ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಬೆಂಗಳೂರಿನ ಏರೋಸ್ಪೇಸ್ ಪಾರ್ಕ್‌ನಲ್ಲಿ 445 ಕೋಟಿ ಬಂಡವಾಳ ಹೂಡಿಕೆ ಮಾಡಿ 20 ಸಾವಿರ ಉದ್ಯೋವಕಾಶ ಸೃಷ್ಟಿಸುವುದಾಗಿ ತಿಳಿಸಿತ್ತು. ಇದಕ್ಕಾಗಿ 15 ಎಕರೆ ಜಮೀನು ಪಡೆದು 9 ವರ್ಷವಾದರೂ ಕಿಂಚಿತ್ತು ಪ್ರಗತಿಕಾರ್ಯ ಮಾಡದ ಮಾಹಿತಿ ತಂತ್ರಜ್ಞಾನ ಕಂಪನಿ ಜಸ್ಟ್ ಡಯಲ್ ಲಿಮಿಟೆಡ್‌ಗೆ ಮಂಜೂರಾಗಿದ್ದ ಭೂಮಿ ಹಿಂಪಡೆದಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಭೂ ಮಂಜೂರಾತಿಯನ್ನು ರದ್ದುಪಡಿಸಿದ್ದ ಕೆಐಎಡಿಬಿ ಆದೇಶ ಅನೂರ್ಜಿತಗೊಳಿಸಲು ಕೋರಿ ಮೆರ್ಸಸ್ ಜಸ್ಟ್ ಡಯಲ್ ಲಿಮಿಟೆಡ್ ಸಲ್ಲಿಸಿದ್ದ ತಕರಾರು ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ತೀರ್ಪು ನೀಡಿದೆ.
ಪ್ರಕರಣದಲ್ಲಿ ಕೆಐಎಡಿಬಿ 2014ರಲ್ಲೇ 15 ಎಕರೆ ಜಮೀನು ಮಂಜೂರು ಮಾಡಿದ್ದು, ಅದನ್ನು ಅರ್ಜಿದಾರ ಕಂಪನಿ ಸ್ವಾಧೀನಪಡಿಸಿಕೊಂಡಿದೆ. ಒಪ್ಪಂದ ಪ್ರಕಾರ ಸ್ವಾಧೀನ ಹೊಂದಿದ ದಿನದಿಂದ ಮೂರು ವರ್ಷದೊಳಗೆ ಉದ್ದೇಶಿತ ಯೋಜನೆ ಜಾರಿಗೊಳಿಸಬೇಕು. ಆದರೆ, ಅರ್ಜಿದಾರ ಕಂಪನಿ ಭೂಮಿ ಮಂಜೂರಾಗಿ 9 ವರ್ಷಗಳು ಕಳೆದರೂ ಒಂದು ಇಂಚು ನೆಲವನ್ನೂ ಅಭಿವೃದ್ಧಿಪಡಿಸಿಲ್ಲ. 2023ರ ಅ.10ರಂದು ತಡೆಗೋಡೆ ನಿರ್ಮಾಣ, ಭೂಮಿ ಅಗೆಯುವ ಕೆಲಸ ಮಾಡಿದೆ. ಇದು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂಬುದಾಗಿ ಬಿಂಬಿಸಿ ಭೂ ಮಂಜೂರಾತಿ ಆದೇಶ ರದ್ದು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವ ತಂತ್ರವಾಗಿದೆ ಎಂದು ಪೀಠ ತಿಳಿಸಿದೆ.
ಅಲ್ಲದೆ, ತಮಗೆ ಮಂಜೂರಾದ ಭೂಮಿಗೆ ವಾಹನ ಪ್ರವೇಶಿಸಲು ಅನುಕೂಲವಾಗುವಂತೆ ರಸ್ತೆ ನಿರ್ಮಾಣ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳನ್ನು ಕೆಐಎಡಿಬಿ ಕಲ್ಪಿಸದ ಕಾರಣ ಕಾಲಮಿತಿಯಲ್ಲಿ ಯೋಜನೆ ಅನುಷ್ಠಾನ ಮಾಡಿಲ್ಲ. ಈ ವಿಚಾರವನ್ನು 2017ರಲ್ಲಿ ಗಮನಕ್ಕೆ ತರಲಾಗಿತ್ತು. ಮೂಲಸೌಕರ್ಯ ಕಲ್ಪಿಸಿದ್ದರೆ ಕಾಲಮಿತಿಯಲ್ಲಿ ಜಾಗದಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಳಿಸಲಾಗುತ್ತಿತ್ತು. ಭೂ ಮಂಜೂರಾತಿ ಆದೇಶ ರದ್ದುಪಡಿಸುವ ಮುನ್ನ ತನ್ನ ಗಮನಕ್ಕೆ ತರಲಿಲ್ಲ ಎಂಬ ಅರ್ಜಿದಾರ ಕಂಪನಿಯ ವಾದವನ್ನು ನ್ಯಾಯಪೀಠ ತಿರಸ್ಕರಿಸಿದೆ.