ಬೆಂಗಳೂರು: ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಲ್ಲಿಸಲಾದ ಬಿ ರಿಪೋರ್ಟ್‌ಗಳ ಬಗ್ಗೆ ಸಮರ್ಪಕ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಲಾಗಿಲ್ಲವೆಂದು ಹೈಕೋರ್ಟ್ ಎಸಿಬಿ ವಿರುದ್ದ ಮತ್ತೆ ಕಿಡಿಕಾರಿದೆ. ಎಸಿಬಿಯ ಬಿ ರಿಪೋರ್ಟ್ ಸಲ್ಲಿಕೆ ಬಗ್ಗೆ ಗುರುವಾರ ನಡೆದ ವಿಚಾರಣೆ ವೇಳೆ ನ್ಯಾ.ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯ ಪೀಠವು ಬಿ ರಿಪೋರ್ಟ್‌ಗಳ ಬಗೆಗಿನ ಮಾಹಿತಿಯನ್ನು ಸಮರ್ಪಕವಾಗಿ ನೀಡಲಾಗಿಲ್ಲ. ಸಹಿ ಮಾಡದೆ ಇರುವ ವರದಿ ಸಲ್ಲಿಸಿದ ಎಸಿಬಿಯ ಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ನ್ಯಾಯಾಲಯದ ಆದೇಶದಂತೆ ಎಸಿಬಿ ಪರ ವಕೀಲ ಮನಮೋಹನ್ ಅವರು 2016 ರಿಂದ 2019 ರವರೆಗಿನ ಬಿ ರಿಪೋರ್ಟ್ ಗಳ ಮಾಹಿತಿ ಸಲ್ಲಿಸಿದರು. ಇವುಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳು ಈ ಕಡತಗಳು ಸರಿಯಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳ ಸಹಿಯೇ ಇಲ್ಲವೆಂದು ಆಕ್ರೋಶದಿಂದ ನುಡಿದರು.
ಬಿ ರಿಪೋರ್ಟ್‌ಗಳ ಬಗೆಗಿನ ವರದಿ ಸಂಪೂರ್ಣವಾಗಿ ಸತ್ಯದಿಂದ ಕೂಡಿಲ್ಲ. ನೀವು ಈತರಹ ಆಟ ಆಡುತ್ತೀರೆಂದು ತಿಳಿದೇ ಕೆಲ ಮಾಹಿತಿ ಪಡೆದಿರುವೆ. ಈ ವರ್ಷ ಎಸಿಬಿ ಸಲ್ಲಿಸಿದ ಎಲ್ಲಾ ಬಿ ರಿಪೋರ್ಟ್‌ಗಳ ವಿವರ ಇದರಲ್ಲಿ ಇಲ್ಲ. ಮಾರ್ಚ್, ಜೂನ್ ತಿಂಗಳ ಬಿ ರಿಪೋರ್ಟ್ ಬಗ್ಗೆ ಮಾತ್ರ ಮಾಹಿತಿ ಒದಗಿಸಿದ್ದೀರಿ. ಎಸಿಬಿಯು 819 ಸರ್ಚ್ ವಾರೆಂಟ್‌ಗಳನ್ನು ಪಡೆದಿತ್ತು. 28 ಸರ್ಚ್ ವಾರೆಂಟ್ ಜಾರಿಗೊಳಿಸಲು ಸಾಧ್ಯವಾಗಿಲ್ಲ.