ಬೆಂಗಳೂರು: ಜಾತಿ ಅಥವಾ ಧರ್ಮದ ಹೆಸರಿನಲ್ಲಿ ಇಷ್ಟಪಟ್ಟ ವ್ಯಕ್ತಿಯನ್ನು ಮದುವೆಯಾಗುವ ಹಕ್ಕನ್ನು ನಿರ್ಬಂಧಿಸಲಾಗದು ಎಂದು ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ತಾನು ಪ್ರೀತಿಸುತ್ತಿರುವ ಯುವತಿಯನ್ನು ಪೋಷಕರು ಅಕ್ರಮ ಬಂಧನದಲ್ಲಿ ಇರಿಸಿದ್ದಾರೆ ಎಂದು ಆರೋಪಿಸಿ ಯುವಕನೋರ್ವ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುಜಾತ ನೇತೃತ್ವದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪೀಠ ತನ್ನ ತೀರ್ಪಿನಲ್ಲಿ, ಪ್ರಾಪ್ತ ವಯಸ್ಸಿನ ಯಾವುದೇ ವ್ಯಕ್ತಿ ತನಗಿಷ್ಟವಾದವರನ್ನು ವಿವಾಹವಾಗುವ ಅಥವಾ ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳುವ ಮೂಲಭೂತ ಹಕ್ಕನ್ನು ಹೊಂದಿದ್ದಾರೆ. ಈ ವೈಯಕ್ತಿಕ ಸ್ವಾತಂತ್ರವನ್ನು ಜಾತಿ-ಮತಗಳ ಕಾರಣದಿಂದ ಯಾರೊಬ್ಬರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಯುವತಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು ಆಕೆ ತನ್ನ ಬದುಕಿನ ಕುರಿತು ನಿರ್ಣಯ ಕೈಗೊಳ್ಳಲು ಸಮರ್ಥರಿದ್ದಾರೆ ಎಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿದೆ.
ಪ್ರಕರಣದ ಹಿನ್ನೆಲೆ: ನಗರದ ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಯುವತಿ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು. ವರ್ಷದ ಹಿಂದೆ ವಿಚ್ಛೇದನ ಪಡೆದುಕೊಂಡು ಪೋಷಕರೊಂದಿಗೆ ಚಂದ್ರ ಲೇಔಟ್ನಲ್ಲಿ ವಾಸವಿದ್ದರು. ಈ ನಡುವೆ ಸಹೋದ್ಯೋಗಿಯೊಂದಿಗೆ ಪ್ರೇಮಾಂಕುರವಾಗಿ ಪೋಷಕರೆದುರು ವಿವಾಹದ ಕುರಿತು ಪ್ರಸ್ತಾಪಿಸಿದ್ದರು. ಇದಕ್ಕೆ ಪೋಷಕರು ಸಮ್ಮತಿ ಸೂಚಿಸಿರಲಿಲ್ಲ. ವರ್ಷದ ಹಿಂದಷ್ಟೇ ವಿಚ್ಛೇದನ ಪಡೆದಿರುವುದರಿಂದ ಈಗಲೆ ವಿವಾಹ ಬೇಡ ಎಂದು ತಿಳಿ ಹೇಳಿದ್ದರು.
ಕೆಲದಿನಗಳ ಕಾಲ ಯುವತಿ ಕಾಣದ ಹಿನ್ನೆಲೆಯಲ್ಲಿ ಯುವಕ, ತನ್ನ ಪ್ರೇಯಸಿಯನ್ನು ಆಕೆಯ ಪೋಷಕರು ಅಕ್ರಮ ಬಂಧನದಲ್ಲಿ ಇಟ್ಟಿದ್ದಾರೆ ಎಂದು ಆರೋಪಿಸಿ ಹೈಕೋರ್ಟ್ಗೆ ಎಬಿಎಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ. ಹೈಕೋರ್ಟ್ ಸೂಚನೆಯಂತೆ ಚಂದ್ರ ಲೇಔಟ್ ಠಾಣೆ ಪೊಲೀಸರು ಯುವತಿಯನ್ನು ನ್ಯಾಯಾಲಯದ ಎದುರು ಹಾಜರುಪಡಿಸಿದ್ದರು. ಈ ವೇಳೆ ಯುವತಿ ತಾನು ಯುವಕನನ್ನು ಪ್ರೀತಿಸುತ್ತಿದ್ದೇನೆ ಹಾಗೂ ಆತನನ್ನು ಮದುವೆಯಾಗಲು ನಿರ್ಧರಿಸಿದ್ದೇನೆ. ಆದರೆ ಪೋಷಕರು ಯುವಕ ಅನ್ಯ ಧರ್ಮಕ್ಕೆ ಸೇರಿದವನೆಂದು ವಿವಾಹಕ್ಕೆ ಒಪ್ಪುತ್ತಿಲ್ಲ ಎಂದು ವಿವರಿಸಿದ್ದರು.