ಕರ್ನಾಟಕ

karnataka

ETV Bharat / state

ಕೆಪಿಎಸ್​​ಸಿ ನೇಮಕಾತಿ: ಯಥಾಸ್ಥಿತಿ ಕಾಪಾಡಿಕೊಳ್ಳಲು ಹೈಕೋರ್ಟ್ ನಿರ್ದೇಶನ - High Court direction on KPSC appointment

ಕೆಪಿಎಸ್​​ಸಿ ಸಿದ್ಧಪಡಿಸಿರುವ ಅಂತಿಮ ಪಟ್ಟಿ ಪ್ರಶ್ನಿಸಿ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ನಿರ್ದೇಶಕ ಗಂಜಿ ದತ್ತಾತ್ರೇಯ ಮತ್ತು ಎಪಿಎಂಸಿ ಇಲಾಖೆ ಕಾರ್ಯದರ್ಶಿ ಟಿ.ಎ. ಮಹೇಶ ಮತ್ತಿತರೆ ಅಧಿಕಾರಿಗಳು ಸಲ್ಲಿಸಿರುವ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ನರೇಂದರ್ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

karnataka-high-court-direction-on-kpsc-appointment
ಕೆಪಿಎಸ್​​ಸಿ ನೇಮಕಾತಿ

By

Published : Mar 10, 2022, 7:17 PM IST

ಬೆಂಗಳೂರು:ಕರ್ನಾಟಕ ಲೋಕಸೇವಾ ಆಯೋಗ 1998ನೇ ಸಾಲಿನ ಎ ಮತ್ತು ಬಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಸಂಬಂಧಿಸಿದಂತೆ 2021ರ ಜನವರಿ 30ರಂದು ಸಿದ್ಧಪಡಿಸಿರುವ ನೇಮಕಾತಿ ಅಂತಿಮ ಪಟ್ಟಿ ಕುರಿತು ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ನಿರ್ದೇಶಿಸಿದೆ.

ಕೆಪಿಎಸ್​​ಸಿ ಸಿದ್ಧಪಡಿಸಿರುವ ಅಂತಿಮ ಪಟ್ಟಿ ಪ್ರಶ್ನಿಸಿ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ನಿರ್ದೇಶಕ ಗಂಜಿ ದತ್ತಾತ್ರೇಯ ಮತ್ತು ಎಪಿಎಂಸಿ ಇಲಾಖೆ ಕಾರ್ಯದರ್ಶಿ ಟಿ.ಎ. ಮಹೇಶ ಮತ್ತಿತರೆ ಅಧಿಕಾರಿಗಳು ಸಲ್ಲಿಸಿರುವ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ನರೇಂದರ್ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ಪೀಠ ತನ್ನ ಮಧ್ಯಂತರ ಆದೇಶದಲ್ಲಿ ಅರ್ಜಿದಾರರಿಗೆ ಸಂಬಂಧಿಸಿದಂತೆ ಅಂತಿಮ ಪಟ್ಟಿ ಕುರಿತು ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಕೆಪಿಎಸ್‌ಸಿಗೆ ನಿರ್ದೇಶಿಸಿದೆ. ಇದೇ ವೇಳೆ ಪ್ರಕರಣವನ್ನು ದಿನಂಪ್ರತಿ ವಿಚಾರಣೆ ನಡೆಸುವ ಮೂಲಕ ತ್ವರಿತವಾಗಿ ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿ ವಿಚಾರಣೆ ಮುಂದೂಡಿದೆ.

