ಬೆಂಗಳೂರು: ಸಣ್ಣ-ಪುಟ್ಟ ಅಪರಾಧ ಪ್ರಕರಣಗಳನ್ನು 60 ದಿನಗಳಲ್ಲಿ ಹಾಗೂ ಗಂಭೀರ ಅಪರಾಧ ಪ್ರಕರಣಗಳ ತನಿಖೆಯನ್ನು 90 ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ಹೈಕೋರ್ಟ್ ರಾಜ್ಯ ಪೊಲೀಸ್ ಮತ್ತು ತನಿಖಾ ಸಂಸ್ಥೆಗಳಿಗೆ ನಿರ್ದೇಶಿಸಿದೆ. ಖಾಸಗಿ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲು ಮ್ಯಾಜಿಸ್ಟ್ರೇಟ್ ನೀಡಿರುವ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಪ್ರಕರಣದ ವಿಚಾರಣೆ ನಡೆದ ನ್ಯಾ.ಎಸ್.ಸುನಿಲ್ ದತ್ ಯಾದವ್ ಅವರಿದ್ದ ಪೀಠ ಪೊಲೀಸರಿಗೆ ಹಾಗೂ ಮ್ಯಾಜಿಸ್ಟ್ರೇಟ್ಗಳಿಗೆ ಅನ್ವಯಿಸುವಂತೆ ಕೆಲ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಹಣಕಾಸು ವಂಚನೆ, ಹವಾಲಾ ಮೂಲಕ ಹಣ ಸಾಗಣೆ ಮತ್ತು ಡಿಜಿಟಲ್ ಕರೆನ್ಸಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ನಡೆಸಲು ಪೊಲೀಸ್ ಸಿಬ್ಬಂದಿಗೆ ಅಗತ್ಯ ತಾಂತ್ರಿಕ ತರಬೇತಿ ನೀಡುವ ಅಗತ್ಯತೆಯ ಬಗ್ಗೆ ಪ್ರಸ್ತಾಪಿಸಿರುವ ಪೀಠವು ರಾಜಕೀಯ ಹಸ್ತಕ್ಷೇಪದಿಂದ ಅಧಿಕಾರಿಗಳು ತನಿಖೆ ಪೂರ್ಣಗೊಳಿಸಲು ಧೀರ್ಘಾವಧಿ ತೆಗೆದುಕೊಂಡಾಗ ಸಾಕ್ಷ್ಯಗಳು ನಾಶವಾಗಬಹುದು. ಹೀಗಾಗಿ, ಮ್ಯಾಜಿಸ್ಟ್ರೇಟ್ ಸಿಆರ್ಪಿಸಿ ಸೆಕ್ಷನ್ 156(3)ರಡಿ ಲಭ್ಯವಿರುವ (ತನಿಖೆಗೆ ಆದೇಶಿಸುವ) ಅಧಿಕಾರ ಚಲಾಯಿಸಬೇಕೆಂದು ನಿರ್ದೇಶಿಸಿದೆ.
ಹೈಕೋರ್ಟ್ ನಿರ್ದೇಶನಗಳು ಹೀಗಿವೆ:ಅಪರಾಧ ಪ್ರಕರಣಗಳನ್ನು ಸಣ್ಣ, ಗಂಭೀರ ಮತ್ತು ಘೋರ ಅಪರಾಧಗಳು ಎಂದು ಮೂರು ವಿಧಗಳಾಗಿ ವರ್ಗೀಕರಿಸಬಹುದು. ಸಣ್ಣ-ಪುಟ್ಟ ಅಪರಾಧಗಳ ತನಿಖೆ ಪೂರ್ಣಗೊಳಿಸಲು 60 ದಿನಗಳ ಗಡುವು ವಿಧಿಸಬಹುದು. ತನಿಖಾಧಿಕಾರಿಯು ತನಿಖೆ ಪೂರ್ಣಗೊಳಿಸಲು ಸೂಕ್ತ ಕಾರಣಗಳನ್ನು ಉಲ್ಲೇಖಿಸಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ವಿಶೇಷ ನ್ಯಾಯಾಧೀಶರು ಅಥವಾ ಮ್ಯಾಜಿಸ್ಟ್ರೇಟ್ ಸಮಯ ವಿಸ್ತರಿಸಬಹುದು ಎಂದು ಹೈಕೋರ್ಟ್ ಹೇಳಿದೆ.
