ಕರ್ನಾಟಕ

karnataka

ETV Bharat / state

ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಗಳು ರದ್ದಾದ ತಮ್ಮ ವಿರುದ್ಧದ ಪ್ರಕರಣಗಳ ಮಾಹಿತಿಯನ್ನೂ ಒದಗಿಸಬೇಕು: ಹೈಕೋರ್ಟ್ - ಹೈಕೋರ್ಟ್

ಚುನಾವಣೆಗೆ ನಾಮಪತ್ರದೊಂದಿಗೆ ಪ್ರಮಾಣಪತ್ರ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಅಭ್ಯರ್ಥಿಗಳು ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳಲ್ಲಿ ಖುಲಾಸೆಯಾಗಿರುವ ಮಾಹಿತಿಯನ್ನೂ ಒದಗಿಸಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ.

karnataka-high-court-order-about-providing-criminal-cases-information-in-nomination
'ಎಲೆಕ್ಷನ್​ಗೆ ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಗಳು ತಮ್ಮ ವಿರುದ್ಧ ರದ್ದಾದ ಪ್ರಕರಣಗಳ ಮಾಹಿತಿಯನ್ನೂ ಒದಗಿಸಬೇಕು'

By ETV Bharat Karnataka Team

Published : Jan 17, 2024, 5:22 PM IST

Updated : Jan 17, 2024, 6:43 PM IST

ಬೆಂಗಳೂರು: ಚುನಾವಣೆಗೆ ನಾಮಪತ್ರದೊಂದಿಗೆ ಪ್ರಮಾಣಪತ್ರ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಅಭ್ಯರ್ಥಿಯ ವಿರುದ್ಧದ ಕ್ರಿಮಿನಲ್ ಪ್ರಕರಣಗಳಲ್ಲಿ ಖುಲಾಸೆಯಾಗಿದ್ದಲ್ಲಿ, ಅಂತಹ ರದ್ದಾದ ಪ್ರಕರಣಗಳ ಮಾಹಿತಿ ಒದಗಿಸಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ. ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ಮಾಹಿತಿ ಮುಚ್ಚಿಟ್ಟಿದ್ದಕ್ಕಾಗಿ ತಮ್ಮ ಸದಸ್ಯತ್ವ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಬಾಗಲಕೋಟೆ ಜಿಲ್ಲೆಯ ಬೇವೂರು ಗ್ರಾಮ ಪಂಚಾಯತ್ ಸದಸ್ಯ ಮುದಿಯಪ್ಪ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಧಾರವಾಡದ ನ್ಯಾಯಪೀಠ ಈ ಆದೇಶ ಮಾಡಿದೆ.

ಡೆಮಾಕ್ರಟಿಕ್ ಯೂನಿಯನ್ ಆಫ್ ಇಂಡಿಯಾ ವರ್ಸಸ್ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತಿತರರು ಈ ಪ್ರಕರಣದಲ್ಲಿ, ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪ್ರಮಾಣಪತ್ರದಲ್ಲಿ ಎಲ್ಲ ಕ್ರಿಮಿನಲ್ ಪ್ರಕರಣಗಳ, ಅಂದರೆ ರದ್ದಾದ, ಬಿಡುಗಡೆ ಅಥವಾ ಖುಲಾಸೆಯಾದ ಪ್ರಕರಣಗಳ ಮಾಹಿತಿ ಒದಗಿಸುವುದು ಕಡ್ಡಾಯ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಸುಪ್ರೀಂಕೋರ್ಟ್ ಆದೇಶದಂತೆ ಅಭ್ಯರ್ಥಿಗಳು ಬಾಕಿ ಇರುವ ಕ್ರಿಮಿನಲ್ ಕೇಸುಗಳ ವಿವರ ಸಲ್ಲಿಸಿದರೆ ಸಾಲದು. ಅದರ ಜತೆ ಖುಲಾಸೆ ಅಥವಾ ರದ್ದಾದ ಪ್ರಕರಣಗಳ ಮಾಹಿತಿ ನೀಡಬೇಕು. ಆಗ ಮತದಾರರು ಯಾವ ಅಭ್ಯರ್ಥಿ ಚುನಾವಣಾ ಕಣದಲ್ಲಿದ್ದಾರೆ, ಅವರ ಹಿನ್ನೆಲೆ ಏನು ಎಂಬುದನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.

