ಬೆಂಗಳೂರು: ಗ್ರಾಚ್ಯುಟಿ ಕಾಯಿದೆ ಪ್ರಕಾರ ಯಾವುದೇ ಸಂಸ್ಥೆಯಲ್ಲಿ ಕೆಲಸ ಮಾಡುವವರನ್ನು ಸಿಬ್ಬಂದಿ ಎಂಬುದಾಗಿ ಹೇಳಲಾಗಿದೆ. ಆದರಲ್ಲಿ ಗುತ್ತಿಗೆ ನೌಕರ, ಖಾಯಂ ನೌಕರ ಎಂಬುದಾಗಿ ಇಲ್ಲ ಎಂದು ತಿಳಿಸಿರುವ ಹೈಕೋರ್ಟ್, ಸೇವೆ ಕಾಯಂ ಆಗುವುದಕ್ಕೂ ಮುನ್ನ ದಿನದಿಂದ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದರೆ ಆ ಅವಧಿಗೂ ಸರ್ಕಾರ ಗ್ರಾಚ್ಯುಟಿ ಪಾವತಿಸಬೇಕು ಎಂದು ಆದೇಶಿಸಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ನಿವೃತ್ತ ಸರ್ಕಾರಿ ಶಾಲಾ ಶಿಕ್ಷಕ ಬಸವೇಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಗ್ರಾಚ್ಯುಟಿ ಪಾವತಿ ಸಂಬಂಧ ಗ್ರಾಚ್ಯುಟಿ ಪಾವತಿ ಕಾಯಿದೆ 1972 ಕಾಯಂ ಸರ್ಕಾರಿ ನೌಕರ ಮತ್ತು ಗುತ್ತಿಗೆ ನೌಕರರ ನಡುವೆ ಯಾವುದೇ ವ್ಯತ್ಯಾಸವನ್ನು ಮಾಡುವುದಿಲ್ಲ. ಹಾಗಾಗಿ 75 ವರ್ಷದ ನಿವೃತ್ತ ಸರ್ಕಾರಿ ನೌಕರರಾಗಿರುವ ಅರ್ಜಿದಾರರಿಗೆ ನಾಲ್ಕು ವಾರದಲ್ಲಿ ಬಾಕಿ ಇರುವ ಗ್ರಾಚ್ಯುಟಿ ಮೊತ್ತವನ್ನು ಪಾವತಿಸಬೇಕು. ಸುಪ್ರೀಂಕೋರ್ಟ್ ಹಲವು ಪ್ರಕರಣಗಳಲ್ಲಿ ಗ್ರಾಚ್ಯುಟಿ ಪಾವತಿ ಕಾಯ್ದೆಯ ನಿಯಮಗಳು ಸದಾ ನೇಮಕ ಮತ್ತು ಸೇವಾ ಷರತ್ತಿನ ನಿಯಮಗಳಿಗೆ ವ್ಯತಿರಿಕ್ತವಾಗಿರುತ್ತದೆ. ಆದ್ದರಿಂದ ಸರ್ಕಾರದ ಗ್ರಾಚ್ಯುಟಿ ಪಾವತಿ ಮಾಡಬೇಕಾಗುತ್ತದೆ ಎಂದು ನ್ಯಾಯಾಪೀಠ ತಿಳಿಸಿದೆ.
ಅರ್ಜಿದಾರರಿಗೆ 50 ಸಾವಿರ ರೂ. ವ್ಯಾಜ್ಯ ವೆಚ್ಚ ಸೇರಿದಂತೆ ಒಟ್ಟು 2.44 ಲಕ್ಷ ರೂ. ಗ್ರಾಚ್ಯುಟಿಯನ್ನು ನಾಲ್ಕು ವಾರಗಳಲ್ಲಿ ಪಾವತಿಮಾಡಬೇಕು. ಒಂದು ವೇಳೆ ವಿಳಂಬವಾದಲ್ಲಿ ಪ್ರತಿ ದಿನಕ್ಕೆ ಒಂದು ಸಾವಿರ ರೂ.ಗಳನ್ನು ಹೆಚ್ಚುವರಿಯಾಗಿ ಪಾವತಿಸಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಿ ಅರ್ಜಿ ಇತ್ಯರ್ಥಪಡಿಸಿ ಆದೇಶಿಸಿದೆ.