ಬೆಂಗಳೂರು : ವಿದ್ಯುತ್ ಸ್ಪರ್ಶದಿಂದ ರಾಜ್ಯದಲ್ಲಿ ವನ್ಯಜೀವಿಗಳು ಹಾಗೂ ಮಾನವರು ಮೃತಪಡುವುದನ್ನು ತಪ್ಪಿಸಲು ಸೂಕ್ತ ಮಾರ್ಗಸೂಚಿ ರಚನೆ ಮಾಡಲು ಉನ್ನತ ಮಟ್ಟದ ಸಮಿತಿ ರಚಿಸುವ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ವಕೀಲ ಅಂಕುಶ್ ಎಣ್ಣೆಮಜಲು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡಿಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆಯ ಮುಖ್ಯ ಕಾರ್ಯದರ್ಶಿ, ಅರಣ್ಯ ಮತ್ತು ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿದೆ.
ಪ್ರಕರಣದ ಹಿನ್ನಲೆ:ಶಿವಮೊಗ್ಗ ತಾಲೂಕಿನ ಚೆನ್ನಹಳ್ಳಿಯಲ್ಲಿ ರೈತರೊಬ್ಬರು ತಮ್ಮ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆಯ ರಕ್ಷಣೆಗಾಗಿ ಜಮೀನು ಸುತ್ತಾ ತಂತಿ ಅಳವಡಿಸಿ, ಅದಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ನೀಡಿದ್ದರು. ಭದ್ರಾ ಸಂರಕ್ಷಿತ ಅರಣ್ಯ ಪ್ರದೇಶದಿಂದ ಏಳು ಆನೆಗಳು ಆಹಾರ ಅರಸಿ ಬಂದಿದ್ದವು. ಅದರಲ್ಲಿ ಎರಡು ಗಂಡು ಆನೆಗಳು ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದವು. ಈ ಕುರಿತ 2022ರ ಸೆ.26ರಂದು ಮಾಧ್ಯಮದಲ್ಲಿ ವರದಿ ಪ್ರಕಟಗೊಂಡಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಈ ಮಾದರಿಯ ಪ್ರಕರಣಗಳು ರಾಜ್ಯದಲ್ಲಿ ಪದೇ ಪದೆ ಸಂಭವಿಸುತ್ತಿವೆ. ಕರ್ನಾಟಕದಲ್ಲಿ ಅದರಲ್ಲೂ ಚಾಮರಾಜನಗರದಲ್ಲಿ 26 ಆನೆಗಳು ಈ ರೀತಿ ಸಾವನ್ನಪ್ಪಿವೆ. ಮೈಸೂರಿನಲ್ಲಿ 12, ಕೊಡಗಿನಲ್ಲಿ 10, ಬೆಂಗಳೂರಿನಲ್ಲಿ 7, ಹಾಸನದಲ್ಲಿ 4 ಮತ್ತು ಚಿಕ್ಕಮಗಳೂರಿನಲ್ಲಿ 1 ಆನೆ ಈ ರೀತಿಯಲ್ಲಿ ಸಾವನ್ನಪ್ಪಿವೆ.