ಬೆಂಗಳೂರು:ರಾಜ್ಯದ ಕೆಲ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಿ ಬರದಂತೆ ಮುಸ್ಲಿಂ ವಿದ್ಯಾರ್ಥಿನಿಯರನ್ನು ನಿರ್ಬಂಧಿಸಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಸಂಬಂಧ ಹೈಕೋರ್ಟ್ ತೀರ್ಪು ಇಂದು ಹೊರ ಬೀಳಲಿದೆ.
ತರಗತಿಗೆ ಹಿಜಾಬ್ ಧರಿಸಿ ಬಾರದಂತೆ ನಿರ್ಬಂಧಿಸಿರುವ ಕ್ರಮ ಪ್ರಶ್ನಿಸಿ ಉಡುಪಿಯ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ರೇಷಮ್ ಸೇರಿದಂತೆ ಇತರ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳ ವಿಚಾರಣೆಯನ್ನು ಫೆಬ್ರವರಿ 25ರಂದು ಪೂರ್ಣಗೊಳಿಸಿದ್ದ ಹೈಕೋರ್ಟ್ ತ್ರಿಸದಸ್ಯ ಪೀಠ ತೀರ್ಪು ಕಾಯ್ದಿರಿಸಿತ್ತು.
ಓದಿ:ಹೈಕೋರ್ಟ್ನಿಂದ ಹಿಜಾಬ್ ಅಂತಿಮ ತೀರ್ಪು.. ಬೆಂಗಳೂರಲ್ಲಿ ಒಂದು ವಾರ 144 ಸೆಕ್ಷನ್ ಜಾರಿ
ಇಂದು ಹೈಕೋರ್ಟ್ ತೀರ್ಪು ಪ್ರಕಟಿಸಲಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ. ಪ್ರಕರಣ ಕೇವಲ ಧಾರ್ಮಿಕ ಸೂಕ್ಷ್ಮ ಸಂಗತಿಯನ್ನಷ್ಟೇ ಒಳಗೊಂಡಿದೆಯಲ್ಲದೇ, ರಾಜಕೀಯವಾಗಿಯೂ ತಳುಕು ಹಾಕಿಕೊಂಡಿರುವುದರಿಂದ ಹೈಕೋರ್ಟ್ ಯಾವುದೇ ತೀರ್ಪು ನೀಡಿದರೂ ಅರ್ಜಿದಾರ ವಿದ್ಯಾರ್ಥಿನಿಯರು ಅಥವಾ ಸರ್ಕಾರ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ಎಲ್ಲ ಸಾಧ್ಯತೆಯೂ ಇದೆ.
ಮಧ್ಯಂತರ ಆದೇಶ:ಹಿಜಾಬ್ ನಿರ್ಬಂಧಿಸಿದ ಬಳಿಕ ರಾಜ್ಯದಲ್ಲಿ ಸಾಕಷ್ಟು ಪ್ರತಿಭಟನೆ, ಗಲಭೆಗಳು ಉಂಟಾಗಿದ್ದವು. ಪರಿಣಾಮ ಶಾಲಾ - ಕಾಲೇಜುಗಳ ವಾತಾವರಣ ಹದಗೆಟ್ಟಿದ್ದರಿಂದ ಹಾಗೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನ್ಯಾಯಾಲಯ ಫೆ.10ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ನೀಡಿತ್ತು. ಆದೇಶದಲ್ಲಿ, ಪ್ರಕರಣ ಇತ್ಯರ್ಥವಾಗುವವರೆಗೂ ಸಮವಸ್ತ್ರ ಸಂಹಿತೆ ಜಾರಿ ಮಾಡಿರುವ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ಚಿಹ್ನೆ ಹೊಂದಿರುವ ಉಡುಪು ಧರಿಸಿ ಹೋಗಬಾರದು ಎಂದು ಸ್ಪಷ್ಟಪಡಿಸಿತ್ತು.