ಬೆಂಗಳೂರು: ಸಾಲ ವಸೂಲಾತಿ ನ್ಯಾಯಮಂಡಳಿಗೆ (ಡಿಆರ್‌ಟಿ) ನಾಗರಿಕರ ಪಾಸ್‌ಪೋರ್ಟ್ ವಶಕ್ಕೆ ಪಡೆದುಕೊಳ್ಳುವ ಅಧಿಕಾರವಿಲ್ಲ ಎಂದು ಹೈಕೋರ್ಟ್ ತಿಳಿಸಿತು. ತನ್ನಿಂದ ವಶಕ್ಕೆ ಪಡೆದ ಪಾಸ್‌ಪೋರ್ಟ್ ಹಿಂದಿರುಗಿಸಲು ನಿರಾಕರಿಸಿದ್ದ ಡಿಆರ್‌ಟಿ ಕ್ರಮ ಪ್ರಶ್ನಿಸಿ ಮುಂಬೈನ ಶಂಭು ಕುಮಾರ್ ಕಸ್ಲಿವಾಲ್ ಎಂಬವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಆದೇಶ ಹೊರಹಾಕಿತು. ಅಲ್ಲದೆ, 2016ರಲ್ಲಿ ವಶಕ್ಕೆ ಪಡೆದಿರುವ ಪಾಸ್‌ಪೋರ್ಟ್ ಅನ್ನು ಮರಳಿಸುವಂತೆ ಸೂಚನೆ ನೀಡಿದೆ.
ಡಿಆರ್‌ಟಿಯು ಸಿವಿಲ್ ನ್ಯಾಯಾಲಯದಂತೆ ಕಾರ್ಯನಿರ್ವಹಿಸುತ್ತದೆ. ಈ ನ್ಯಾಯಾಲಯಕ್ಕೆ ಪಾಸ್‌ಪೋರ್ಟ್ ಅನ್ನು ತನ್ನ ವಶದಲ್ಲಿಟ್ಟುಕೊಳ್ಳುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೇಳಿದೆ. ನಂದಾ ವಿರುದ್ಧದ ಸಿಬಿಐ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿರುವ ನ್ಯಾಯಪೀಠ, ಸಿಆರ್‌ಪಿಸಿ 102 ಅಥವಾ 104ರ ಅಡಿಯಲ್ಲಿ ಕ್ರಿಮಿನಲ್ ನ್ಯಾಯಾಲಯಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೂ ಪಾಸ್‌ಪೋರ್ಟ್ ವಶಕ್ಕೆ ಪಡೆಯುವುದಕ್ಕೆ ಅಧಿಕಾರ ಇರುವುದಿಲ್ಲ. ಅದೇ ರೀತಿಯಲ್ಲಿ ಡಿಆರ್‌ಟಿಗೂ ಅಧಿಕಾರವಿಲ್ಲ. ಅಗತ್ಯವಿದ್ದಲ್ಲಿ ಅರ್ಜಿದಾರರ ಪಾಸ್‌ಪೋರ್ಟ್ ಅನ್ನು ಪಾಸ್‌ಪೋರ್ಟ್ ಕಾಯಿದೆ ಸೆಕ್ಷನ್ 10ರ ಅಡಿಯಲ್ಲಿ ವಶಪಡಿಸಿಕೊಳ್ಳವುದಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಸ್ವಾತಂತ್ರ್ಯವಿದೆ ಎಂದು ಪೀಠ ಹೇಳಿತು.
ಪ್ರಕರಣದ ವಿವರ:1999ರ ನವೆಂಬರ್ 18ರಂದು ಅರ್ಜಿದಾರರು ಸಾಲಗಾರರಿಂದ ಪಡೆದ ಸಾಲಕ್ಕೆ ಕೆಲವು ಭದ್ರತಾ ಒಪ್ಪಂದ ಮಾಡಿಕೊಂಡಿದ್ದರು. 2015ರ ಮಾರ್ಚ್ 20ರಂದು ಕಂಪನಿಗಳು ಸಾಲ ಮರು ಪಾವತಿ ಮಾಡುವ ಸಂಬಂಧ ಕ್ರಮಕ್ಕೆ ಮುಂದಾಗಿದ್ದರು. ಅದರಂತೆ ಅರ್ಜಿದಾರರ ಆಸ್ತಿಗಳನ್ನು ಮಾರಾಟ ಮಾಡಲಾಗಿತ್ತು. ಇದಾದ ಬಳಿಕ ಸಾಲದಾತರು, ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಕಾಯಿದೆ 1993ರ ಅಡಿಯಲ್ಲಿ ಡಿಆರ್‌ಟಿಗೆ ಅರ್ಜಿ ಸಲ್ಲಿಸಿ ಪಾಸ್‌ಪೋರ್ಟ್ ವಶಕ್ಕೆ ಪಡೆಯುವುದು ಮತ್ತು ದೇಶ ಬಿಟ್ಟುಹೋಗದಂತೆ ನಿರ್ಬಂಧ ಹೇರುವಂತೆ ಕೋರಿದ್ದರು.