ಬೆಂಗಳೂರು:ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧ ಪ್ರಶ್ನಿಸಿ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಸಲ್ಲಿಸಿರುವ ಅರ್ಜಿಗಳನ್ನು 5ನೇ ದಿನವೂ ಹೈಕೋರ್ಟ್ ವಿಚಾರಣೆ ನಡೆಸಿತು. ಈ ಕುರಿತಂತೆ ಸಲ್ಲಿಕೆಯಾಗಿರುವ 8 ರಿಟ್ ಅರ್ಜಿಗಳು ಹಾಗೂ 20ಕ್ಕೂ ಹೆಚ್ಚು ಮಧ್ಯಂತರ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಖಾಜಿಜೈಬುನ್ನೀಸಾ ಮೊಹಿಯುದ್ದೀನ್ ಅವರಿರುವ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು.
5ನೇ ದಿನವೂ ಅರ್ಜಿದಾರರ ಪರ ವಕೀಲರೇ ವಾದ ಮಂಡಿಸಿದರು. ಸರ್ಕಾರದ ಪರ ವಕೀಲರು ನಾಳೆ ವಾದ ಮಂಡಿಸುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಪೀಠ ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿತು.
ನಿಯಾಮಾನುಸಾರ ಇಲ್ಲದ ಎರಡು ಅರ್ಜಿಗಳು ವಜಾ:ಹಿಜಾಬ್ ನಿರ್ಬಂಧ ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಆರಿಫ್ ಜಮೀಲ್ ಎಂಬುವರು ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ರಹಮತ್ ಉಲ್ಲಾ ಕೊತ್ವಾಲ್ ಧಾರ್ಮಿಕ ಆಚರಣೆಗಳ ಕುರಿತಂತೆ ಅಂತಾರ್ರಾಷ್ಟ್ರೀಯ ಒಡಂಬಡಿಕೆಗಳನ್ನು ಉಲ್ಲೇಖಿಸಲು ಆರಂಭಿಸಿದರು. ಈ ವೇಳೆ ಪೀಠ, ಅರ್ಜಿದಾರರಿಗೆ ಪ್ರಕರಣದಲ್ಲಿ ಖಾಸಗಿ ಹಿತಾಸಕ್ತಿ ಇಲ್ಲ ಎಂಬುದನ್ನು ಪ್ರಸ್ತುತಪಡಿಸುವಂತೆ ಸೂಚಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲ ಕೊತ್ವಾಲ್, ಅರ್ಜಿದಾರರು ಓರ್ವ ಸಾಮಾಜಿಕ ಹಾಗೂ ಐರ್ಟಿಐ ಕಾರ್ಯಕರ್ತ. ಕೋವಿಡ್ ಸೇರಿದಂತೆ ಹಲವು ವಿಚಾರಗಳಲ್ಲಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿಯೂ ಸಾರ್ವಜನಿಕ ಹಿತಾಸಕ್ತಿ ಇದೆ. ಆದ್ದರಿಂದ ತಮ್ಮ ವಾದವನ್ನು ಆಲಿಸಬೇಕು ಎಂದು ಕೋರಿದರು. ಇದಕ್ಕೆ ಸಮ್ಮತಿಸದ ಪೀಠ, ಪಿಐಎಲ್ ಅರ್ಜಿಯನ್ನು ನಿಯಾಮಾನುಸಾರ ಸಲ್ಲಿಸಿಲ್ಲ ಎಂದು ತಿಳಿಸಿ, ವಜಾಗೊಳಿಸಿತು.
ಇದನ್ನೂ ಓದಿ:ಬಿಜೆಪಿಯ ನಕಲಿ ರಾಷ್ಟ್ರೀಯತೆ, ಒಡೆದು ಆಳುವ ನೀತಿಯಿಂದ ಸಮಾಜ ವಿಘಟನೆ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಾಗ್ದಾಳಿ
ಇದೇ ವೇಳೆ, ಅರ್ಜಿದಾರರ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಇಲ್ಲದೇ ಸಲ್ಲಿಸಿದ್ದ ಮತ್ತೊಂದು ರಿಟ್ ಅರ್ಜಿಯನ್ನು ಕೂಡ ಪೀಠ ವಜಾಗೊಳಿಸಿತು. ಅರ್ಜಿಯಲ್ಲಿ ಯಾವ ವಿದ್ಯಾರ್ಥಿನಿಗೆ ಸಮಸ್ಯೆಯಾಗಿದೆ. ಅವರು ಯಾವ ಕಾಲೇಜಿಗೆ ಹೋಗುತ್ತಿದ್ದಾರೆ. ಎಲ್ಲಿ ಅವರನ್ನು ತಡೆಯಲಾಗಿದೆ ಎಂಬ ಯಾವುದೇ ನಿಖರ ಮಾಹಿತಿ ನೀಡಿಲ್ಲ. ಹೀಗಾಗಿ ಅರ್ಜಿದಾರರು ಸೂಕ್ತ ರೀತಿಯಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಸ್ವತಂತ್ರರು ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು.
