ಬೆಂಗಳೂರು :ಇಂತಹದ್ದೇ ರಾಗದಲ್ಲಿ ನಾಡಗೀತೆ ಹಾಡಬೇಕು ಎಂದು ಸರ್ಕಾರ ಆದೇಶ ಹೊರಡಿಸುವಾಗ ಅದಕ್ಕಿರುವ ಶಾಸನಾತ್ಮಕ ಅಧಿಕಾರಗಳೇನು? ಮತ್ತು ಯಾರು?, ಯಾವಾಗ? ಎಂತಹ ಸಂದರ್ಭಗಳಲ್ಲಿ ನಿಮ್ಮ ಈ ನಿರ್ಬಂಧ ಪಾಲಿಸಬೇಕು ಎಂಬುದನ್ನು ನ್ಯಾಯಪೀಠಕ್ಕೆ ವಿವರಿಸಲು ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.
ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿಯೇ ನಾಡಗೀತೆಯನ್ನು 2 ನಿಮಿಷ 30 ಸೆಕೆಂಡ್‌ಗಳಲ್ಲಿ ಹಾಡಬೇಕು ಎಂಬುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ 2022ರ ಸೆಪ್ಟೆಂಬರ್ 25 ರಂದು ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಸುಗಮ ಸಂಗೀತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೂಚನೆ ನೀಡಿ, ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ, ಅರ್ಜಿದಾರ ಕಿಕ್ಕೇರಿ ಕೃಷ್ಣಮೂರ್ತಿ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ, ‘ಜನಸಾಮಾನ್ಯರು ಇಂಥದೇ ರಾಗದಲ್ಲಿ ಹಾಡಬೇಕು ಎಂಬ ಷರತ್ತು ಸರಿಯಲ್ಲ. ರಾಜ್ಯ ಸರ್ಕಾರ ನಮ್ಮ ಸಂಗೀತದ ಸ್ವಾತಂತ್ರ್ಯ ಕಸಿದುಕೊಂಡಿದೆ. ಹಾಗಾಗಿ, ಸರ್ಕಾರ ಇದರ ಔಚಿತ್ಯವನ್ನು ಮನವರಿಕೆ ಮಾಡಿಕೊಡಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎಸ್.ಎ. ಅಹ್ಮದ್, "ಸರ್ಕಾರದ ಈ ಆದೇಶವನ್ನು ಸಂವಿಧಾನದ 162ನೇ ವಿಧಿಯಡಿ ತನಗಿರುವ ಪರಮಾಧಿಕಾರವನ್ನು ಬಳಸಿ ಇಂತಹದೇ ರಾಗದಲ್ಲಿ ಹಾಡುವಂತೆ ನಿರ್ಬಂಧ ವಿಧಿಸಿದೆ. ಇದನ್ನು ಸರ್ಕಾರದ ಅಧಿಕೃತ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಸಮಾರಂಭಗಳಲ್ಲಿ ಮೈಸೂರು ಅನಂತಸ್ವಾಮಿ ಸಂಯೋಜಿಸದ ಧಾಟಿಯಲ್ಲೇ ಹಾಡುವಂತೆ ಆದೇಶಿಸಲಾಗಿದೆ" ಎಂದು ಸಮರ್ಥಿಸಿಕೊಂಡರು.