ಬೆಂಗಳೂರು : ಅಕ್ರಮ ಅಥವಾ ಕಳಂಕಿತ ಆಸ್ತಿ ಪತ್ತೆಯಾದ ದಿನದಿಂದಲೇ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅನ್ವಯವಾಗುತ್ತದೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪಿಎಂಎಲ್ ಕಾಯ್ದೆ ಪೂರ್ವಾನ್ವಯ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸುವ ಸಂದರ್ಭದಲ್ಲಿ ಮಹತ್ವದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವ ಪೀಠ, ಅಕ್ರಮ ಹಣ ಸಂಗ್ರಹ ಹಾಗೂ ಪ್ರಸರಣವು ಗಂಭೀರವಾದ ವಿಚಾರವಾಗಿದೆ. ಇದು ದೇಶದ ಆರ್ಥಿಕತೆಯ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ. ಅಧಿಸೂಚಿತ ಅಪರಾಧವಿಲ್ಲದೇ ಇದ್ದರೂ ಪಿಎಂಎಲ್ ಕಾಯ್ದೆ ಬಳಕೆ ಮಾಡಬಹುದು. ಕಳಂಕಿತ ಸಂಪತ್ತು ಜಪ್ತಿ ಮಾಡಲು ಈ ಕಾಯ್ದೆ ಬಳಸಬಹುದು. ಕಾಯ್ದೆ ಪೂರ್ವಾನ್ವಯ ಆಗುವುದಿಲ್ಲವೆಂಬ ಕಾರಣಕ್ಕೆ ಅಪರಾಧ ಅಳಿಸಿ ಹೋಗುವುದಿಲ್ಲ. ಅಕ್ರಮ ಆಸ್ತಿ ಗಳಿಕೆ ನಿರಂತರ ಅಪರಾಧವಾಗಿದೆ. ಕಳಂಕಿತ ಸಂಪತ್ತು ಪತ್ತೆಯಾದ ದಿನದಿಂದ ಪಿಎಂಎಲ್ ಕಾಯ್ದೆ ಅನ್ವಯವಾಗುತ್ತದೆ ಎಂದು ಆದೇಶಿಸಿದೆ.
ತಮ್ಮ ಆಸ್ತಿ ಜಪ್ತಿಗೆ ಜಾರಿ ನಿರ್ದೇಶನಾಲಯ (ಇಡಿ) ಹೊರಡಿಸಿದ್ದ ಆದೇಶ, ವಿಚಾರಣೆ ಹಾಜರಾಗಲು ಸೂಚಿಸಿ ಇಡಿ ವಿಶೇಷ ನ್ಯಾಯಾಲಯ ನೀಡಿದ ಸಮನ್ಸ್, ಪಿಎಂಎಲ್ ಕಾಯ್ದೆಯಡಿ ದಾಖಲಿಸಿದ ಪ್ರಕರಣ ಮತ್ತು ಆ ಕುರಿತು ಇಡಿ ನಡೆಸುತ್ತಿರುವ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಮೈಸೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ಅವ್ವಾ ಮಾದೇಶ ಹಾಗೂ ಇತರೆ ಆರೋಪಿಗಳು ಪ್ರತ್ಯೇಕವಾಗಿ 30 ತಕರಾರು ಅರ್ಜಿಗಳನ್ನು ಸಲ್ಲಿಸಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕ ಸದಸ್ಯ ಪೀಠ, ಸುದೀರ್ಘ 238 ಪುಟಗಳ ತೀರ್ಪು ನೀಡಿದ್ದು, ಅದರಲ್ಲಿ ಪಿಎಂಎಲ್ ಕಾಯ್ದೆ ಅನ್ವಯವಾಗುವ ಕುರಿತು ಸ್ಪಷ್ಟನೆ ನೀಡಿದೆ.
