ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧಿಸಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ರಿಟ್ ಅರ್ಜಿಗಳನ್ನು ಹೈಕೋರ್ಟ್ ತ್ರಿಸದಸ್ಯ ಪೀಠ ಇಂದು ವಿಚಾರಣೆ ನಡೆಸಿತು. ಕೆಲಕಾಲ ಸರ್ಕಾರದ ಪರ ಎಜಿ ವಾದ ಆಲಿಸಿದ ಪೀಠ, ಸಮಯಾವಕಾಶ ಕೊರತೆ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಸೋಮವಾರ ಮಧ್ಯಾಹ್ನಕ್ಕೆ ಮುಂದೂಡಿದೆ.
ಈ ಕುರಿತಂತೆ ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ರೇಷಮ್ ಹಾಗೂ ಇತರೆ ವಿದ್ಯಾರ್ಥಿನಿಯರ ಪೋಷಕರು ಸಲ್ಲಿಸಿರುವ 9 ರಿಟ್ ಅರ್ಜಿಗಳು ಹಾಗೂ 20ಕ್ಕೂ ಹೆಚ್ಚು ಮಧ್ಯಂತರ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಆದೇಶವನ್ನು ಸಮರ್ಥಿಸಿಕೊಂಡರು. ಸರ್ಕಾರ ಶಿಕ್ಷಣ ಕಾಯ್ದೆಯ ಸೆಕ್ಷನ್ 133ರ ಅಡಿ ಲಭ್ಯವಿರುವ ಅಧಿಕಾರ ಬಳಸಿ ಫೆಬ್ರವರಿ 5ರಂದು ಸಮವಸ್ತ್ರದ ಕುರಿತಂತೆ ಆದೇಶ ಹೊರಡಿಸಿದೆ. ಸಮವಸ್ತ್ರ ನಿಗದಿಪಡಿಸುವಂತೆ ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ನಿರ್ದೇಶಿಸಿದೆ. ಅದರಂತೆ ಸಮಿತಿಗಳು ಸಮವಸ್ತ್ರ ನಿಗದಿ ಮಾಡಿವೆ.
ಕಳೆದ ಡಿಸೆಂಬರ್ನಲ್ಲೇ ಸಮವಸ್ತ್ರ ಕುರಿತಂತೆ ಸಿಡಿಸಿಗಳು ವಿದ್ಯಾರ್ಥಿಗಳಿಗೆ ಸೂಚಿಸಿವೆ. ಅದನ್ನು ವಿದ್ಯಾರ್ಥಿನಿಯರೂ ಪಾಲಿಸುತ್ತಿದ್ದರು. ಸರ್ಕಾರದ ಆದೇಶದ ಬಳಿಕ ತಗಾದೆ ತೆಗೆದಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಏಕತೆ, ಸಮಭಾವ ಹಾಗೂ ಶಿಸ್ತು ರೂಪಿಸಲು ಸಮವಸ್ತ್ರ ನಿಗದಿಗೆ ಸೂಚಿಸಲಾಗಿದೆಯೇ ಹೊರತು ಬೇರೆ ಉದ್ದೇಶದಿಂದಲ್ಲ. ಇದನ್ನು ಅರ್ಜಿದಾರರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದರು.
ಕಾಲೇಜು ಸಮಿತಿಗಳಿಗೆ ಸಮವಸ್ತ್ರ ನಿಗದಿ ಅಧಿಕಾರ:ಇದೀಗ ವಿವಾದದ ಮೂಲವಾಗಿರುವ ಉಡುಪಿ ಕಾಲೇಜಿನ ಸಿಡಿಸಿ 2013ರಲ್ಲಿಯೇ ಸಮವಸ್ತ್ರದ ಕುರಿತು ನಿರ್ಣಯ ಅಂಗೀಕರಿಸಿದೆ. 2014ರಿಂದಲೂ ಕಾಲೇಜು ಸಮಿತಿಗಳಿವೆ. ಈ ಸಮಿತಿಗಳನ್ನು ಈವರೆಗೆ ಪ್ರಶ್ನೆ ಮಾಡಿಲ್ಲ. ಈಗ ಪ್ರಶ್ನಿಸಲಾಗುತ್ತಿದೆ. ಶಾಲೆಗಳಲ್ಲಿ ನಿರ್ವಹಣಾ ಸಮಿತಿ ಇದೆ. ಅವುಗಳಿಗೆ ಸಮವಸ್ತ್ರ ನಿಗದಿ ಮಾಡುವ ಅಧಿಕಾರವಿದೆ. ಕಾಲೇಜುಗಳಲ್ಲಿ ಈ ಸಮಿತಿಗಳಿಲ್ಲ.
