ಕರ್ನಾಟಕ

karnataka

ETV Bharat / state

ನಿಗದಿತ ಕಿಲೋಮೀಟರ್​ ಪೂರ್ಣಗೊಳಿಸಿದ ಬಸ್​ ಓಡಿಸುವಂತಿಲ್ಲ: ಹೈಕೋರ್ಟ್ - Karnataka High Court

ದೋಷಪೂರಿತ ಬಸ್​ ಓಡಿಸಿ ಅಪಘಾತಕ್ಕೀಡಾದ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್​, ಗುಜರಿಗೆ ಸೇರುವ ಬಸ್​ಗಳನ್ನು ರಸ್ತೆಗೆ ಇಳಿಸಬಾರದು ಎಂದು ಸೂಚಿಸಿದೆ.

Etv Bharatಹೈಕೋರ್ಟ್
ಹೈಕೋರ್ಟ್

By ETV Bharat Karnataka Team

Published : Dec 30, 2023, 2:00 PM IST

ಬೆಂಗಳೂರು:ನಿಗದಿತ ಕಿಲೋ ಮೀಟರ್‌ ಸಂಚಾರ ಪೂರ್ಣಗೊಳಿಸಿದ ಗುಜರಿಗೆ ಸೇರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ) ಬಸ್‌ಗಳನ್ನು ಮತ್ತೆ ಸಂಚಾರಕ್ಕೆ ಬಳಸಬಾರದು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ. ಜೊತೆಗೆ ಕೆಎಸ್‌ಆರ್‌ಟಿಸಿ ಮೆಕಾನಿಕಲ್‌ ವಿಭಾಗವು ಬಸ್‌ ಮತ್ತು ಆರ್‌ಟಿಒ ಸದೃಢತೆ ದೃಢೀಕರಿಸಿ ಪ್ರಮಾಣಪತ್ರ ನೀಡಿದ ಬಸ್‌ಗಳಿಗಷ್ಟೇ ಸಂಚಾರಕ್ಕೆ ಅನುಮತಿ ನೀಡಬೇಕು ಎಂದು ಕೆಎಸ್​​ಆರ್​ಟಿಸಿಗೆ ಸೂಚಿಸಿ ಆದೇಶಿಸಿದೆ.

ಸದೃಢವಾಗಿರದ ಕೆಎಸ್‌ಆರ್‌ಟಿ ಬಸ್‌ ರಸ್ತೆಗಿಳಿಸಿ ಅಪಘಾತ ಉಂಟು ಮಾಡಿ ಇಬ್ಬರು ವಿದ್ಯಾರ್ಥಿಗಳ ಬಲಿ ಪಡೆದ ಪ್ರಕರಣದಲ್ಲಿ, ಚಾಲಕನನ್ನು ದೋಷಿಯಾಗಿ ತೀರ್ಮಾನಿಸಿ ಶಿಕ್ಷೆ ವಿಧಿಸಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ್‌ ಅವರಿದ್ದ ಪೀಠ ಎತ್ತಿಹಿಡಿದಿದೆ.

ಸಂಚಾರಕ್ಕೆ ಬಸ್‌ ಸದೃಢವಾಗಿರುವ ಬಗ್ಗೆ ಪ್ರತಿ ವರ್ಷ ಕೆಎಸ್‌ಆರ್‌ಟಿಸಿ, ಸಂಬಂಧಪಟ್ಟ ಆರ್‌ಟಿಒ ಅವರಿಂದ ಪ್ರಮಾಣ ಪತ್ರ ಪಡೆದ ಬಸ್‌ಗಳಿಗೆ ಮಾತ್ರ ಸಂಚರಿಸಲು ಅನುಮತಿ ನೀಡಬೇಕು. ಬಸ್‌ನ ಪ್ರತಿ ಭಾಗ ಪರಿಶೀಲಿಸಿದ ನಂತರವೇ ಆರ್‌ಟಿಒ ಪ್ರಮಾಣ ಪತ್ರ ನೀಡಬೇಕು ಎಂದು ಹೈಕೋರ್ಟ್‌ ಸೂಚನೆ ನೀಡಿದೆ.

ಪ್ರಕರಣದ ಹಿನ್ನೆಲೆ ಇದು:ಉತ್ತರ ಕನ್ನಡ ಜಿಲ್ಲೆಯ ಎತ್ತಿನಬೈಲ್‌ ನಿವಾಸಿ, ಬಸ್​ ಚಾಲಕ ಜಿ.ಸತೀಶ್‌ 2006ರ ನ.27ರಂದು ಅಂಕೋಲಾದ ಕೆ.ಸಿ. ರಸ್ತೆಯಲ್ಲಿ ಬಸ್‌ ಚಲಾಯಿಸಿಕೊಂಡು ಹೋಗುವಾಗ ಶಾಲಾ ಮಕ್ಕಳಿಗೆ ಅಪಘಾತ ಎಸಗಿದ್ದ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿ, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದ. ಈ ಪ್ರಕರಣ ಅಂಕೋಲದ ಜೆಎಂಎಫ್‌ಸಿ ನ್ಯಾಯಾಲಯದ ಮೆಟ್ಟಿಲೇರಿತ್ತು.

