ಬೆಂಗಳೂರು: ನಗರದ ರಸ್ತೆಗಳು ಹಾಗೂ ಸಿಗ್ನಲ್‌ಗಳಲ್ಲಿ ಸಣ್ಣ ಪುಟ್ಟ ವಸ್ತುಗಳನ್ನು ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿರುವ ಮಕ್ಕಳಿಗೆ ಕೊರೊನಾ ಬಳಿಕ ಜಾರಿ ಮಾಡಿದ್ದ ಮೊಬೈಲ್ ಎಜುಕೇಶನ್ ಯೋಜನೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಕುರಿತ ಸಮಗ್ರ ವರದಿ ಸಲ್ಲಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.
ಬೀದಿಬದಿ ಮಕ್ಕಳಿಗೆ ಶಿಕ್ಷಣ ನೀಡುವ ಸಲುವಾಗಿ ಬೆಂಗಳೂರಿನ 'ಲೆಟ್ಜ್‌ಕಿಟ್ ಫೌಂಡೇಷನ್' ಅರ್ಜಿ ಸಲ್ಲಿಸಿತ್ತು. ಬುಧವಾರ ಮುಖ್ಯ ನ್ಯಾಯಮೂರ್ತಿ ಬಿ ಪಿ ಒರಲೆ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲರು ಹಾಜರಾಗಿ ವಿಚಾರಣೆಗೆ ದಿನಾಂಕ ನಿಗದಿ ಮಾಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ:ರಾಜಧಾನಿ ರಸ್ತೆಗಳು ಸುಂದರವಾಗಿ ಕಾಣಲು ಶಸ್ತ್ರಚಿಕಿತ್ಸೆ ಮಾಡಿದಂತಿದೆ: ಬಿಬಿಎಂಪಿಗೆ ಹೈಕೋರ್ಟ್ ತರಾಟೆ
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಬಿಬಿಎಂಪಿ ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ತಿಳಿಸಿತು. ಗುರುವಾರ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸುವಂತೆಯೂ ಹೇಳಿದೆ.
ಅರ್ಜಿದಾರರ ಮನವಿ ಏನು?: ಬೆಂಗಳೂರಿನ ಬೀದಿಗಳಲ್ಲಿ ಅದರಲ್ಲೂ ಪ್ರಮುಖವಾಗಿ ಸಿಗ್ನಲ್‌ಗಳಲ್ಲಿ ಪೆನ್, ಆಟಿಕೆಗಳು ಸೇರಿದಂತೆ ಮತ್ತಿತರೆ ವಸ್ತುಗಳನ್ನು ಮಾರಾಟ ಮಾಡಲು ಹಾಗೂ ಭಿಕ್ಷಾಟನೆಗೆ ಚಿಕ್ಕ ವಯಸ್ಸಿನ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ. ಇದು ಬಾಲ ನ್ಯಾಯ ಕಾಯ್ದೆ ಹಾಗೂ ಸಂವಿಧಾನದ 21ನೇ ಪರಿಚ್ಛೇದದ ಉಲ್ಲಂಘನೆ. ಆದ್ದರಿಂದ, ಮಕ್ಕಳನ್ನು ವಸ್ತುಗಳ ಮಾರಾಟ ಮಾಡುವ ಕೆಲಸಕ್ಕೆ ಬಳಸಿಕೊಳ್ಳದಂತೆ ಹಾಗೂ ಅವರನ್ನು ಶಾಲೆಗಳಿಗೆ ದಾಖಲಿಸಲು ಅಗತ್ಯ ಕ್ರಮ ಜರುಗಿಸುವಂತೆ ಸರ್ಕಾರ, ಬಿಬಿಎಂಪಿ ಮತ್ತು ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶಿಸಬೇಕೆಂದು ಅರ್ಜಿದಾರರು ಕೋರಿದ್ದರು.
ಇದನ್ನೂ ಓದಿ:ಮಕ್ಕಳ ನಾಪತ್ತೆ ಪ್ರಕರಣ: ಶಾಲಾ ಶಿಕ್ಷಕರಿಗೆ ಹೈಕೋರ್ಟ್ ನೀಡಿದ ಎಚ್ಚರಿಕೆ ಏನು?