ಬೆಂಗಳೂರು :ಪರಿಹಾರ ಪ್ರಕಟಿಸುವ ಪ್ರಕರಣಗಳಲ್ಲಿ ಘಟನೆ ನ್ಯಾಯಾಲಯದ ಮೆಟ್ಟಿಲೇರಿದ ದಿನದಿಂದ ನ್ಯಾಯಾಂಗ ಹೋರಾಟ ಅಂತ್ಯಗೊಳ್ಳುವವರೆಗೂ ಮೂಲ ಪರಿಹಾರ ಮೊತ್ತಕ್ಕೆ ಬಡ್ಡಿ ಸೇರಿಸಿ ಕೊಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಕಲಬುರಗಿ ನ್ಯಾಯಪೀಠ ಈ ಆದೇಶ ಮಾಡಿದೆ.
ಅಲ್ಲದೆ, ಪರಿಹಾರ ನೀಡುವ ಪ್ರಕರಣಗಳಲ್ಲಿ ಯಾವುದೇ ನ್ಯಾಯಾಲಯ ತೀರ್ಪು ನೀಡುವ ಸಂದರ್ಭದಲ್ಲಿ ಪರಿಹಾರ ಮೊತ್ತ ಸ್ವೀಕರಿಸುವವರೆಗೂ ಅಸಲು ಮೊತ್ತಕ್ಕೆ ಬಡ್ಡಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಜೊತೆಗೆ, ಪ್ರಕರಣದ ಮೇಲ್ಮನವಿ ವಿಚಾರಣಾ ಹಂತದಲ್ಲಿರುವ ಸಂದರ್ಭದಲ್ಲಿ ಠೇವಣಿ ಇಡಬೇಕಾಗುತ್ತದೆ. ಮೇಲ್ಮನವಿ ವಿಚಾರಣೆ ನಡೆಸುವ ನ್ಯಾಯಾಲಯವು ತಡೆ ನೀಡಿರುವ ಸಂದರ್ಭದಲ್ಲಿ ಪರಿಹಾರದ ಮೊತ್ತ ಸಂತ್ರಸ್ತರಿಗೆ ಸೇರಿರುವುದಿಲ್ಲ.
ಹೀಗಾಗಿ ಆ ಹಣವನ್ನು ಅವರು ಬಳಕೆ ಮಾಡಿಕೊಳ್ಳುವುದರಿಂದ ವಂಚಿತರಾಗಿರುತ್ತಾರೆ. ಆದ ಕಾರಣ ವಿಮಾ ಕಂಪನಿ ಪರಿಹಾರ ನೀಡಬೇಕಾದ ಮೊತ್ತದ ಮೇಲಿನ ಬಡ್ಡಿಯ ನಿರಂತರ ಸಂಗ್ರಹಣೆ ಮಾಡುವ ಹೊಣೆ ತೆಗೆದುಕೊಂಡಿರುತ್ತಾರೆ. ಹೀಗಾಗಿ ನಿಜವಾಗಿಯೂ ಪರಿಹಾರ ಮೊತ್ತ ಸಂತ್ರಸ್ತರ ಸೇರುವವರೆಗೂ ಬಡ್ಡಿ ಹೆಚ್ಚಳವಾಗುವುದು ಮುಂದುವರೆಯುತ್ತಿರುತ್ತದೆ. ಅಲ್ಲದೇ, ಠೇವಣಿ ಇಟ್ಟ ಮೊತ್ತ ಮಾತ್ರ ನೀಡಿದಲ್ಲಿ ಪರಿಹಾರ ಸಾಕಾಗುವುದಿಲ್ಲ ಎಂದು ನ್ಯಾಯಪೀಠ ಆದೇಶಿಸಿದೆ.
ಅಲ್ಲದೇ, ಠೇವಣಿ ಮಾಡಿದ ದಿನಾಂಕಕ್ಕೆ ಬಡ್ಡಿ ಹೆಚ್ಚಳವಾಗುವುದು ಸ್ಥಗಿತಗೊಳ್ಳಲಿದೆ ಎಂಬ ಅರ್ಜಿದಾರರ ವಾದವನ್ನು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ನ್ಯಾಯಾಂಗ ಹೋರಾಟ ಮುಗಿಯುವರೆಗೂ ಬಡ್ಡಿ ಪಾವತಿಸಬೇಕಾಗುತ್ತದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಸ್ತುತ ಪ್ರಕರಣದಲ್ಲಿ ಸಂತ್ರಸ್ತರಾಗಿರುವ ನಾಗರಾಜು ಅವರಿಗೆ 4,02,416 ರೂ.ಗಳನ್ನು ಬಡ್ಡಿಯೊಂದಿಗೆ ಪಾವತಿಸಲು ವಿಚಾರಣಾ ನ್ಯಾಯಾಲಯ ಆದೇಶಿಸಿದೆ. ಆದರೆ, ಈ ಆದೇಶವನ್ನು ಪ್ರಶ್ನಿಸಿ ವಿಮಾ ಕಂಪನಿ ಮೇಲ್ಮನವಿ ಸಲ್ಲಿಸಿದ್ದು, ಹಣ ಪಾವತಿ ಮಾಡುವಂತೆ ನೀಡಿದ್ದ ಆದೇಶಕ್ಕೆ ತಡೆ ನೀಡುವಂತೆ ಕೋರಿದೆ. ಈ ಕಾರಣದಿಂದ ಸಂತ್ರಸ್ತರಿಗೆ ಹಣ ಪಾವತಿ ಮಾಡಲಾಗಿಲ್ಲ. ಜೊತೆಗೆ, ವಿಮಾ ಕಂಪನಿ ಹಣವನ್ನು ಬಿಡುಗಡೆ ಮಾಡದಂತೆ ವರ್ಕ್ಮೆನ್ ಕಮಿಷನರ್‌ಗೆ ಪತ್ರವನ್ನೂ ಬರೆದಿದೆ. ಹೀಗಾಗಿ ಹಣ ಬಿಡುಗಡೆ ಮಾಡುವವರೆಗೂ ಬಡ್ಡಿಯನ್ನು ಸೇರಿಸಿ ಕೋಡಬೇಕಾಗಿದೆ. ಆದ್ದರಿಂದ ಒಟ್ಟು ಮೊತ್ತಕ್ಕೆ 3,37,015 ರೂ. ಮೊತ್ತವನ್ನು ಬಿಡುಗಡೆ ಮಾಡಬೇಕು ಎಂದು ವಿಚಾರಣಾ ನ್ಯಾಯಾಲಯ ಆದೇಶಿಸಿದೆ. ಈ ಆದೇಶದಲ್ಲಿ ಯಾವುದೇ ಕಾನೂನು ಉಲ್ಲಂಘನೆ ಆಗಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.