ಬೆಂಗಳೂರು :ಮದ್ಯ ಸೇವಿಸಿ ಕಿರುಚಾಡುತ್ತ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಕಾರಣಕ್ಕೆ ತನಗೆ ಕಪಾಳಮೋಕ್ಷ ಮಾಡಿದ್ದ ಯುವಕನೊಬ್ಬನನ್ನು ಡ್ರ್ಯಾಗರ್‌ನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದ ಆರೋಪಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ಕೊಲೆ ಆರೋಪದಲ್ಲಿ ಕಳೆದ ಎಂಟು ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿರುವ ಬೆಂಗಳೂರಿನ ಕನವನಹಳ್ಳಿ ಮುಖ್ಯರಸ್ತೆಯ ಕೂಡ್ಲು ಸ್ಲಂ ಕ್ವಾಟರ್ರ್ಸ್ ನಿವಾಸಿ ಕೆ.ನವೀನ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ಹೈಕೋರ್ಟ್ ನ್ಯಾಯಪೀಠ ಈ ಆದೇಶ ಮಾಡಿದೆ.
ತಕ್ಷಣಕ್ಕೆ ಉಂಟಾದ ಜಗಳದಿಂದ ಕೊಲೆ ಘಟನೆ ನಡೆದಿದೆ. ಮೃತನನ್ನು ಕೊಲೆ ಮಾಡುವ ಉದ್ದೇಶ ಆರೋಪಿಗೆ ಇರಲಿಲ್ಲ ಎಂಬುದು ಅರ್ಜಿದಾರರ ಪರ ವಕೀಲರ ವಾದವಾಗಿತ್ತು. ಇದನ್ನು ತಿರಸ್ಕರಿಸಿದ ಹೈಕೋರ್ಟ್, ಆರೋಪಿಯು ಕೊಲೆ ಮಾಡಿ ಫೇಮಸ್ ಆಗಬೇಕೆಂದು ಪದೇ ಪದೇ ಹೇಳುತ್ತಿದ್ದ. ಮೃತ ಯುವಕನ ತಾಯಿ ಹಾಗೂ ಇತರ ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ, ಆರೋಪಿಯು ಯುವಕನ ಕುತ್ತಿಗೆಗೆ ಡ್ರ್ಯಾಗರ್‌ನಿಂದ ಚುಚ್ಚಿದ್ದಾನೆ. ನಂತರ ತಪ್ಪಿಸಿಕೊಂಡು ಓಡಿಹೋಗುತ್ತಿದ್ದಾಗಲೂ ಬೆನ್ನಟ್ಟಿ ಮತ್ತೆ ಕುತ್ತಿಗೆ ಮತ್ತು ಹೊಟ್ಟೆಗೆ ಡ್ಯಾಗರ್‌ನಿಂದ ಇರಿದಿದ್ದಾನೆ ಎಂದು ಪೀಠ ಹೇಳಿದೆ.
ಅಲ್ಲದೆ, ಶವಪರೀಕ್ಷೆಯ ವರದಿ ಪ್ರಕಾರ, ಮೃತದೇಹದ ಮೇಲೆ ಏಳು ಗಂಭೀರ ಗಾಯಗಳಿವೆ. ಆಘಾತ ಮತ್ತು ತೀವ್ರ ರಕ್ತಸ್ರಾವದಿಂದ ವ್ಯಕ್ತಿಯ ಸಾವಾಗಿದೆ. ಈ ಹಂತದಲ್ಲಿ ಉಂಟಾದ ಹಠಾತ್ ಜಗಳದಿಂದ ಘಟನೆ ನಡೆದಿದೆ ಹಾಗೂ ಕೊಲೆ ಮಾಡುವ ಉದ್ದೇಶವು ಆರೋಪಿಗೆ ಇರಲಿಲ್ಲ ಎಂಬುದನ್ನು ಹೇಳಲಾಗದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಜೊತೆಗೆ, ಪ್ರಕರಣದ ಸ್ವರೂಪ ಮತ್ತು ಗಂಭೀರತೆ ಪರಿಗಣಿಸಿದರೆ, ಜಾಮೀನಿನ ಮೇಲೆ ಆರೊಪಿಯನ್ನು ಬಿಡುಗಡೆಗೊಳಿಸಲು ಇದು ಅರ್ಹ ಪ್ರಕರಣವಲ್ಲ ಎಂದು ತೀರ್ಮಾನಿಸಿದ ನ್ಯಾಯಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ :ಅರ್ಜಿದಾರ ಆರೋಪಿ ನವೀನ್ ಮದ್ಯ ವ್ಯಸನಿಯಾಗಿದ್ದ. ಫೇಮಸ್ ಆಗಲು ಒಂದು ಕೊಲೆ ಮಾಡುವುದಾಗಿ ಹಲವು ಸಂದರ್ಭಗಳಲ್ಲಿ ಹೇಳಿಕೊಂಡಿದ್ದ. 2022ರ ಅ. 3ರಂದು ರಾತ್ರಿ 10 ಗಂಟೆ ಸುಮಾರಿಗೆ ಕಿರುಚಾಡುತ್ತಿದ್ದ ಸಾರ್ವಜನಿಕರಿಗೆ ಉಪದ್ರವ ನೀಡುತ್ತಿದ್ದಾಗ ಅನಿಲ್ ಕುಮಾರ್ (24) ಎಂಬಾತ ಬುದ್ಧಿಮಾತು ಹೇಳಿದ್ದ. ಆಗ ಜಗಳ ನಡೆದಿದ್ದು, ನವೀನ್‌ಗೆ ಅನಿಲ್ ಕಪಾಳಮೋಕ್ಷ ಮಾಡಿದ್ದ. ಇದಾದ ಬಳಿಕ ಅ. 9ರಂದು ಸಂಜೆ 6.10ರ ಸಮಯದಲ್ಲಿ ಮನೆಯಿಂದ ಹೊರ ಬಂದಿದ್ದ ಅನಿಲ್ ಮೇಲೆ ನವೀನ್, ಕುತ್ತಿಗೆಗೆ ಡ್ಯಾಗರ್‌ನಿಂದ ಹಲ್ಲೆ ನಡೆಸಿದ್ದ. ಆಗ ಅನಿಲ್ ರಕ್ಷಣೆಗೆ ಮುಂದಾದ ಮೂವರಿಗೆ ಜೀವ ಬೆದರಿಕೆ ಹಾಕಿದ್ದ. ಈ ವೇಳೆ ತಪ್ಪಿಸಿಕೊಂಡು ಓಡುತ್ತಿದ್ದ ಅನಿಲ್ ಬೆನ್ನಟ್ಟಿ ಹಿಡಿದು ಮತ್ತೆ ಕುತ್ತಿಗೆ, ಹೊಟ್ಟೆ ಮತ್ತು ದೇಹದ ಇತರೆ ಭಾಗಗಳಿಗೆ ಡ್ಯಾಗರ್‌ನಿಂದ ಚುಚ್ಚಿ ಪರಾರಿಯಾಗಿದ್ದ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅನಿಲ್ ಮೃತಪಟ್ಟಿದ್ದ.
ಮೃತನ ತಾಯಿಯ ದೂರು ಆಧರಿಸಿ ತನಿಖೆ ನಡೆಸಿದ್ದ ಬೆಳ್ಳಂದೂರು ಠಾಣೆ ಪೊಲೀಸರು ನವೀನನ್ನು ಬಂಧಿಸಿದ್ದರು. ಜಾಮೀನು ಕೋರಿ ಬಂಧಿತ ಹೈಕೋರ್ಟ್ ಮೊರೆ ಹೋಗಿದ್ದ. ವಿಚಾರಣೆ ವೇಳೆ ನವೀನ್ ಪರ ವಕೀಲರು, ಹಿಂದೆ ನಡೆದಿದ್ದ ಜಗಳದ ವೇಳೆ ಮೃತನು ಕಪಾಳಕ್ಕೆ ಹೊಡೆದಿದ್ದ. ದಿಢೀರ್ ಆಗಿ ನಡೆದ ಘಟನೆಯಿಂದ ಅರ್ಜಿದಾರ ಕೊಲೆಗೈದಿದ್ದಾನೆ. ಕೊಲೆ ಮಾಡುವ ಉದ್ದೇಶ ಆರೋಪಿಗೆ ಇರಲಿಲ್ಲ. ಆರೋಪಿಗೆ 22 ವರ್ಷವಾಗಿದ್ದು, 2022ರ ಅ. 10ರಿಂದ ನ್ಯಾಯಾಂಗ ಬಂಧನದಲ್ಲಿದ್ದು, ಅಗತ್ಯ ಷರತ್ತುಗಳನ್ನು ವಿಧಿಸಿ ಜಾಮೀನು ನೀಡುವಂತೆ ಕೋರಿದ್ದರು. ಈ ವಾದವನ್ನು ತಳ್ಳಿಹಾಕಿರುವ ನ್ಯಾಯಪೀಠ ಜಾಮೀನು ನೀಡಲು ನಿರಾಕರಿಸಿ ಅರ್ಜಿ ವಜಾಗೊಳಿಸಿದೆ.