ಚುನಾಯಿತ ಅಭ್ಯರ್ಥಿಗಳ ಅನರ್ಹತೆಗೆ ಶಿಕ್ಷೆ ಅಥವಾ ಆರೋಪಿ ಎಂಬುದು ಸಾಬೀತಾಗಿರುವುದು ಅತ್ಯಗತ್ಯವಾಗಿದರೂ ಸಹ ನಾಮಪತ್ರದ ನಮೂನೆಯಲ್ಲಿ ಮಾಹಿತಿ ಬಹಿರಂಗಪಡಿಸುವಾಗ ಕೇವಲ ಶಿಕ್ಷೆ ಆಗಿರುವುದು ಅಥವಾ ಬಾಕಿ ಇರುವುದು ಅಥವಾ ಖುಲಾಸೆಗೊಂಡಿರುವುದು ಎಂದು ಪ್ರತ್ಯೇಕಿಸಲಾಗದು. ಎಲ್ಲಾ ಮಾಹಿತಿಯನ್ನು ಒದಗಿಸಲೇಬೇಕು ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ. ಒಂದು ವೇಳೆ ನಾಮಪತ್ರ ಸಲ್ಲಿಕೆ ಅರ್ಜಿ ನಮೂನೆಯಲ್ಲಿ ನಿರ್ದಿಷ್ಟ ಕಾಲಂ ಇಲ್ಲವಾದರೆ ಅಂತಹ ಸಂದರ್ಭಗಳಲ್ಲಿ ಅಭ್ಯರ್ಥಿಗಳು ಹೆಚ್ಚುವರಿಯಾಗಿ ಲಭ್ಯವಿರುವ ಸ್ಥಳಾವಕಾಶ ಬಳಸಿಕೊಳ್ಳಬೇಕು, ಇಲ್ಲವೇ ಅಪರಾಧ ಸಂಖ್ಯೆ, ಆರೋಪ, ಸಹ ಆರೋಪಿಗಳು, ದೂರುದಾರರು, ಪ್ರಕರಣ ಯಾವ ಹಂತದಲ್ಲಿದೆ, ಯಾವ ರೀತಿ ಅದು ವಿಲೇವಾರಿ ಆಗಿದೆ, ವಿಲೇವಾರಿ ಆದ ದಿನಾಂಕ, ಒಂದು ವೇಳೆ ರದ್ದಾಗಿದ್ದರೆ ಅಥವಾ ಖುಲಾಸೆಯಾಗಿದ್ದರೆ ಅದರ ವಿವರಗಳನ್ನೂ ಸಹ ಒದಗಿಸಲೇಬೇಕು ಎಂದು ನ್ಯಾಯಪೀಠ ಹೇಳಿದೆ.

ಮತದಾರರಿಗೆ ಸಂಪೂರ್ಣ ಮಾಹಿತಿ ನೀಡದೆ ಹೋದರೆ ಚುನಾವಣೆಯ ಪರಿಕಲ್ಪನೆಗೆ ವಸ್ತುಶಃ ಘಾಸಿಯಾಗುತ್ತದೆ. ಅದನ್ನು ಸಂಕುಚಿತ ಮನೋಭಾವದಿಂದ ನೋಡಬಾರದು. ಪ್ರತಿಯೊಬ್ಬ ಅಭ್ಯರ್ಥಿಯ ಸಮಗ್ರ ಮಾಹಿತಿ ಮತದಾರನಿಗೆ ದೊರೆತಾಗ ಮಾತ್ರ ಆತ ಎಲ್ಲ ಅಭ್ಯರ್ಥಿಗಳನ್ನು ಆಳೆದು ತೂಗಿ ತನ್ನ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯ. ಕೆಲವು ಮಾಹಿತಿಯನ್ನು ಅಭ್ಯರ್ಥಿಗಳು ಮುಚ್ಟಿಟ್ಟರೆ ಅದು ಮಾಹಿತಿ ಮರೆಮಾಚಿದಂತಾಗುತ್ತದೆ. ಹಾಗಾಗಿ ಅಭ್ಯರ್ಥಿಗಳು ಖುಲಾಸೆಯಾದ ವಿವರಗಳನ್ನು ನೀಡಬೇಕು. ಆನಂತರ ಮತದಾರರು ಯಾವುದು ಸತ್ಯ ಎಂಬುದನ್ನು ತೀರ್ಮಾನಿಸುತ್ತಾರೆ ಎಂದು ನ್ಯಾಯಾಲಯ ತಿಳಿಸಿದೆ. ಖುಲಾಸೆಗೊಂಡಿರುವ ಪ್ರಕರಣದ ವಿವರ ನೀಡದ್ದಕ್ಕಾಗಿ ತಮ್ಮ ಆಯ್ಕೆ ಅನರ್ಹಗೊಳಿಸಿರುವುದು ಕಾನೂನು ಬಾಹಿರವೆಂಬ ಅರ್ಜಿದಾರರ ವಾದವನ್ನು ನ್ಯಾಯಪೀಠ ಇದೇ ವೇಳೆ ತಳ್ಳಿಹಾಕಿದೆ.

ಇದನ್ನೂ ಓದಿ:ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ: ತಿಂಗಳಾಂತ್ಯಕ್ಕೆ ಅಂತಿಮ ವರದಿ ಸಲ್ಲಿಕೆ

Last Updated : Jan 17, 2024, 6:43 PM IST

ABOUT THE AUTHOR

...view details