ಬೆಂಗಳೂರು:ಸುಮಾರು 10 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಹೈಕೋರ್ಟ್ ರದ್ದುಪಡಿಸಿದೆ.
ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ಮತ್ತು ಪ್ರಕರಣ ರದ್ದು ಕೋರಿ ಉಡುಪಿಯ ಕರ್ನಾಟಕ ಕರಾವಳಿ ಭದ್ರತಾ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಇನ್ಸ್ಪೆಕ್ಟರ್ ವೈ.ಗಂಗಿರೆಡ್ಡಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್, ಆರೋಪಿಯಾಗಿರುವ ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧ ಲಂಚ ಆರೋಪದಲ್ಲಿ ತನಿಖೆ ಪ್ರಾರಂಭಿಸಲಾಗಿದ್ದು, ಮನೆಯ ಮೇಲೆ ದಾಳಿ ನಡೆಸಿ ಕೆಲವು ದಾಖಲೆಗಳನ್ನು ಸಂಗ್ರಹಿಸಲಾಗಿತ್ತು. ಈ ಆಧಾರದಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ತನಿಖಾಧಿಕಾರಿಗಳು ವ್ಯಾಪ್ತಿ ಮೀರಿ ತನಿಖೆ ನಡೆಸಿದ್ದಾರೆ ಎಂದು ತಿಳಿಸಿ ಪ್ರಕರಣ ರದ್ದುಪಡಿಸಿದರು.
ಪ್ರಕರಣದ ಹಿನ್ನೆಲೆ: ಶ್ರೀನಿವಾಸ್ ಪ್ರಸಾದ್ ಎಂಬುವರು ತಮ್ಮ ವಾಹನ ಕಳುವಾಗಿರುವ ಸಂಬಂಧ ದೂರು ದಾಖಲಿಸಲು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕರಾಗಿದ್ದ ಗಂಗಿರೆಡ್ಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲು 30 ಸಾವಿರ ರೂ. ಬೇಡಿಕೆಯಿಟ್ಟಿದ್ದರು. ಈ ಸಂಬಂಧ ಸಂಭಾಷಣೆ ನಡೆಸಿದ್ದ ಧ್ವನಿಯನ್ನು ರೆಕಾರ್ಡಿಂಗ್ ಮಾಡಿಕೊಂಡಿದ್ದ ಶ್ರೀನಿವಾಸ್ ಪ್ರಸಾದ್, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇದಾದ ಬಳಿಕ ಗಂಗಿರೆಡ್ಡಿ ಅವರಿಂದ ವಾಯ್ಸ್ ರೆಕಾರ್ಡಿಂಗ್ ಕಸಿದುಕೊಂಡು ನಾಶಪಡಿಸಿದ್ದರು ಎಂದು ಆರೋಪಿಸಿದ್ದರು.