ಬೆಂಗಳೂರು: ಮಗುವಿನ ಪಿತೃತ್ವವನ್ನು ಪರೀಕ್ಷಿಸಲು ಅತ್ಯಾಚಾರ ಆರೋಪಿಯ ರಕ್ತದ ಮಾದರಿ ತೆಗೆದುಕೊಳ್ಳಲು ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿಯಿತು.
ಡಿಎನ್ಎ ಪರೀಕ್ಷೆಗೆ ತನ್ನಿಂದ ಬಲವಂತವಾಗಿ ರಕ್ತ ಪಡೆಯಲು ವಿಚಾರಣಾ ನ್ಯಾಯಾಲಯ ಆದೇಶಿಸಿದೆ ಎಂದು ಆಕ್ಷೇಪಿಸಿ ಆರೋಪಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾ.ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯ ಪೀಠ, ಮಗುವಿನ ಪಿತೃತ್ವ ಪರೀಕ್ಷಿಸಲು ಅತ್ಯಾಚಾರ ಆರೋಪಿಯ ರಕ್ತದ ಮಾದರಿಯನ್ನು ತೆಗೆದುಕೊಳ್ಳುವಂತೆ ವಿಚಾರಣಾ ನ್ಯಾಯಾಲಯ ನೀಡಿರುವ ಆದೇಶದಲ್ಲಿ ಯಾವುದೇ ತಪ್ಪಿಲ್ಲ. ವಿಚಾರಣಾ ನ್ಯಾಯಾಲಯದ ಆದೇಶ ಸಂವಿಧಾನದ 20 (3) ವಿಧಿಯ ಉಲ್ಲಂಘನೆಯೂ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ:
ರಾಯಚೂರು ಜಿಲ್ಲೆಯ ಸಿಂಧನೂರಿನ ನಿವಾಸಿ ಮಾಳಪ್ಪ ಕೂಲಿ ಕೆಲಸಕ್ಕೆ ಆಹ್ವಾನಿಸಿ 28 ವರ್ಷದ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದರು. ಈ ಸಂಬಂಧ ಸಂತ್ರಸ್ತೆ ಗರ್ಭಿಣಿಯಾದ ನಂತರ ಪೋಷಕರು ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಈ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಈ ವೇಳೆ ಆರೋಪಿ ತನ್ನ ಆರೋಪಕ್ಕೆ ಸಾಕ್ಷ್ಯ ತೋರಿಸುವಂತೆ ವಾದಿಸಿದ್ದರು. ಈ ವೇಳೆ ಡಿಎನ್‌ಎ ಪರೀಕ್ಷೆಗೆ ಅವಕಾಶ ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ್ದ ನ್ಯಾಯಾಲಯ ಆರೋಪಿಯ ಡಿಎನ್‌ಎ ಪರೀಕ್ಷೆಗಾಗಿ ರಕ್ತದ ಮಾದರಿ ತೆಗೆದುಕೊಳ್ಳಲು ಮುಖ್ಯ ವೈದ್ಯಕೀಯ ಅಧಿಕಾರಿಗೆ ಸೂಚಿಸಿತ್ತು.
ರಕ್ತದ ಮಾದರಿ ಸಂಗ್ರಹಿಸಿದ ಬಳಿಕ ಹೈಕೋರ್ಟ್ ಮೆಟ್ಟಿಲೇರಿದ್ದ ಆರೋಪಿ, 2017ರ ಜನವರಿಯಲ್ಲಿ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿದ್ದರು. ಜತೆಗೆ ಡಿಎನ್‌ಎ ಪರೀಕ್ಷೆ ನಡೆಸುವುದು ಕಾನೂನಿನ ದೃಷ್ಟಿಯಲ್ಲಿ ಸಮರ್ಥನೀಯವಲ್ಲ. ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ ಎಂದು ಆರೋಪಿ ಪರ ವಕೀಲರು ವಾದಿಸಿದ್ದರು. ಅಲ್ಲದೇ, ಸಂತ್ರಸ್ತೆ ಈಗಾಗಲೇ ಸಿದ್ದಪ್ಪ ಎಂಬಾತನನ್ನು ಮದುವೆಯಾಗಿದ್ದು, ಆರೋಪಿಯ ರಕ್ತದ ಮಾದರಿಯನ್ನು ಡಿಎನ್‌ಎ ಪರೀಕ್ಷೆಗೆ ತೆಗೆದುಕೊಳ್ಳಲು ಯಾವುದೇ ಸಮರ್ಥನೆ ಇಲ್ಲ ಎಂದಿದ್ದರು.