ಬೆಂಗಳೂರು :ಆನ್‌ಲೈನ್ ಗೇಮ್ಗೆ ಗ್ರೀನ್ ಸಿಗ್ನಲ್ ನೀಡಿರುವ ಹೈಕೋರ್ಟ್ ವಿಭಾಗೀಯ ಪೀಠ, ಜೂಜು ನಿಷೇಧಿಸಲು ಕರ್ನಾಟಕ ಪೊಲೀಸ್ ಕಾಯ್ದೆ-1963ಕ್ಕೆ ತರಲಾಗಿದ್ದ ತಿದ್ದುಪಡಿಯನ್ನು ರದ್ದುಪಡಿಸಿದೆ.
ಕಾಯ್ದೆಗೆ ತಿದ್ದುಪಡಿ ತಂದು ಆನ್‌ಲೈನ್ ಗೇಮ್ ನಿಷೇಧಿಸಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ 'ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ ಆಫ್ ಇಂಡಿಯಾ' ಹಾಗೂ 'ಗ್ಯಾಲಕ್ಟಸ್ ಫನ್‌ವೇರ್ ಟೆಕ್ನಾಲಜೀಸ್' ಮತ್ತಿತರೆ ಕಂಪನಿಗಳು ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ತೀರ್ಪಿನಲ್ಲಿ, ಆನ್‌ಲೈನ್ ಬೆಟ್ಟಿಂಗ್ ನಿಷೇಧಕ್ಕೆ ಸಂಬಂಧಿಸಿದಂತೆ ಸಂವಿಧಾನದ ನಿಯಮಗಳಿಗೆ ಅನುಸಾರವಾಗಿ ಹೊಸ ಕಾಯ್ದೆ ತರಲು ಈ ತೀರ್ಪು ಯಾವುದೇ ತಡೆ ಒಡ್ಡುವುದಿಲ್ಲ. ಆದರೆ, ಈಗ ಕಾಯ್ದೆಗೆ ತಿದ್ದುಪಡಿ ತಂದಿರುವ ಕ್ರಮ ಸಂವಿಧಾನಬದ್ಧವಾಗಿಲ್ಲ. ಆದ್ದರಿಂದ, ಕಾಯ್ದೆಯನ್ನು ರದ್ದುಪಡಿಸುತ್ತಿದ್ದೇವೆ ಎಂದು ಪೀಠ ಸ್ಪಷ್ಟಪಡಿಸಿದೆ.