ಬೆಂಗಳೂರು :ಸರ್ಕಾರದ ಅಧೀನದ ಸಂಸ್ಥೆಯಲ್ಲಿ ನಿಗದಿತ ಉದ್ಯೋಗಕ್ಕೆ ಅರ್ಹ ಅಭ್ಯರ್ಥಿಗಳನ್ನು ನಿರಾಕರಿಸುವುದು ಕಲ್ಯಾಣ ರಾಜ್ಯದ ಲಕ್ಷಣವಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಜಾತಿ ಪ್ರಮಾಣಪತ್ರವನ್ನು ಸ್ಪಷ್ಟವಾಗಿ ಸಲ್ಲಿಸದ ಅಭ್ಯರ್ಥಿಗೆ ಸೂಪರ್ ನ್ಯೂಮರರಿ ಹುದ್ದೆ ನೀಡುವಂತೆ ಕರ್ನಾಟಕ ಹಾಲು ಮಹಾ ಮಂಡಳಿ (ಕೆಎಂಎಫ್)ಗೆ ನಿರ್ದೇಶನ ನೀಡಿದೆ.
ಜಾತಿ ಪ್ರಮಾಣಪತ್ರ ಅಸ್ಪಷ್ಟವಾಗಿದೆ ಎಂಬ ಕಾರಣ ನೀಡಿ ತನ್ನನ್ನು ಸಾಮಾನ್ಯ ವರ್ಗದಲ್ಲಿ ನೇಮಕ ಮಾಡಿಕೊಂಡಿದ್ದ ಕೆಎಂಎಫ್ ಕ್ರಮ ಪ್ರಶ್ನಿಸಿ ಬೆಂಗಳೂರಿನ ನಿವಾಸಿ ಪಿ.ಆರ್. ದೇವರಾಜು ಎಂಬುವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ, ಅರ್ಜಿದಾರ ಸಲ್ಲಿಸಬೇಕಾದ ಮೂಲ ಜಾತಿ ಪ್ರಮಾಣಪತ್ರ ಸ್ವೀಕರಿಸಿ, ಸೂಪರ್ ನ್ಯೂಮರರಿ ಹುದ್ದೆಗೆ ಮೀಸಲಾತಿ ಅಡಿ ಲೆಕ್ಕ ಸಹಾಯಕ ಗ್ರೇಡ್ 1ಗೆ ನೇಮಕ ಮಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ.
ಜೊತೆಗೆ, ಅರ್ಜಿದಾರರನ್ನು ಸಾಮಾನ್ಯ ವರ್ಗಕ್ಕೆ ತಳ್ಳಿರುವ ಮೂಲಕ ಕರ್ನಾಟಕ ಹಾಲು ಮಹಾ ಮಂಡಳಿ ತಪ್ಪು ಮಾಡಿದೆ. ಸಣ್ಣ ಸೂಚನೆಯಲ್ಲಿ ಸರಿಪಡಿಸಿ ನೈಸರ್ಗಿಕ ನ್ಯಾಯ ಒದಗಿಸಬಹುದಾಗಿತ್ತು. ಆ ಕ್ರಮಕ್ಕೆ ಮುಂದಾಗದಿರುವುದಕ್ಕೆ ಸಕಾರಣ ನೀಡಿಲ್ಲ. ಈ ಬೆಳವಣಿಗೆ ಅರ್ಜಿದಾರರ ಪರ ವಕೀಲರ ವಾದಿಸಿರುವಂತೆ ಅನ್ಯಾಯದ ಪರಮಾವಧಿಯಾಗಿದೆ ಎಂದು ಪೀಠ ತಿಳಿಸಿದೆ. ಅಲ್ಲದೇ, ಜಾತಿ ಪ್ರಮಾಣ ಪತ್ರ ನಕಲಿ ಇದ್ದಲ್ಲಿ ಸ್ವೀಕಾರಾರ್ಹವಲ್ಲ ಎಂಬುದಾಗಿ ಕೆಎಂಎಫ್ ವಾದಿಸುತ್ತಿಲ್ಲ. ಆದರೆ, ವೆಬ್‌ಸೈಟ್‌ಗೆ ಅಪ್ಲೋಡ್ ಮಾಡುವ ಸಂದರ್ಭದಲ್ಲಿ ಸ್ಪಷ್ಟವಾಗಿಲ್ಲ ಎಂಬುದಾಗಿದೆ. ಮೇಲ್ಮನವಿದಾರರಿಗೆ ಸ್ಪಷ್ಟವಾದ ಜಾತಿ ಪ್ರಮಾಣಪತ್ರ ಸಲ್ಲಿಸಲು ಸೂಚನೆ ನೀಡಿದ್ದರೆ ಆಕಾಶವೇನು ಕೆಳಗೆ ಬೀಳುತ್ತಿರಲಿಲ್ಲ ಎಂದಿದೆ.
ನೇಮಕಾತಿ ಅಧಿಸೂಚನೆಯಲ್ಲಿ ಸಂವಿಧಾನದ 15ನೇ ವಿಧಿಯ ಭಾಗವಾಗಿ ನೈಸರ್ಗಿಕ ನ್ಯಾಯತತ್ವಗಳನ್ನು ಹೊರತುಪಡಿಸಿ ಅರ್ಥೈಸುವುದಕ್ಕೆ ಸಾಧ್ಯವಿಲ್ಲ. ಜೊತೆಗೆ, ಶಾಸನಬದ್ಧವಾಗಿ ರಚನೆಯಾಗಿರುವ ಸಂಸ್ಥೆಗಳಲ್ಲಿಯೂ ನೈಸರ್ಗಿಕ ನ್ಯಾಯದ ತತ್ವಗಳಡಿಯಲ್ಲಿ ಅರ್ಥೈಸುವಂತೆ ಕಾರ್ಯವಿಧಾನವನ್ನು ನಡೆಸಬೇಕು. ನೇಮಕಾತಿ ವಿಭಾಗವೂ ಪರಿಚ್ಛೇದ 12ರ ಅಡಿಯಲ್ಲಿ ಸ್ಥಾಪನೆಯಾಗಿರುವ ಸರ್ಕಾರದ ಸಂಸ್ಥೆಯಾಗಿದೆ. ಇದರಿಂದ ಸಮಸ್ಯೆಗೆ ಎದುರಾದವರು ಸಂವಿಧಾನದ ಪರಿಚ್ಛೇದ 16ರ ಅಡಿ ಹೋರಾಟ ನಡೆಸುವುದು ಮೂಲಭೂತ ಹಕ್ಕಾಗಿದೆ ಎಂದು ಪೀಠ ತಿಳಿಸಿದೆ.