ಬೆಂಗಳೂರು :ರಾಜ್ಯದಲ್ಲಿ ಸಮವಸ್ತ್ರದೊಂದಿಗೆ ಹಿಜಾಬ್ ಧರಿಸುವ ವಿವಾದ ಮುಂದುವರೆದಿದೆ. ಸದ್ಯ ಕೋರ್ಟ್ ಅಂಗಳದಲ್ಲಿರುವ ವಿಚಾರಣೆ ಸೋಮವಾರಕ್ಕೆ ಮುಂದೂಡಲಾಗಿದೆ. ನಿನ್ನೆ (ಗುರುವಾರ) ವಾದ-ವಿವಾದ ಆಲಿಸಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸೋಮವಾರದಿಂದ ಹೈಸ್ಕೂಲ್ ತರಗತಿ ಆರಂಭಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಆದರೆ, ಕಾಲೇಜುಗಳ ಆರಂಭಕ್ಕೆ ಸರ್ಕಾರ ಹಿಂದೇಟು ಹಾಕುತ್ತಿದೆ. ಶಾಲಾ-ಕಾಲೇಜು ಆರಂಭಿಸುವಂತೆ ಹೈಕೋರ್ಟ್ ತಿಳಿಸಿದರೂ ಸದ್ಯಕ್ಕೆ ಮೊದಲ ಹಂತವಾಗಿ ಸರ್ಕಾರ 9 ಮತ್ತು 10ನೇ ತರಗತಿ ಮಾತ್ರ ಶುರು ಮಾಡಲು ತೀರ್ಮಾನಿಸಿದೆ.
ಇಂದಿನ ಸಭೆಯಲ್ಲಿ ಕಾಲೇಜು ಆರಂಭದ ಬಗ್ಗೆ ಸಿಎಂ ಚರ್ಚೆ ನಡೆಸಲಿದ್ದಾರೆ. ಕಾಲೇಜುಗಳ ವಿಚಾರದಲ್ಲಿ ಶಿಕ್ಷಣ ಇಲಾಖೆಯಿಂದ ಎಚ್ಚರಿಕೆ ಹೆಜ್ಜೆ ಇಡಲು ತೀರ್ಮಾನಿಸಲಾಗಿದೆ.
ಕಾಲೇಜು ಆರಂಭಿಸಲು ಸರ್ಕಾರ ಯಾಕೆ ಹಿಂದೇಟು ಹಾಕುತ್ತಿದೆ ಎಂಬುವುದನ್ನು ನೋಡುವುದಾದರೆ..
- ಹಿಜಾಬ್ ಹಾಗೂ ಕೇಸರಿ ಶಾಲು ಸಂಘರ್ಷ ಅತ್ಯಂತ ಸೂಕ್ಷ್ಮ ವಿಚಾರ.
- ಹೀಗಾಗಿ, ಕಾಲೇಜು ಆರಂಭಿಸಿದರೆ ಮತ್ತೆ ಗಲಾಟೆ ಆಗುತ್ತದೆ ಎಂದು ಪೊಲೀಸ್ ಇಲಾಖೆಯಿಂದ ಮಾಹಿತಿ.
- ಮುಂಜಾಗ್ರತಾ ಕ್ರಮವಾಗಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಹಾಗೂ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ.
- ಸೋಮವಾರ ಹೈಕೋರ್ಟ್ನಲ್ಲಿ ಹಿಜಬ್ ಅರ್ಜಿ ವಿಚಾರಣೆ ಇದ್ದು, ತೀರ್ಪು ನೋಡಿಕೊಂಡು ಬಳಿಕ ನಿರ್ಧಾರ.
ಸಾಮಾನ್ಯರಿಗೂ ಅನುಮಾನ ಮೂಡಿಸುತ್ತಿರುವ ವಿವಾದ :ಕೇರಳದಲ್ಲಿ ಹಿಜಾಬ್ ವಿಚಾರ ಬಂದಾಗ ವಿವಾದ ಆಗಲಿಲ್ಲ. ಆದರೆ, ಕರ್ನಾಟದಲ್ಲಿ ಹಿಜಾಬ್ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿರುವುದು ಸಾಮಾನ್ಯರಿಗೂ ಅನುಮಾನ ಮೂಡಿಸುತ್ತಿದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.