ಬೆಂಗಳೂರು:ರಾಜ್ಯದಲ್ಲಿ ಬಂದ್, ಮುಷ್ಕರದ ವೇಳೆ ಆಗುವ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟಕ್ಕೆ ಸಂಬಂಧಿಸಿದಂತೆ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳು ಮತ್ತು ಕನ್ನಡ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸೇರಿದಂತೆ ಹದಿನೆಂಟು ಸಂಘಟನೆಗಳಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಸಂಬಂಧ ರಾಜಾಜಿನಗರದ ಶ್ರದ್ಧಾ ಪೋಷಕರ ಸಂಘ ಹಾಗೂ ನಾಗರಾಜ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಅಮೃತೇಶ್, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ನಡೆಸಿದ ಪ್ರತಿಭಟನೆ. ಕಳೆದ ವರ್ಷ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ನಡೆಸಿದ ಬಂದ್ ಸೇರಿದಂತೆ ಹಲವಾರು ವಿಚಾರಗಳಿಗೆ ರಾಜಕಾರಣಿಗಳು, ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಸಾರ್ವಜನಿಕ ಆಸ್ತಿ ಪಾಸ್ತಿ, ಕೆಎಸ್ಆರ್ಟಿಸಿ ಬಸ್‌ಗಳಿಗೆ ಬೆಂಕಿ ಹಚ್ಚಿ ಕೋಟ್ಯಂತರ ರೂ. ನಷ್ಟ ಮಾಡುತ್ತಾರೆ. ಪೊಲೀಸರು ರಾಜಕೀಯ ಮುಖಂಡರ ಮೇಲೆ ಯಾವುದೇ ದೂರು ದಾಖಲಿಸದೇ ಅಮಾಯಕರ ಮೇಲೆ ದೂರು ದಾಖಲು ಮಾಡುತ್ತಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಲಯ ಬಿಜೆಪಿ, ಜೆಡಿಎಸ್ ಕಾಂಗ್ರೆಸ್ ಪಕ್ಷಗಳು ಮತ್ತು ಕನ್ನಡ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸೇರಿ ಹದಿನೆಂಟು ಸಂಘಟನೆಗಳಿಗೆ ನೋಟಿಸ್ ಜಾರಿ ಮಾಡಿ ಒಂದು ತಿಂಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿದೆ.