ಬೆಂಗಳೂರು:ಆತ್ಮಹತ್ಯೆಗೆ ಪ್ರಚೋದನೆ ನೀಡುವ ಪ್ರಕರಣ ಸಾಬೀತಾಗಬೇಕಾದ್ರೆ ಘಟನೆಗೆ ಸಮೀಪದ ದಿನ ಪ್ರಚೋದನೆ ನೀಡಿರಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಸಹೋದರನ ಪುತ್ರ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪದ ಮೇಲೆ ತಮ್ಮ ವಿರುದ್ಧ ಪುಲಕೇಶಿ ನಗರ ಠಾಣಾ ಪೊಲೀಸರು ದಾಖಲಿಸಿರುವ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಇಂದಿರಾನಗರದ ನಿವಾಸಿ ವಿ.ವಿ. ಸಿಂಗಾರ ವೇಲು ಹಾಗೂ ಅವರ ಪತ್ನಿ ವಾಸಂತಿ ವೇಲು ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪ್ರಕರಣವನ್ನು ರದ್ದು ಪಡಿಸಿ ಆದೇಶಿಸಿದೆ. ಅಲ್ಲದೆ, ಮರಣ ಪತ್ರವನ್ನು ಪರಿಗಣನೆಗೆ ತೆಗೆದುಕೊಂಡರೇ ಮೃತ ವಿಕ್ರಮ್‌ಗೆ 2021ರ ಅಕ್ಟೋಬರ್‌ನಲ್ಲಿ ಅರ್ಜಿದಾರರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಆದರೆ, ವಿಕ್ರಮ್ 2021ರ ನ.23ರಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕ್ಟೋಬರ್‌ನಲ್ಲಿ ಯಾವ ನಿರ್ದಿಷ್ಟ ದಿನದಂದು ಬೆದರಿಕೆ ಹಾಕಲಾಗಿದೆ ಎಂಬ ಬಗ್ಗೆ ದೂರಿನಲ್ಲಿ ಹೇಳಿಲ್ಲ. ಆತ್ಮಹತ್ಯೆ ಘಟನೆ ನಡೆದ ಸಮೀಪ್ಯದಲ್ಲಿ ಪ್ರಚೋದನೆ ಕೃತ್ಯ ಸಹ ನಡೆದಿರಬೇಕು. ಆದರೆ, ಅರ್ಜಿದಾರರು ಬೆದರಿಕೆ ಹಾಕಿ ಪ್ರಚೋದನೆ ನೀಡಿದ್ದಾರೆ ಎನ್ನುವ ಘಟನೆ ಮತ್ತು ವಿಕ್ರಮ್ ಆತ್ಮಹತ್ಯೆ ಮಾಡಿಕೊಂಡ ದಿನದ ನಡುವೆ ಸಾಕಷ್ಟು ದಿನಗಳ ಅಂತರವಿದೆ. ಅಂದರೆ ಪ್ರಚೋದನೆ ಮತ್ತು ಆತ್ಮಹತ್ಯೆ ನಡುವಿನ ಸಾಮೀಪ್ಯ ತಿಳಿದು ಬಂದಿಲ್ಲ. ಜೊತೆಗೆ, ಎರಡು ಕುಟುಂಬಗಳ ನಡುವೆ ದೂರು ಮತ್ತು ಸಾಕಷ್ಟು ವ್ಯಾಜ್ಯಗಳಿವೆ ಎಂದು ಅಭಿಪ್ರಾಯಪಟ್ಟು ದಂಪತಿ ವಿರುದ್ಧದ ಪ್ರಕರಣ ರದ್ದುಪಡಿಸಿದೆ.