ಗಂಭೀರ ಮತ್ತು ಘೋರ ಅಪರಾಧಗಳ ತನಿಖೆಯನ್ನು 90 ದಿನಗಳಲ್ಲಿ ಪೂರ್ಣಗೊಳಿಸಬೇಕು. ಈ ವೇಳೆ, ತನಿಖಾಧಿಕಾರಿ ಕೋರಿಗೆ ಮೇರೆಗೆ ತನಿಖೆ ಪೂರ್ಣಗೊಳಿಸಲು ಮ್ಯಾಜಿಸ್ಟ್ರೇಟ್ ಹೆಚ್ಚಿನ ಸಮಯ ನೀಡಬಹುದು. ಆದರೆ, ಅದಕ್ಕೆ ಸೂಕ್ತ ಕಾರಣಗಳಿರಬೇಕು. ತನಿಖಾಧಿಕಾರಿಯು ಕಾಲಾಮಿತಿಯಲ್ಲಿ ತನಿಖೆ ಪೂರ್ಣಗೊಳಿಸದೇ ಇದ್ದರೆ ಮೇಲಧಿಕಾರಿಯು ಸಿಆರ್‌ಪಿಸಿ ಸೆಕ್ಷನ್ 36ರ ಪ್ರಕಾರ ತಮ್ಮ ಅಧಿಕಾರ ಚಲಾಯಿಸಬಹುದು ಎಂದು ನ್ಯಾಯ ಪೀಠ ತಿಳಿಸಿದೆ.
ತನಿಖೆ ಶೀಘ್ರವಾಗಿ ನಡೆಯುತ್ತಿಲ್ಲ ಅಥವಾ ವಿಳಂಬವಾಗುತ್ತಿದೆ ಎನ್ನಿಸಿದರೆ ಮ್ಯಾಜಿಸ್ಟ್ರೇಟ್ ವಿಳಂಬಕ್ಕೆ ಕಾರಣ ಕೇಳಬಹುದು ಹಾಗೂ ಸಿಆರ್ಪಿಸಿ ಸೆಕ್ಷನ್ 156(3) ಅಡಿ ಲಭ್ಯವಿರುವ (ತನಿಖೆಗೆ ಆದೇಶಿಸುವ) ಅಧಿಕಾರ ಚಲಾಯಿಸಬಹುದು. ದೂರು ನೀಡಿದ ಬಳಿಕ ಎಫ್ಐಆರ್ ದಾಖಲಿಸಿಲ್ಲ ಎಂಬ ಕುರಿತಂತೆ ಅರ್ಜಿ ಸಲ್ಲಿಕೆಯಾದಾರೆ ಅದನ್ನು 30 ದಿನಗಳಲ್ಲಿ ಮ್ಯಾಜಿಸ್ಟ್ರೇಟ್ ಇತ್ಯರ್ಥಪಡಿಸುವುದು. ಆರೋಪಿಯ ಬಂಧನದ ಅವಧಿ ವಿಸ್ತರಿಸುವಂತೆ ತನಿಖಾಧಿಕಾರಿಯು ಕೋರಿದ ಸಂದರ್ಭದಲ್ಲಿ ಮ್ಯಾಜಿಸ್ಟ್ರೇಟ್ ತನಿಖೆಯ ಸ್ಥಿತಿಗತಿ ಕುರಿತು ವಿಚಾರಿಸುವುದು ಎಂದೂ ಹೇಳಿದೆ.