯ ಆಚರಣೆಯಲ್ಲ:ಮೂಲಭೂತ ಆಚರಣೆಗಳಷ್ಟೇ ಅತ್ಯಗತ್ಯ ಆಚರಣೆಗಳು. ಆ ಆಚರಣೆಗಳು ಇಲ್ಲದಿದ್ದರೆ ಧರ್ಮದ ಅಸ್ತಿತ್ವಕ್ಕೆ ಧಕ್ಕೆಯಾಗುವಂತಿರಬೇಕು. ಆಚರಣೆ ಇಲ್ಲವಾದರೆ ಧರ್ಮವೇ ಕಣ್ಮರೆಯಾಗುವಂತಿರಬೇಕು. ಆ ಆಚರಣೆಗಳೇ ಧರ್ಮವೊಂದರ ಬುನಾದಿಯಂತಿರಬೇಕು. ಅಂತಹ ಆಚರಣೆಗಳಷ್ಟೇ ಅತ್ಯಗತ್ಯ ಆಚರಣೆಗಳು. ಇದನ್ನು ಸುಪ್ರೀಂಕೋರ್ಟ್ ಕೂಡ ಒಪ್ಪಿದೆ. ಈ ಪ್ರಕಾರ ಹಿಜಾಬ್ ಅತ್ಯಗತ್ಯ ಆಚರಣೆಯಲ್ಲ. ವೆಂಕಟರಮಣ ದೇವರು ಪ್ರಕರಣದಲ್ಲಿಯೂ ಸುಪ್ರೀಂಕೋರ್ಟ್ ಇದೇ ತೀರ್ಪು ನೀಡಿದೆ. ಗೌಡ ಸಾರಸ್ವತ ಬ್ರಾಹ್ಮಣರ ಪೂಜೆಯ ಅಧಿಕಾರದ ಪ್ರಕರಣದಲ್ಲೂ ಇದೇ ತೀರ್ಪಿದೆ. ಹೀಗಾಗಿ, ಆಹಾರ, ಉಡುಪು ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ವಾದ ಮಂಡಿಸಿದರು.

ಧಾರ್ಮಿಕ ಆಚರಣೆಯೆಂದು ಸಾಬೀತಾಗಬೇಕು:ಎಲ್ಲ ಧಾರ್ಮಿಕ ಚಟುವಟಿಕೆಗಳಿಗೂ ಸಂವಿಧಾನದ ರಕ್ಷಣೆಯಿಲ್ಲ ಎಂದು ಶಬರಿಮಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹೇಳಿದೆ. ಅನಗತ್ಯ ಮೌಢ್ಯಗಳನ್ನು ಅತ್ಯಗತ್ಯ ಭಾಗವೆಂದು ಪರಿಗಣಿಸಲಾಗದು. ಮೊದಲಿಗೆ ಅತ್ಯಗತ್ಯ ಧಾರ್ಮಿಕ ಆಚರಣೆಯೆಂದು ಸಾಬೀತಾಗಬೇಕು. ಈ ಆಚರಣೆ ಸಾರ್ವಜನಿಕ ಸುವ್ಯವಸ್ಥೆಗೆ ವಿರುದ್ಧವಾಗಿರಬಾರದು. ಸಾರ್ವಜನಿಕ ಆರೋಗ್ಯ, ನೈತಿಕತೆಗೆ ವಿರುದ್ಧವಾಗಿರಬಾರದು. ಮೂಲಭೂತ ಹಕ್ಕುಗಳಿಗೂ ವಿರುದ್ಧವಾಗಿರಬಾರದು. ಆಗಷ್ಟೇ ಅದಕ್ಕೆ ಸಂವಿಧಾನದ ರಕ್ಷಣೆ ಸಿಗಲಿದೆ. ಧಾರ್ಮಿಕವಾಗಿ ಅತ್ಯಗತ್ಯ ಎಂದು ಹೇಳಿದರೆ ಸಾಲದು. ಧರ್ಮಕ್ಕೇ ಅತ್ಯಗತ್ಯ ಆಚರಣೆ ಎಂದು ನಿರೂಪಿಸಬೇಕು ಎಂದು ಎಜಿ ವಾದಿಸಿದರು.

ಹಲವು ಪ್ರಕರಣಗಳ ಉಲ್ಲೇಖ:ಹಿಜಾಬ್ ಕಡ್ಡಾಯ ಧಾರ್ಮಿಕ ಆಚರಣೆ ಎಂಬುದಕ್ಕೆ ಆಧಾರಗಳಿಲ್ಲ. ಅರ್ಜಿದಾರರು ಒಂದೇ ಒಂದು ದಾಖಲೆಯನ್ನೂ ನೀಡಿಲ್ಲ. ಅವರು ಶೂನ್ಯ ಸಾಕ್ಷ್ಯ ನೀಡಿ ಹಿಜಾಬ್ ಪರ ಆದೇಶ ಕೇಳುತ್ತಿದ್ದಾರೆ. ಖುರಾನ್ ಉಲ್ಲೇಖಿಸಿದ ಆಚರಣೆಗಳ ಪರವಾಗಿ ಹಿಂದೆಯೂ ಅರ್ಜಿ ಇತ್ತು. ಈ ಹಿಂದೆ ನಾಲ್ಕು ಘಟನೆಗಳಲ್ಲಿ ಸುಪ್ರೀಂಕೋರ್ಟ್ ನಿರಾಕರಿಸಿದೆ. ಪ್ರಾಣಿ ಬಲಿ ಇಸ್ಲಾಂನ ಅತ್ಯಗತ್ಯ ಭಾಗವೆಂದು ಘೋಷಿಸಲು ನಿರಾಕರಿಸಿದೆ. ಬಹುಪತ್ನಿತ್ವ ಇಸ್ಲಾಂನ ಅತ್ಯಗತ್ಯ ಭಾಗ ಎಂಬುದನ್ನು ಒಪ್ಪಿಲ್ಲ. ಬಾಬ್ರಿ ಮಸೀದಿ ಪ್ರಕರಣದಲ್ಲೂ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ತ್ರಿವಳಿ ತಲಾಖ್ ಪ್ರಕರಣದಲ್ಲೂ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ವಕ್ಫ್​ಗೆ ಸೇರಿದ ಹೋಟೆಲ್​ವೊಂದರಲ್ಲಿ ವೈನ್, ಹಂದಿ ಮಾಂಸ ಪೂರೈಕೆಯಾದ ಸಂದರ್ಭದಲ್ಲಿ ಇದು ಹರಾಮ್ ಎಂದು ಲೀಸ್ ಅಂತ್ಯಗೊಳಿಸಲಾಗಿತ್ತು. ಈ ವೇಳೆ ಕೋರ್ಟ್ ಹೋಟೆಲ್ ಪರವಾಗಿ ತೀರ್ಪು ನೀಡಿತ್ತು ಎಂದು ಎಜಿ ಹಲವು ಪ್ರಕರಣಗಳನ್ನು ಉಲ್ಲೇಖಿಸಿದರು.

ವಾದ ಆಲಿಸಿದ ತ್ರಿಸದಸ್ಯ ಪೀಠವು ವಿಚಾರಣೆಯನ್ನು ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿದೆ.

Last Updated : Feb 21, 2022, 8:00 PM IST

ABOUT THE AUTHOR

...view details