ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರಬೇಕಾದರೆ ವೇಗವಾಗಿ ಸೋಂಕಿತರ ಪರೀಕ್ಷೆ ನಡೆಸುವುದು ಅನಿರ್ವಾಯ. ಹೀಗಾಗಿಯೇ, ರಾಜ್ಯದ ಪ್ರತಿ ಆಸ್ಪತ್ರೆಯಲ್ಲೂ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ನಿಗದಿತ ದರ ವಿಧಿಸಿ ಕೋವಿಡ್ ಪರೀಕ್ಷೆ ಕೈಗೊಳ್ಳಲಾಗುತ್ತಿದೆ. ಹೆಚ್ಚು ಹೆಚ್ಚು ಕೋವಿಡ್ ಪರೀಕ್ಷೆ ಕೈಗೊಂಡರೆ, ವರದಿಗನುಸಾರವಾಗಿ ಕೋವಿಡ್ ನಿಯಮವನ್ನು ಕಟ್ಟುನಿಟ್ಟು ಮಾಡಲಾಗುತ್ತದೆ. ಈ ಮೂಲಕ ಕೋವಿಡ್ ನಿಯಂತ್ರಣ ಸಾಧ್ಯ ಎನ್ನಲಾಗ್ತಿದೆ.
ಕೋವಿಡ್ ನಿಯಂತ್ರಿಸಲು ವ್ಯಾಕ್ಸಿನೇಷನ್ ಇದ್ದರೂ ಸಹ ಕೋವಿಡ್ ಪರೀಕ್ಷೆ ಹೆಚ್ಚು ಮಾಡಿದ್ದಷ್ಟು ಸೋಂಕು ನಿಯಂತ್ರಿಸಲು ಸಹಾಯವಾಗುತ್ತದೆ. ಕಳೆದ 2-3 ವಾರದಿಂದ ಕೊರೊನಾ ಏರಿಕೆ ಆಗುತ್ತಿರುವ ಬೆನ್ನಲ್ಲೇ ಆರ್ಟಿ-ಪಿಸಿಆರ್ ಪರೀಕ್ಷೆ ಹೆಚ್ಚಿಸಲಾಗಿದೆ.
ಈಗಾಗಲೇ ಸರ್ಕಾರಿ- ಖಾಸಗಿ ಆಸ್ಪತ್ರೆ, ಬಸ್ ನಿಲ್ದಾಣ, ರೈಲ್ವೆ, ಮೆಟ್ರೋ ನಿಲ್ದಾಣ, ಮಾರುಕಟ್ಟೆ ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿ ಕ್ಯಾಂಪ್ ಹಾಕಿ ಪರೀಕ್ಷೆ ನಡೆಸಲಾಗುತ್ತಿದೆ.
ಕಡಿಮೆ ಸಮಯದಲ್ಲಿ ಅತಿಹೆಚ್ಚು ಜನರ ವರದಿಗಾಗಿ ಪೂಲಿಂಗ್ ಟೆಸ್ಟ್ ಮೊರೆ:
ನಿತ್ಯ ಒಂದು ಲಕ್ಷ ಕೋವಿಡ್ ಟೆಸ್ಟ್ ಮಾಡಲು ಗುರಿ ಹಾಕಿಕೊಂಡಿರುವ ಆರೋಗ್ಯ ಇಲಾಖೆಯು ಸಮಯ ಉಳಿತಾಯದ ಜತೆಗೆ ಹೆಚ್ಚು ಜನರನ್ನು ಪರೀಕ್ಷಿಸಲು ಪೂಲಿಂಗ್ ಟೆಸ್ಟ್ ಮಾಡುವಂತೆ ಆದೇಶಿಸಿದೆ. ಜಿಲ್ಲಾವಾರು ಗುರಿಯನ್ನ 1 ಲಕ್ಷಕ್ಕೆ ಏರಿಸಿದ ಬಳಿಕ ವಿವಿಧ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಮತ್ತೆ ಹೆಚ್ಚಳ ಕಂಡುಬಂದಿದೆ.
ಏನಿದು ಪೂಲಿಂಗ್ ಟೆಸ್ಟ್?
ಪೂಲಿಂಗ್ ಟೆಸ್ಟ್ (Pooling test) ಅಂದರೆ ಒಂದು ಮನೆಯಲ್ಲಿ ಐವರು ಸದಸ್ಯರು ಇದ್ದರೆ ಅವರೆಲ್ಲರ ಸ್ಯಾಂಪಲ್ಸ್ ಸಂಗ್ರಹಿಸಿ, ಪರೀಕ್ಷೆಯ ವೇಳೆ ಎಲ್ಲಾ ಸ್ಯಾಂಪಲ್ಸ್ ಅನ್ನು ಮಿಶ್ರಣ ಮಾಡಲಾಗುತ್ತದೆ. ಇದರಲ್ಲಿ ನೆಗೆಟಿವ್ ಬಂದರೆ ಆ ಐದು ಜನರ ವರದಿ ನೆಗಟಿವ್ ಎಂದು ನೀಡಲಾಗುತ್ತದೆ. ಒಂದು ವೇಳೆ ಪಾಸಿಟಿವ್ ಬಂದರೆ ಪುನಃ ಪ್ರತ್ಯೇಕವಾಗಿ ಎಲ್ಲರ ಸ್ಯಾಂಪಲ್ ಪಡೆದು ಪರೀಕ್ಷೆ ಮಾಡಲಾಗುತ್ತದೆ.
ಈ ರೀತಿ ಮಾಡುವುದರಿಂದ ಸಮಯ ಉಳಿತಾಯದ ಜತೆಗೆ ಹೆಚ್ಚು ಜನರ ಕೋವಿಡ್ ಪರೀಕ್ಷೆ ಮಾಡಲು ಸಹಾಯವಾಗುತ್ತದೆ. ಆದರೆ, ಎಸ್ಎಆರ್ಐ ಮತ್ತು ಐಎಲ್ಐ ಇರುವ ಪ್ರಕರಣಗಳಲ್ಲಿ ಆರ್ಟಿಪಿಸಿಆರ್ ಪರೀಕ್ಷೆ ಪ್ರತ್ಯೇಕವಾಗಿ ಮಾಡುವುದು ಕಡ್ಡಾಯವಾಗಿದೆ.