ಬೆಂಗಳೂರು: ಹಿಜಾಬ್ ನಿರ್ಬಂಧಿಸದಂತೆ ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಪ್ರಕರಣದಲ್ಲಿ ಮಧ್ಯಂತರ ಆದೇಶ ನೀಡಲು ನಿರಾಕರಿಸಿದೆ. ಅಲ್ಲದೇ, ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವಂತೆ ಕೋರಿ ಮುಖ್ಯ ನ್ಯಾಯಮೂರ್ತಿಗೆ ಮನವಿ ಮಾಡಿದೆ.
ಶಿಕ್ಷಣ ಸಂಸ್ಥೆಗಳು ಹಿಜಾಬ್ ಧರಿಸಿ ಕಾಲೇಜಿಗೆ ಬರದಂತೆ ನಿರ್ಬಂಧಿಸಿರುವ ಕ್ರಮ ಹಾಗೂ ಸಮವಸ್ತ್ರ ಸಂಹಿತೆ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಇತರ ವಿದ್ಯಾರ್ಥಿನಿಯರ ಪರ ಪೋಷಕರು ಸಲ್ಲಿಸಿರುವ 3 ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠ ಇಂದೂ ವಿಚಾರಣೆ ನಡೆಸಿತು.
ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡುವ ಇಂಗಿತ ವ್ಯಕ್ತಪಡಿಸಿದ ಜಡ್ಜ್:ವಿಚಾರಣೆ ಆರಂಭದಲ್ಲೇ ನ್ಯಾಯಮೂರ್ತಿ ಉಭಯ ಪಕ್ಷಗಳ ವಕೀಲರನ್ನು ಉದ್ದೇಶಿಸಿ, ಪ್ರಕರಣದಲ್ಲಿ ಸಾಕಷ್ಟು ವಿಚಾರಗಳನ್ನು ಚರ್ಚಿಸಬೇಕಿದೆ. ಹೀಗಾಗಿ ಅರ್ಜಿಗಳ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಬಹುದು. ತಮ್ಮ ಸಹಮತವಿದ್ದರೆ ವರ್ಗಾವಣೆ ಮಾಡಬಹುದಲ್ಲವೇ ಎಂದರು.
ನಂಬಿಕೆ ಇದೆ ನೀವೇ ಮುಂದುವರಿಸಿ:ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು ಹಾಗೂ ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್, ಅರ್ಜಿಯನ್ನು ತಾವೇ ವಿಚಾರಣೆ ನಡೆಸಿ. ನ್ಯಾಯಪೀಠದ ಬಗ್ಗೆ ನಮಗೆ ವಿಶ್ವಾಸವಿದೆ ಎಂದರು.
ಕೆಲಕಾಲ ಅರ್ಜಿದಾರರ ವಾದ ಆಲಿಕೆ.. ಅಂತಿಮವಾಗಿ ವಿಸ್ತೃತ ಪೀಠಕ್ಕೆ ವರ್ಗಾಯಿಸುವ ನಿರ್ಧಾರ:ಕೆಲ ಕಾಲ ಅಡ್ವೊಕೇಟ್ ಜನರಲ್ ಹಾಗೂ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಅಂತಿವಾಗಿ ಪ್ರಕರಣದಲ್ಲಿ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಹೀಗಾಗಿ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಲು ಹಾಗೂ ವಿಸ್ತೃತ ಪೀಠ ರಚಿಸುವಂತೆ ಮುಖ್ಯ ನ್ಯಾಯಮೂರ್ತಿಗಳಿಗೆ ಕೋರುತ್ತಿದ್ದೇವೆ ಎಂದು ತಿಳಿಸಿತು.
ಹಾಗೆಯೇ, ಅರ್ಜಿಗಳನ್ನು ತಕ್ಷಣವೇ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಿತು. ಇದೇ ವೇಳೆ ಪ್ರಕರಣದಲ್ಲಿ ಯಾವುದೇ ಮಧ್ಯಂತರ ಆದೇಶ ನೀಡಲು ನಿರಾಕರಿಸಿದ ಪೀಠ, ಸಿಜೆ ನಿಗದಿಪಡಿಸುವ ಪೀಠದಲ್ಲಿ ಈ ಕುರಿತು ಮನವಿ ಸಲ್ಲಿಸುವಂತೆ ಅರ್ಜಿದಾರರ ಪರ ವಕೀಲರಿಗೆ ತಿಳಿಸಿತು.
ವಾದ - ಪ್ರತಿವಾದಗಳ ಸಾರಾಂಶ:ವಿಚಾರಣೆ ಆರಂಭದಲ್ಲಿ ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾಯಿಸುವ ಸಲಹೆಗೆ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿಯರ ಪರ ಹಿರಿಯ ವಕೀಲ ದೇವದತ್ ಕಾಮತ್, ನ್ಯಾಯಾಲಯದ ಬಗ್ಗೆ ತಮಗೆ ಸಂಪೂರ್ಣ ಭರವಸೆ ಹಾಗೂ ವಿಶ್ವಾಸವಿದೆ. ಈ ಬಗ್ಗೆ ನಮ್ಮ ಆಕ್ಷೇಪವೇನೂ ಇಲ್ಲ. ಒಂದು ವೇಳೆ ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡುವುದಾದರೆ ಅರ್ಜಿಗಳ ಇತ್ಯರ್ಥಕ್ಕೆ ಸಮಯ ಹಿಡಿಯುತ್ತದೆ. ಹೀಗಾಗಿ, ಹಿಜಾಬ್ ಧರಿಸಿ ಕಾಲೇಜಿಗೆ ಹಾಜರಾಗಲು ಅವಕಾಶ ನೀಡಿ ಸೂಕ್ತ ಮಧ್ಯಂತರ ಆದೇಶ ಹೊರಡಿಸಬೇಕು ಎಂದು ಕೋರಿದರು.
ಮಧ್ಯಂತರ ಆದೇಶದ ಕೋರಿಕೆಗೆ ಎಜಿ ಆಕ್ಷೇಪ:ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಡ್ವೊಕೇಟ್ ಜನರಲ್, ಸಮವಸ್ತ್ರ ಸಂಹಿತೆಯನ್ನು ಸರ್ಕಾರ ನಿರ್ಧರಿಸುತ್ತಿಲ್ಲ. ಕಾಲೇಜು ಸಮಿತಿಗಳಿಗೆ ಅಧಿಕಾರ ನೀಡಲಾಗಿದೆ. ಅವುಗಳೇ ಸ್ವತಂತ್ರವಾಗಿ ನಿರ್ಧರಿಸುತ್ತವೆ. ಆದರೆ, ಅರ್ಜಿದಾರರು ಸರ್ಕಾರದ ಆದೇಶ ಪ್ರಶ್ನಿಸಿದ್ದಾರೆ. ಇದನ್ನು ಅರ್ಜಿದಾರರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.