ಹೀಗಾಗಿ ಇಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ರಚಿಸಿದ್ದು, ಅವುಗಳಿಗೆ ಸಮವಸ್ತ್ರ ನಿಗದಿ ಮಾಡಲು ಅಧಿಕಾರ ನೀಡಲಾಗಿದೆ. ಕಾಲೇಜು ಅಭಿವೃದ್ದಿ ಸಮಿತಿಗೆ ಕಾನೂನಿನ ಮಾನ್ಯತೆ ಇದೆ. ಈ ಸಮಿತಿಯಲ್ಲಿ ಹಲವು ಗಣ್ಯ ವ್ಯಕ್ತಿಗಳಿರುತ್ತಾರೆ. ಶಾಸಕರಲ್ಲದೇ, ಉಪನ್ಯಾಸಕರು, ವಿದ್ಯಾರ್ಥಿಗಳು, ಪರಿಶಿಷ್ಟ ಜಾತಿ ಪಂಗಡಗಳ ಸದಸ್ಯರು ಇರುತ್ತಾರೆ. ಅರ್ಜಿದಾರರು ಆರೋಪಿಸಿರುವಂತೆ ಇವು ಶಾಸಕರ ಇಚ್ಛೆಯಂತೆ ನಡೆಯುವುದಿಲ್ಲ ಎಂದು ಸರ್ಕಾರದ ಕ್ರಮ ಸಮರ್ಥಿಸಿಕೊಂಡರು.
ಸಮವಸ್ತ್ರ ಸಂಹಿತೆಗೆ ವಿದ್ಯಾರ್ಥಿನಿಯರು, ಅವರ ಪೋಷಕರು ವಿರೋಧ ವ್ಯಕ್ತಪಡಿಸಿದ್ದರಿಂದ ಸರ್ಕಾರ ಮಧ್ಯಪ್ರವೇಶಿಸಿತು. ಹಾಲಿ ಇರುವ ಸಮವಸ್ತ್ರ ಸಂಹಿತೆ ಬಗ್ಗೆ ಪರಾಮರ್ಶಿಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಹಾಗೆಯೇ, ಸಮವಸ್ತ್ರ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ಅದರಂತೆ ಕಾಲೇಜು ಅಭಿವೃದ್ದಿ ಸಮಿತಿಗಳು ಹಿಂದೆ ಇದ್ದಂತೆಯೇ ಸಮವಸ್ತ್ರ ಸಂಹಿತೆ ಮುಂದುವರಿಸಲು ನಿರ್ಧರಿಸಿವೆ.
ವಿದ್ಯಾವಿಕಾಸ ಯೋಜನೆ ಅಡಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ನೀಡಲಾಗುತ್ತಿದೆ. ಖಾಸಗಿ ಶಾಲೆಗಳಲ್ಲಿ ಆಡಳಿತ ಮಂಡಳಿ ನಿಗದಿಪಡಿಸಿದ ಸಮವಸ್ತ್ರ ಧರಿಸಬೇಕಿದೆ. ಪಿಯು ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ದಿ ಸಮಿತಿ ಸಮವಸ್ತ್ರ ನಿಗದಿಪಡಿಸುತ್ತಿದೆ. ಸಮವಸ್ತ್ರ ನಿಗದಿಪಡಿಸದ ಕಾಲೇಜುಗಳಲ್ಲಿ ಗೌರವಯುತ ಸಮವಸ್ತ್ರ ಧರಿಸುವಂತೆ ಸೂಚಿಸಲಾಗಿದೆ. ಸರ್ಕಾರದ ಆದೇಶವನ್ನು ಅನಗತ್ಯವಾಗಿ ದೊಡ್ಡದು ಮಾಡಲಾಗಿದೆ ಎಂದು ಆರೋಪಿಸಿದರು.
ಸಂವಿಧಾನದ ವಿಧಿ 25(1) ರ ಉಲ್ಲಂಘನೆಯಾಗಿಲ್ಲ:ಅರ್ಜಿದಾರರು ಆರೋಪಿಸಿರುವಂತೆ ಸಂವಿಧಾನದ ವಿಧಿ 25(1) ರ ಉಲ್ಲಂಘನೆಯಾಗಿಲ್ಲ. ಈ ಹಕ್ಕು ಪರಿಪೂರ್ಣ ಹಕ್ಕಲ್ಲ. ಕೋವಿಡ್ ಸಂದರ್ಭದಲ್ಲಿ ದೇವಸ್ಥಾನ, ಚರ್ಚ್, ಮಸೀದಿಗಳೆಲ್ಲವನ್ನೂ ಮುಚ್ಚಲಾಗಿತ್ತು. ಅಲ್ಲಿಗೆ ತೆರಳಿ ಪಾರ್ಥನೆ ಸಲ್ಲಿಸುವುದನ್ನು ನಿರ್ಬಂಧಿಸಲಾಗಿತ್ತು. ಆರೋಗ್ಯದ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿತ್ತು. ಸರ್ಕಾರ ಅಗತ್ಯ ಸಂದರ್ಭಗಳಲ್ಲಿ ಕಾನೂನಿನ ಮೂಲಕ ಈ ಹಕ್ಕನ್ನು ನಿರ್ಬಂಧಿಸಬಹುದು ಎಂದು ಎಜಿ ವಾದ ಮಂಡಿಸಿದರು.