ಅರ್ಜಿದಾರರ ಮನವಿ:ಹೈಕೋರ್ಟ್ ನೀಡಿರುವ ಆದೇಶಕ್ಕೆ ವಿರುದ್ಧವಾಗಿ ಮತ್ತು ನೈಸರ್ಗಿಕ ನ್ಯಾಯವನ್ನು ಉಲ್ಲಂಘಿಸಿ ಕೆಪಿಎಸ್​​ಸಿ ನೇಮಕಾತಿ ಅಂತಿಮ ಪಟ್ಟಿ ಸಿದ್ಧಪಡಿಸಿದೆ. ಪ್ರಕರಣದಲ್ಲಿ ಎಲ್ಲಾ ವ್ಯಾಜ್ಯದಾರರ ವೈಯಕ್ತಿಕ ಕುಂದುಕೊರತೆಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣವೇ (ಕೆಎಟಿ) ನಿರ್ಧರಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಆದರೆ, ಕೆಎಟಿ ಹೈಕೋರ್ಟ್ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡು ವ್ಯಾಜ್ಯದಾರರ ವೈಯಕ್ತಿಕ ಕುಂದುಕೊರತೆ ಪರಿಶೀಲನೆ ನಡೆಸುವುದಿಲ್ಲ ಎಂದು ಹೇಳಿದೆ. ಆದ್ದರಿಂದ, ಕೆಎಟಿ ಆದೇಶವನ್ನು ರದ್ದುಪಡಿಸಬೇಕು ಮತ್ತು ಕೆಪಿಎಸ್‌ಸಿಯು 2021ರ ಜನವರಿ 30ರಂದು ಪ್ರಕಟಿಸಿರುವ ನೇಮಕಾತಿ ಅಂತಿಮ ಪಟ್ಟಿಯನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಕೆಪಿಎಸ್​​ಸಿ 1998ನೇ ಸಾಲಿನಲ್ಲಿ ಗೆಜೆಟೆಡ್ ಪ್ರೊಬೆಷನರಿಗೆ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿ, 2006ರಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿತ್ತು. 2012ರಲ್ಲಿ ಉದ್ಯೋಗ ವಂಚಿತ ಅಭ್ಯರ್ಥಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಹೀಗಾಗಿ, ಅಕ್ರಮ ನಡೆಸಿ ನೇಮಕಗೊಂಡಿರುವ ಅಭ್ಯರ್ಥಿಗಳನ್ನು ಉದ್ಯೋಗದಿಂದ ವಜಾಗೊಳಿಸಬೇಕು. ಅಕ್ರಮವಾಗಿ ಉದ್ಯೋಗ ಗಿಟ್ಟಿಸಿದವರ ಉತ್ತರ ಪತ್ರಿಕೆಗಳನ್ನು ಮರು ಮೌಲ್ಯಮಾಪನ ಮಾಡಬೇಕು ಹಾಗೂ ಅರ್ಹರನ್ನು ನೇಮಕ ಮಾಡಬೇಕು ಎಂದು ಆದೇಶಿಸಿತ್ತು.

ಅದರಂತೆ ನೇಮಕಾತಿ ಪ್ರಕ್ರಿಯೆಯನ್ನು ರಿ–ಡೂ ಮಾಡಿದ್ದ ಕೆಪಿಎಸ್‌ಸಿ 2021ರ ಜನವರಿ 30ರಂದು ಅಂತಿಮ ನೇಮಕಾತಿ ಪಟ್ಟಿ ಪ್ರಕಟಿಸಿದೆ. ಈ ಪಟ್ಟಿಯಿಂದಾಗಿ ಅರ್ಜಿದಾರರು ಹೊಂದಿರುವ ಹುದ್ದೆಗಳಲ್ಲಿ ಏರುಪೇರಾಗಿತ್ತು. ಈ ಹಿನ್ನೆಲೆಯಲ್ಲಿ, ಅಂತಿಮ ಪಟ್ಟಿಯನ್ನು ಪ್ರಶ್ನಿಸಿ ಅರ್ಜಿದಾರರು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಕೆಎಟಿ ವಜಾಗೊಳಿಸಿತ್ತು.

ಇದನ್ನೂ ಓದಿ:ಅಪ್ಪನ ಸೋಲಿಗೆ ಸೇಡು ತೀರಿಸಿಕೊಂಡ ಹೆಣ್ಮಕ್ಕಳು: ಉತ್ತರಾಖಂಡ ಚುನಾವಣೆಯಲ್ಲಿ ಗೆದ್ದು ಇತಿಹಾಸ!

ABOUT THE AUTHOR

...view details