ಬೆಂಗಳೂರು:ನಗರದ ಹಡ್ಸ್‌ನ್ ವೃತ್ತದಲ್ಲಿರುವ ಕರ್ನಾಟಕ ಪ್ರದೇಶ ಕೃಷಿಕ್ ಸಮಾಜದ ಕಟ್ಟಡ (ಹಾಪ್ ಕಾಮ್ಸ್ ಕಟ್ಟಡ) ಕಬ್ಬನ್ ಉದ್ಯಾನವನದಲ್ಲಿದೆಯೇ ಎಂಬುದನ್ನು ಸರ್ವೇ ಮಾಡಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಪಾಕ್ಸ್ ಮತ್ತು ಗಾಡನ್ಸ್ ಕಾಯಿದೆಯಡಿಯಲ್ಲಿರುವ ಕಬ್ಬನ್ ಉದ್ಯಾನವನದಲ್ಲಿ ಯಾವುದೇ ಶಾಶ್ವತ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶವಿಲ್ಲ. ಆದರೂ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಕಬನ್ಬ್ ಉದ್ಯಾನವನದ ನಡಿಗೆದಾರರ ಸಂಘದ ಅಧ್ಯಕ್ಷ ಎಸ್.ಉಮೇಶ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಸರ್ವೇ ಮಾಡಿ ವರದಿ ನೀಡಿ:ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಆಶೋಕ್ ಎಸ್.ಕಿಣಗಿ ಅವರಿದ್ದ ನ್ಯಾಯಪೀಠ ಈ ಅರ್ಜಿ ವಿಚಾರಣೆ ನಡೆಸಿತು. ಹಡ್ಸನ್ ವೃತ್ತದಲ್ಲಿರುವ ಕರ್ನಾಟಕ ಪ್ರದೇಶ ಕೃಷಿಕ್ ಸಮಾಜದ ಕಟ್ಟಡ ಕಬ್ಬನ್ ಉದ್ಯಾನದಲ್ಲಿದಿಯೇ ಎಂಬುದನ್ನು ಪರಿಶೀಲನೆ ನಡೆಸುವುದಕ್ಕಾಗಿ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಹಾಗೂ ಭೂ ದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕರು ಜಂಟಿಯಾಗಿ ಫೆ.4 ರಂದು ಬೆಳಗ್ಗೆ 11 ಗಂಟೆಗೆ ಸರ್ವೇ ಕಾರ್ಯ ಮಾಡಬೇಕು. ಈ ಸಂದರ್ಭದಲ್ಲಿ ಪ್ರಕರಣದ ಪ್ರತಿವಾದಿಗಳಾದ ತೋಟಗಾರಿಕೆ ಇಲಾಖೆಯ ನಿರ್ದೇಶಕರು, ಜಂಟಿ ನಿರ್ದೇಶಕರು, ಉಪ ನಿರ್ದೇಶಕರು, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಅಧಿಕಾರಿಗಳು, ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿಗಳು, ಜಲ ಮಂಡಳಿ ಅಧಿಕಾರಿಗಳು ಸೇರಿದಂತೆ ಇತರರರ ಹಾಜರಿರುವಂತೆ ನೋಡಿ ಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ. ಅಲ್ಲದೇ, ಫೆ.4 ರಂದು ನಡೆಸಿದ ಸರ್ವೇ ಕಾರ್ಯಕ್ಕೆ ಸಂಬಂಧ ಪಡಿಸಿದಂತೆ ವರದಿಯನ್ನು ಫೆ. 8ರಂದು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಫೆ.10ಕ್ಕೆ ಮುಂದೂಡಿದೆ.