ಅತಿವೇಗ, ನಿರ್ಲಕ್ಷ್ಯದ ಚಾಲನೆಯಿಂದ ಮಾನವ ಜೀವಕ್ಕೆ ಅಪಾಯ ತಂದ ಹಾಗೂ ಸಾವಿಗೆ ಕಾರಣವಾದ ಅಪರಾಧದಡಿ ಚಾಲಕನನ್ನು ದೋಷಿಯಾಗಿ ಪರಿಗಣಿಸಿ ಗರಿಷ್ಠ 1 ವರ್ಷ ಜೈಲು ಶಿಕ್ಷೆ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶಿಸಿತ್ತು.

ಮೇಲಧಿಕಾರಿಗಳಿಂದಲೇ ಅನಾಹುತಕ್ಕೆ ಹಾದಿ:ಪ್ರಯಾಣಿಕರು ಕಾಯುತ್ತಿದ್ದರು ಎಂಬ ಕಾರಣಕ್ಕಾಗಿ ಬಸ್‌ನಲ್ಲಿ ಹಲವು ತಾಂತ್ರಿಕ ದೋಷಗಳು ಇದ್ದಾಗ್ಯೂ ಕೆಎಸ್‌ಆರ್‌ಟಿಸಿ ಸಂಚಾರ ನಿಯಂತ್ರಕರು ಬಸ್ಸನ್ನು ಚಲಾಯಿಸಲು ಅನುಮತಿ ನೀಡಿದ್ದರು. ಅಲ್ಲದೇ, ಈ ಬಸ್​ ಓಡಿಸದಿದ್ದರೆ, ಮೇಲಾಧಿಕಾರಿಗಳಿಗೆ ದೂರು ನೀಡುವುದಾಗಿ ಬೆದರಿಸಿದ್ದು ತನಿಖೆಯಲ್ಲಿ ತಿಳಿದುಬಂದಿತ್ತು.

ಬಸ್​ ದೋಷಕ್ಕೀಡಾದರೂ ಅಧಿಕಾರಿಗಳ ಒತ್ತಡದಿಂದ ನಾನು ಬಸ್​ ಓಡಿಸಿದ್ದೆ. ಎಂಜಿನ್‌ ಸ್ಟಾರ್ಟ್‌ ಆಗದಿದ್ದಾಗ ಪ್ರಯಾಣಿಕರಿಂದಲೇ ತಳ್ಳಿಸಿಕೊಂಡು ಸ್ಟಾರ್ಟ್‌ ಮಾಡಿದೆ. ಹಾರ್ನ್‌ ಸಹ ಇರಲಿಲ್ಲ. ಮೆಕಾನಿಕಲ್‌ ದೋಷಗಳಿಂದ ಅಪಘಾತ ಆಗಿರುವುದರಿಂದ ಶಿಕ್ಷೆ ರದ್ದು ಗೊಳಿಸಬೇಕೆಂದು ಚಾಲಕ ಸತೀಶ್​ ಪರ ವಕೀಲರು ಮನವಿ ಮಾಡಿದ್ದರು.

ಈ ವಾದವನ್ನು ತಳ್ಳಿಹಾಕಿದ ನ್ಯಾಯಪೀಠ, ಸುಸ್ಥಿತಿಯಲ್ಲಿರದ ಬಸ್‌ ಚಲಾಯಿಸಿರುವುದು ಮತ್ತು ಸುರಕ್ಷತಾ ಕ್ರಮ ಕೈಗೊಳ್ಳದಿರುವುದೇ ಚಾಲಕನ ಗಂಭೀರ ನಿರ್ಲಕ್ಷ್ಯವೆಂದು ಪರಿಗಣಿಸಬಹುದು. ಆದ್ದರಿಂದ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶ ಮಾಡಲಾಗದು. ಆದರೆ, ಘಟನೆ 2006ರಲ್ಲಿ ನಡೆದಿದೆ. ಚಾಲಕನಿಗೆ ಈಗ ವಯಸ್ಸು 44 ವರ್ಷವಾಗಿರುವ ಕಾರಣ ಶಿಕ್ಷೆ ಪ್ರಮಾಣದಲ್ಲಿ ಅಲ್ಪ ಉದಾರತೆ ತೋರಿಸಬಹುದು ಎಂದು ಶಿಕ್ಷೆಯನ್ನು 6 ತಿಂಗಳಿಗೆ ಕಡಿತಗೊಳಿಸಿತು.

ಇದನ್ನೂ ಓದಿ:ಕೋವಿಡ್ ಭೀತಿ: ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ನಿರ್ಬಂಧಿಸಲು ಹೈಕೋರ್ಟ್ ನಕಾರ

ABOUT THE AUTHOR

...view details