ಬೆಂಗಳೂರು:ಎಸಿಬಿಗೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಹೇಗೆ ಸರಿಯಾಗಿ ತನಿಖೆ ನಡೆಸಬೇಕೆನ್ನುವ ವಿಧಾನವೇ ಸರಿಯಾಗಿ ತಿಳಿದಿಲ್ಲ. ತನಿಖಾ ಪದ್ಧತಿಯಲ್ಲಿ ಸಾಕಷ್ಟು ಲೋಪದೋಷಗಳಿವೆ ಎಂದು ಹೈಕೋರ್ಟ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಮತ್ತೊಮ್ಮೆ ಚಾಟಿ ಬೀಸಿದೆ. ಹೈಕೋರ್ಟ್ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಎಸಿಬಿಯು ತನಿಖೆಯಲ್ಲಿ ಕಾನೂನುಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಇಂತಹ ತಪ್ಪುಗಳನ್ನು ನೋಡಿಕೊಂಡು ನ್ಯಾಯಾಲಯ ಸುಮ್ಮನೆ ಕೂರಲಾಗದು ಎಂದು ಎಸಿಬಿಯನ್ನು ತರಾಟೆಗೆ ತಗೆದುಕೊಂಡರು.
ತಮ್ಮ ಮೇಲಿನ ಭ್ರಷ್ಟಾಚಾರ ಪ್ರಕರಣದಲ್ಲಿ ಎಸಿಬಿ ಸರಿಯಾಗಿ ತನಿಖೆ ನಡೆಸದೇ ಮೊಕದ್ದಮೆ ದಾಖಲಿಸಿದ್ದರ ವಿರುದ್ಧ ಕೆಪಿಟಿಸಿಎಲ್‌ನ ಎಕ್ಸಿಕ್ಯೂಟಿವ್ ಎಂಜಿನಿಯರ್ ಕೆ.ಆರ್.ಕುಮಾರ್ ನಾಯ್ಕ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಎಸಿಬಿ ವಿರುದ್ಧ ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ಎಸಿಬಿಯು ಈ ಪ್ರಕರಣದಲ್ಲಿ ಕಾನೂನಿನ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಂಡಿದೆ. ಇಂತಹ ತಪ್ಪು ನೋಡಿಯೂ ನ್ಯಾಯಾಲಯ ಮೌನವಾಗಿರಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಆತುರಾತುರವಾಗಿ ಎಸಿಬಿ ಮೂಲ ವರದಿ ಸಲ್ಲಿಸಿದೆ. ಒಂದೇ ದಿನದ 24 ಗಂಟೆಗಳಲ್ಲೇ ಮೂಲ ವರದಿ ಮತ್ತು ಎಫ್ಐಆರ್ ಸಿದ್ದಪಡಿಸಲಾಗಿದ್ದು, ಅಧಿಕಾರಿಯ ಸೇವಾವಧಿಯ ವಿವರವನ್ನ ಸಹ ನಮೂದಿಸಿಲ್ಲ. ಎಫ್ಐಆರ್ ದಾಖಲಿಸುವ ಮುನ್ನ ಅಧಿಕಾರಿಯ ವಾರ್ಷಿಕ ಸಂಬಳ ಪರಿಶೀಲಿಸಿಲ್ಲ. ಆಸ್ತಿಯ ವಾರ್ಷಿಕ ವರದಿ ಪರಾಮರ್ಶಿಸಿಲ್ಲ. ಈ ಪ್ರಕರಣದಲ್ಲಿ ಕಾನೂನಿನ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಎಸಿಬಿಯ ತನಿಖೆಯ ತಪ್ಪುಗಳನ್ನು ಎಳೆಎಳೆಯಾಗಿ ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ ಬಿಚ್ಚಿಟ್ಟಿತು.