ಪೀಠದಿಂದ ಗಂಭೀರ ಪ್ರಶ್ನೆ:ವಿಚಾರಣೆ ವೇಳೆ ಪೀಠ ಕೆಲವು ಗಂಭೀರ ಪ್ರಶ್ನೆಗಳನ್ನು ಎತ್ತಿತು. ಸಮವಸ್ತ್ರಕ್ಕೆ ಸಂಬಂಧಿಸಿದ ಆದೇಶದಲ್ಲಿ ಹೈಕೋರ್ಟ್ಗಳು ಹಾಗೂ ಸುಪ್ರೀಂಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದ್ದೇಕೆ. ಹಿಜಾಬ್ ಅಗತ್ಯವಲ್ಲ ಎಂದು ಹೇಳಿದ್ದೇಕೆ. ಸರ್ಕಾರದ ಉದ್ದೇಶವೇನು ಎಂದು ಪ್ರಶ್ನಿಸಿತು. ಅಲ್ಲದೇ, ಸಮವಸ್ತ್ರ ಹೇಗಿರಬೇಕು ಎಂಬುದನ್ನು ನಿರ್ಣಯಿಸಲು ಸಿಡಿಸಿಗಳಿಗೆ ಅಧಿಕಾರ ನೀಡಿದ್ದೀರಿ. ಅದರಂತೆ, ಒಂದು ವೇಳೆ ಸಿಡಿಸಿಗಳು ಹಿಜಾಬ್ ಧರಿಸಿ ಬರಲು ಅವಕಾಶ ನೀಡಿದರೆ ಸರ್ಕಾರ ಸಮ್ಮತಿಸುತ್ತದೆಯೇ ಎಂದು ಪ್ರಶ್ನಿಸಿತು.
ಅಲ್ಲದೇ, ಒಂದು ಕಡೆ ಸಮವಸ್ತ್ರದ ಬಗ್ಗೆ ಉನ್ನತ ಸಮಿತಿ ರಚಿಸುತ್ತೇವೆ ಎಂದಿದ್ದೀರಿ, ಮತ್ತೊಂದು ಕಡೆ ಸಮವಸ್ತ್ರದ ಬಗ್ಗೆ ನಿರ್ಧಾರ ಮಾಡುಲು ಸಮಿತಿಗೆ ಅಧಿಕಾರ ನೀಡಿದ್ದೀರಿ. ಇದು ಸರ್ಕಾರದ ವಿರೋಧಾಭಾಸ ನಡೆಯಲ್ಲವೇ ಎಂದು ಪ್ರಶ್ನಿಸಿತು. ಹಾಗೆಯೇ, ಸಿಡಿಸಿಗಳಲ್ಲಿ ಶಾಸಕರನ್ನು ಯಾರು ಸದಸ್ಯರಾಗಿ ನೇಮಿಸುತ್ತಾರೆ. ಅವರೇ ಸಮಿತಿ ಅಧ್ಯಕ್ಷರಾದರೆ ಉಳಿದವರ ಕಥೆಯೇನು. ಶಾಸಕರು ರಾಜಕೀಯವಾಗಿ ನಡೆದುಕೊಳ್ಳುತ್ತಾರೆ. ಅವರ ಚಿಂತನೆಗಳು ಶಿಕ್ಷಣ ಸಂಸ್ಥೆಗಳ ಮೇಲೆ ಪರಿಣಾಣ ಬೀರುವುದಿಲ್ಲವೇ. ಅಂತವರನ್ನು ಸಮಿತಿ ಅಧ್ಯಕ್ಷರಾಗಿ ಮಾಡಬಹುದೇ ಎಂದು ಪ್ರಶ್ನಿಸಿತು.
ಇದನ್ನೂ ಓದಿ:ಸೂಪರ್ ಮಾಡೆಲ್ ಆದ ದಿನಗೂಲಿ ಕಾರ್ಮಿಕ : ಅಷ್ಟಕ್ಕೂ ಯಾರೀತ?
ರಾಜ್ಯ ಸರ್ಕಾರದ ಆದೇಶವನ್ನು ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ಸಮರ್ಥಿಸಿಕೊಂಡರು. ಸರ್ಕಾರದ ಆದೇಶ ಸರಿಯಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ವಾದ ಮಂಡಿಸಿದ ಅವರು, ಧಾರ್ಮಿಕ ಹಕ್ಕುಗಳ ಉಲ್ಲಂಘನೆ ಕುರಿತ ಆರೋಪಕ್ಕೆ ಉತ್ತರಿಸಲು ಕಾಲಾವಕಾಶ ಕೋರಿದರು. ವಾದ ಆಲಿಸಿದ ತ್ರಿಸದಸ್ಯ ಪೀಠ ಸೋಮವಾರಕ್ಕೆ ವಿಚಾರಣೆ ಮುಂದೂಡಿತು.