ಹಿಜಾಬ್ ಧರಿಸಲು ಮಧ್ಯಂತರ ಆದೇಶ ಕೋರಿಕೆ:ಪ್ರಕರಣದಲ್ಲಿ ಪಿಐಎಲ್ ಅರ್ಜಿ ಸಲ್ಲಿಸಿರುವ ವಕೀಲ ಡಾ. ವಿನೋದ್ ಕುಲಕರ್ಣಿ ಹಿಜಾಬ್ ನಿರ್ಬಂಧದಿಂದ ವಿದ್ಯಾರ್ಥಿನಿಯರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹಿಜಾಬ್ ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿಯಾಗಿಲ್ಲ. ಆದ್ದರಿಂದ ಶುಕ್ರವಾರದಂದು ಹಿಜಾಬ್ ಧರಿಸಲು ಅವಕಾಶ ನೀಡಿ ಮಧ್ಯಂತರ ಆದೇಶ ಹೊರಡಿಸಬೇಕು. ಹಿಜಾಬ್ ನಿರ್ಬಂಧಿಸುವುದು ಕುರಾನ್ ನಿರ್ಬಂಧಿಸಿದಂತೆ ಎಂದು ವಾದಿಸಿದರು. ಇದೇ ವೇಳೆ, ತಮ್ಮ ವಾದಕ್ಕೆ ಪೂರಕವಾಗಿ ಹಾಡಿನ ಸಾಲನ್ನೂ ಸೇರಿಸಿದರು.
ನಾಳೆ ಸರ್ಕಾರದ ವಾದ:ಅರ್ಜಿದಾರರ ಪರ ವಕೀಲರ ವಾದ ಮುಕ್ತಾಯವಾದ ಬಳಿಕ ಸರ್ಕಾರದ ಪರ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಗಳ ಪರ ವಕೀಲರು ವಾದ ಮಂಡಿಸಬೇಕಿತ್ತು. ಆದರೆ, ಸರ್ಕಾರ ತನ್ನ ವಾದವನ್ನು ನಾಳೆ ಮಂಡಿಸುವುದಾಗಿ ತಿಳಿಸಿದ್ದರಿಂದ, ಸಿಡಿಸಿ ಪರ ವಕೀಲರು ಸರ್ಕಾರದ ವಾದದ ಬಳಿಕವೇ ತಮ್ಮ ವಾದ ಮಂಡಿಸುವುದಾಗಿ ತಿಳಿಸಿದರು.
ಈ ಹಿನ್ನೆಲೆಯಲ್ಲಿ ಪೀಠ ವಿಚಾರಣೆ ಮುಂದೂಡಿತು. ಈ ನಡುವೆ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದ ಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಅರ್ಜಿದಾರರ ಪರ ವಕೀಲರು ಹಾಗೂ ಪ್ರತಿವಾದಿಗಳಾದ ಸರ್ಕಾರ ಮತ್ತು ಸಿಡಿಸಿ ಪರ ವಕೀಲರ ವಾದ ಮುಗಿದ ನಂತರ ಮಧ್ಯಂತರ ಅರ್ಜಿದಾರರು ವಾದ ಮಂಡಿಸಿ ಎಂದು ಸೂಚಿಸಿತು.
ರಾಜಿ ಸಂಧಾನಕ್ಕೆ ಸಲಹೆ:ಕಲಾಪದ ಕೊನೆಯಲ್ಲಿ ಪ್ರಕರಣದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿರುವ ವಕೀಲೆಯೊಬ್ಬರು, ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಮಧ್ಯಸ್ಥಗಾರರಿಗೆ ವಹಿಸುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ ಮೊದಲು ಪಕ್ಷಗಾರರನ್ನು ಒಪ್ಪಿಸಿ ನಂತರ ಪೀಠಕ್ಕೆ ಮನವಿ ಮಾಡಿ. ನಂತರ ರಾಜಿ ಮೂಲಕ ಬಗೆಹರಿಯುತ್ತದೆಯೇ ಎಂಬುದನ್ನು ಪರಿಶೀಲಿಸೋಣ ಎಂದಿತು.