ಅರ್ಜಿದಾರರ ಕೋರಿಕೆ :
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 13 (ಭ್ರಷ್ಟಾಚಾರದಿಂದ ಹಣ ಸಂಪಾದನೆ) ಅನ್ನು 2009 ಜೂನ್ 1ರಿಂದ ಅನ್ವಯ ಆಗುವಂತೆ ಪಿಎಂಎಲ್ ಕಾಯ್ದೆಯ ಅಧಿಸೂಚಿತ ಅಪರಾಧ ಪಟ್ಟಿಗೆ (ಶೆಡ್ಯೂಲ್) ಸೇರಿಸಲಾಗಿದೆ. ಹೀಗಾಗಿ, ಈ ದಿನಾಂಕಕ್ಕೂ ಮುನ್ನ ನಡೆದ ಭ್ರಷ್ಟಾಚಾರ ಪ್ರಕರಣಗಳಿಗೆ ಪಿಎಂಎಲ್ ಕಾಯ್ದೆ ಪೂರ್ವಾನ್ವಯ ಆಗುವುದಿಲ್ಲ. ಹಾಗಿದ್ದೂ ಭ್ರಷ್ಟಾಚಾರ ಆರೋಪದಡಿ ತಮ್ಮ ವಿರುದ್ಧ 2009ರ ಜೂನ್ 1ಕ್ಕೂ ಮುನ್ನ ಪ್ರಕರಣ ದಾಖಲಿಸಲಾಗಿದೆ. ಹಾಗೆಯೇ ತಮ್ಮ ಆಸ್ತಿ ಜಪ್ತಿಗೆ ಆದೇಶ ಹೊರಡಿಸಲಾಗಿದೆ. ಆದರೆ, ಪಿಎಂಎಲ್ ಕಾಯ್ದೆ ಪೂರ್ವಾನ್ವಯ ಆಗುವುದಿಲ್ಲವಾದ್ದರಿಂದ, ತಮ್ಮ ವಿರುದ್ಧ ಇಡಿ ಅಧಿಕಾರಿಗಳು ದಾಖಲಿಸಿರುವ ದೂರು, ಆಸ್ತಿ ಜಪ್ತಿಗೆ ಹೊರಡಿಸಿರುವ ಆದೇಶ, ವಿಶೇಷ ನ್ಯಾಯಾಲಯ ಜಾರಿ ಮಾಡಿರುವ ಸಮನ್ಸ್ ಹಾಗೂ ವಿಚಾರಣಾ ಪ್ರಕ್ರಿಯೆಯನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ಇದಕ್ಕೆ ಆಕ್ಷೇಪಿಸಿದ್ದ ಇಡಿ ಪರ ವಕೀಲರು, ಯಾರ ವಿರುದ್ಧ ಎಷ್ಟು ಮೊತ್ತಕ್ಕೆ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿಬರುತ್ತದೆಯೋ, ಅಷ್ಟು ಹಣವನ್ನು ಅಥವಾ ಅಷ್ಟು ಮೊತ್ತದ ಆಸ್ತಿ ಜಪ್ತಿ ಮಾಡಲಾಗುತ್ತದೆ. 2009ರ ಜೂನ್ 1 ಕ್ಕಿಂತ ಮುಂಚಿನ ಹಣ ಅಕ್ರಮ ವರ್ಗಾವಣೆ ಮತ್ತು ಭ್ರಷ್ಟಾಚಾರ ಪ್ರಕರಣಗಳಿಗೂ ಪಿಎಂಎಲ್ ಕಾಯ್ದೆ ಪೂರ್ವಾನ್ವಯವಾಗುತ್ತದೆ ಎಂದು ವಾದಿಸಿದ್ದರು.
ಓದಿ:ಜನವರಿಯಲ್ಲಿ ಒಂದಲ್ಲ, 16 ದಿನ ರಜೆ.. ಬ್ಯಾಂಕ್ಗಳಿಗೆ ತೆರಳುವ ಮೊದಲು ಡೇಟ್‌ಗಳು ನೆನಪಿರಲಿ!